»   »  ಅಶೋಕ್ ಪಾಟೀಲರ ಸಿನಿ ಕನಸುಗಳು!

ಅಶೋಕ್ ಪಾಟೀಲರ ಸಿನಿ ಕನಸುಗಳು!

By: * ಜಯಂತಿ
Subscribe to Filmibeat Kannada

ಕಳೆದ ವಾರ ಬಿ.ಸಿ.ಪಾಟೀಲರ 'ಸೆಲ್ಯೂಟ್' ಚಿತ್ರದ ಧ್ವನಿಸುರುಳಿ ಬಿಡುಗಡೆಯಾಯ್ತಲ್ಲ; ಬೆಂಗಳೂರಿನ ಸೆಂಚುರಿ ಕ್ಲಬ್‌ನಲ್ಲಿ ನಡೆದ ಆ ಗೀತಸಂಭ್ರಮದ ಕೇಂದ್ರಬಿಂದು ಅಶೋಕ್ ಪಾಟೀಲ್! ಅರೆ, ಅಶೋಕ್ ಬೆಂಗಳೂರಿಗೆ ಬಂದದ್ದು ಯಾವಾಗ? ಅವರೀಗ ಏನು ಮಾಡುತ್ತಿದ್ದಾರೆ? ಹೊಸ ಸಿನಿಮಾ ಯಾವುದು? ಒಂದರ ಹಿಂದೊಂದು ಪ್ರಶ್ನೆಗಳು. ಅಶೋಕ್ ತಣ್ಣಗೆ ನಕ್ಕರು.

ಐ ಲವ್ ಯು ಎನ್ನುವ ಸಿನಿಮಾದ ಚಿತ್ರಕಥೆ ಸಿದ್ಧಪಡಿಸಿದ್ದೇನೆ. ಮಾತೇ ಇಲ್ಲದ ಮೂಕಿ ಚಿತ್ರವದು. ನನ್ನ ಮಹತ್ವಾಕಾಂಕ್ಷೆಯ ಸಿನಿಮಾ. ಉಳಿದಂತೆ ಆರಾಧನಾ ಎನ್ನುವ ಇನ್ನೊಂದು ಸ್ಕ್ರಿಪ್ಟ್ ಕೂಡ ಸಿದ್ಧಪಡಿಸಿರುವೆ. ಟ್ಯಾಕ್ಸಿ ಡ್ರೈವರ್ ಎನ್ನುವ ಮತ್ತೊಂದು ಚಿತ್ರಕಥೆ ಮುಗಿಯುವ ಹಂತದಲ್ಲಿದೆ.

ಸಿನಿಮಾ ಯಾವುದು ಮೊದಲಿಗೆ ಬರುತ್ತೋ ಪಾಟೀಲರಿಗೂ ಸ್ಪಷ್ಟವಿಲ್ಲ. ಆದರೆ ಅವರದೊಂದೇ ನಂಬಿಕೆ- ಈ ಸಲ ಕಲ್ಲು ಹೊಡೆದರೆ ಹಣ್ಣು ಬೀಳಲೇಬೇಕು! ಅಂದರೆ, ಸಿನಿಮಾ ಮಾಡಿದರೆ ಅದು ಗೆಲ್ಲಲೇಬೇಕು!

ಮೊದಲಿಗೆ ಟ್ಯಾಕ್ಸಿ ಡ್ರೈವರ್ ಚಿತ್ರ ಮಾಡುವ ಆಸೆ ಅಶೋಕರದ್ದು. ಅಂದಹಾಗೆ, ಇದು ಹಿಂದಿಚಿತ್ರ. ಎಲ್ಲ ಅಂದುಕೊಂಡಂತೆ ಆದರೆ ಸದ್ಯದಲ್ಲೇ ಟ್ಯಾಕ್ಸಿ ಡ್ರೈವರ್ ಸೆಟ್ಟೇರಲಿದೆ. ಇಲ್ಲದೆ ಹೋದರೆ ಇದ್ದೇ ಇದೆ ಕನ್ನಡದ ಹಿತ್ತಲು. ಅಣ್ಣನ ಬೆಂಬಲವಿದೆ. ಶಾಪ, ಜೋಕ್‌ಫಾಲ್ಸ್ ಚಿತ್ರಗಳಲ್ಲಿ ಗಳಿಸಿದ ಹೆಸರಿದೆ, ಅನುಭವವಿದೆ.

ಅಂದಹಾಗೆ, ಜೋಕ್‌ಫಾಲ್ಸ್ ನಂತರ ಕಿರಿ ಪಾಟೀಲರು ಒಮ್ಮೆಗೇ ಚಿತ್ರೋದ್ಯಮದಿಂದ ಕಾಣೆಯಾಗಲು ಏನು ಕಾರಣ? ಕೌಟುಂಬಿಕ ಸಮಾಚಾರ ಎಂದು ಮತ್ತೆ ನಕ್ಕರು ಅಶೋಕ್. ಮದುವೆಯಾಯಿತು. ಅಪ್ಪನಾದದ್ದೂ ಆಯಿತು. ಮಗಳು ಶಿವಾನಿಗಾಗಿ ಸಾಕಷ್ಟು ಸಮಯ ಮೀಸಲಿಡಬೇಕಾಯಿತು. ಶಿವಾನಿಗೀಗ ಎರಡೂವರೆ ವರ್ಷ ವಯಸ್ಸು. ಮಗಳು ಸ್ಪಷ್ಟವಾಗಿ ಹೆಜ್ಜೆ ಊರಲು ಆರಂಭಿಸುತ್ತಿರುವಂತೆ ಅಪ್ಪನಲ್ಲಿ ಮತ್ತೆ ಸಿನಿಮಾ ಕನಸುಗಳು ಅರಳತೊಡಗಿವೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada