»   » ಚಿತ್ರರಂಗದ ಹೂಳೆತ್ತಲು ನಿರ್ದೇಶಕರುಗಳ ಪಣ

ಚಿತ್ರರಂಗದ ಹೂಳೆತ್ತಲು ನಿರ್ದೇಶಕರುಗಳ ಪಣ

Posted By:
Subscribe to Filmibeat Kannada

ಗುಣಾತ್ಮಕ ಚಿತ್ರಗಳ ಕೊರತೆಯಿದೆ ನಿಜ ಆದರೆ ನಮ್ಮಲ್ಲಿ ಉತ್ತಮ ತಂತ್ರಜ್ಞರ ಕೊರತೆಯಿಲ್ಲ. ಚಿಂತಾಜನಕ ಸ್ಥಿತಿಯಲ್ಲಿರುವ ಕನ್ನಡ ಚಲನಚಿತ್ರೋದ್ಯಮ ಉಳಿಸಿ ಬೆಳೆಸಬೇಕಾದರೆ, ಸದಭಿರುಚಿ ಚಿತ್ರಗಳು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಗುಣಾತ್ಮಕ ಚಿತ್ರಗಳನ್ನು ನಿರ್ಮಿಸುವವರಿಗೆ 15 ಲಕ್ಷ ರುವರೆಗೂ ಸಹಾಯ ಧನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜಯರಾಮರಾಜೇ ಅರಸ್ ಘೋಷಿಸಿದರು.

ಚಿಂತಾಮಣಿ ತಾಲೂಕಿನ ಕೈವಾರ ಯೋಗಿನಾರಾಯಣ ಸಭಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಏರ್ಪಡಿಸಿದ್ದ ಚಲನಚಿತ್ರ ಕಥಾ ಮಂಥನ ಶಿಬಿರದಲ್ಲಿ ಅರಸ್ ಅವರು ಮಾತನಾಡುತ್ತಿದ್ದರು. ಸದಭಿರುಚಿ ಚಿತ್ರಗಳನ್ನು ಪ್ರದರ್ಶಿಸಲು ಚಿತ್ರಮಂದಿರದ ಮಾಲೀಕರು ಮುಂದೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಐದು ವಿಭಾಗ ಮಟ್ಟದಲ್ಲಿ ಸರ್ಕಾರದ ಚಲನಚಿತ್ರ ಕಟ್ಟಡಗಳ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಹೊಸ ಚಲನಚಿತ್ರ ನೀತಿ: ಆರ್ಟ್ ಸಿನಿಮಾ, ಪ್ಯಾರಲಲ್ ಸಿನಿಮಾ, ಸದಭಿರುಚಿ ಚಿತ್ರಗಳ ನಿರ್ಮಾಣ, ಪ್ರದರ್ಶನ ಹಾಗೂ ಸೌಲಭ್ಯ ನೀಡಿಕೆ ಬಗ್ಗೆ ಹೆಚ್ಚಿನ ಮಹತ್ವ ಹೊಂದಿರುವ ನೂತನ ಚಲನಚಿತ್ರ ನೀತಿ ರೂಪಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳ ಅಂಕಿತ ಬೀಳಬೇಕು. ಕಥೆ ಇಲ್ಲದಿದ್ದರೆ ಚಿತ್ರವನ್ನು ಜನ ಹೇಗೆ ನೋಡುತ್ತಾರೆ. ನಿರ್ಮಾಪಕರು ಹೆಚ್ಚೆಚ್ಚು ಕಥೆಗೆ ಮಹತ್ವ ನೀಡಿದರೆ, ವೀಕ್ಷಕರ ಸಂಖ್ಯೆ ತಾನೇ ತಾನಾಗಿ ಹೆಚ್ಚಾಗುತ್ತದೆ ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರು ಸದಭಿರುಚಿ ಚಿತ್ರಗಳ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಉತ್ತಮ ಕೆಲಸ ಮಾಡುತ್ತಿದ್ದು ,ಕಾರ್ಯಾಗಾರಗಳು, ತರಬೇತಿ ಶಿಬಿರಗಳನ್ನು ಏರ್ಪಡಿಸಿ, ಉತ್ತಮ ಚಿತ್ರ ಬೆಳವಣಿಗೆಗೆ ಬೇಕಾದ ವಾತಾವರಣ ಮೂಡಿಸುತ್ತಿದೆ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗಾಭರಣ, ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಹಾಗೂ ಅಬ್ದುಲ್ ರೆಹಮಾನ್ ಪಾಷ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada