»   » ಸಿದ್ದಲಿಂಗಯ್ಯನವರ ಬೆಳ್ಳಿಹೆಜ್ಜೆ ದರ್ಶನ

ಸಿದ್ದಲಿಂಗಯ್ಯನವರ ಬೆಳ್ಳಿಹೆಜ್ಜೆ ದರ್ಶನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಸಿದ್ದಲಿಂಗಯ್ಯ ಅವರ ಸಿನಿ ಬದುಕಿನ ಹಲವು ಮಜಲುಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ 'ಬೆಳ್ಳಿ ಹೆಜ್ಜೆ ' ಕಾರ್ಯಕ್ರಮ ಫೆ. 13 ರಂದು ನಗರದ ಬಾದಾಮಿ ಹೌಸ್ ನಲ್ಲಿ ನಡೆಯಲಿದೆ. ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ಮೇಯರ್ ಮುತ್ತಣ್ಣ ಮುಂತಾದ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿದ ಕೀರ್ತಿ ಸಿದ್ದಲಿಂಗಯ್ಯ ಅವರಿಗೆ ಸಲ್ಲುತ್ತದೆ. ಹಿರಿಯ ಜೀವಿಯ ಸಿನಿ ಬದುಕಿನ ಪಯಣದ ಬಗ್ಗೆ ತಿಳಿಯಲು ಇದೊಂದು ಉತ್ತಮ ಅವಕಾಶ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಯೋಜನೆಯ ವಿಶಿಷ್ಟ ಕಾರ್ಯಕ್ರಮ ಬೆಳ್ಳಿಹೆಜ್ಜೆ. ಸಿನಿ ಪ್ರಪಂಚದ ಹಿರಿಯ ಕಲಾವಿದರ ಬದುಕಿನ ತವಕ ತಲ್ಲಣ, ನೋವು ನಲಿವುಗಳ ಸಮಗ್ರ ಚಿತ್ರಣ ಹಾಗೂ ಸಂವಾದವನ್ನು ಬೆಳ್ಳಿ ಹೆಜ್ಜೆಯಲ್ಲಿ ಕಾಣಬಹುದು. ಫೆ. 13 ರಂದು ಸಂಜೆ 4.30 ಸುಮಾರಿಗೆ ಬಾದಾಮಿ ಹೌಸ್ ನ ಪ್ರಿಯ ದರ್ಶಿನಿ ಹಾಲ್ ನಲ್ಲಿ ಸಿದ್ದಲಿಂಗಯ್ಯ ಅವರಿಗೆ ಆತ್ಮೀಯ ಸನ್ಮಾನ ಹಾಗೂ ಕುಶಲ ಮಾತುಕತೆ ಸಹಾ ಇರುತ್ತದೆ .

ನವಜ್ಯೋತಿ ಸ್ಟುಡಿಯೋದಲ್ಲಿ ಫೋರ್ ಬಾಯ್ ಆಗಿ ಕೆಲ್ಸಕ್ಕೆ ಸೇರಿದ ಸಿದ್ದಲಿಂಗಯ್ಯ ಅವರು ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲಕ್ಕೆ ಬಂದವರು. ಶಂಕರ್ ಸಿಂಗ್ ಅವರಿಗೆ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನದ ಎಬಿಸಿಡಿ ಕಲಿತರು. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ತೆಲುಗು, ತಮಿಳು ಭಾಷೆಗಳ ಪರಿಚಯವಾಯಿತು. ವಿಠಲಾಚಾರ್ಯರ ಗರಡಿ ಸೇರಿ ನಟನೆಯ ರುಚಿಯನ್ನು ಹತ್ತಿಸಿಕೊಂಡರು.

ಮೇಯರ್ ಮುತ್ತಣ್ಣ,ದೂರದ ಬೆಟ್ಟ, ನಾರದ ವಿಜಯ, ಪ್ರೇಮ ಪರ್ವ, ಪ್ರೇಮ ಗಂಡೆ, ಅಜೇಯ, ಸಂಭವಾಮಿ ಯುಗೇ ಯುಗೇ, ಬಾರೇ ನನ್ನ ಮುದ್ದಿನ ರಾಣಿ, ಬಾ ನನ್ನ ಪ್ರೀತಿಸು, ಭೂತಾಯಿ ಮಕ್ಕಳು, ಪ್ರೇಮ ಪ್ರೇಮ ಪ್ರೇಮ ಅವರು ನಿರ್ದೇಶಿಸಿದ ಚಿತ್ರಗಳು. ತಮ್ಮ ಮಗ ಮುರಳಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಒಂದೆರಡು ಯಶಸ್ವಿ ಚಿತ್ರಗಳನ್ನು ಕೊಟ್ಟ ನಂತರ, ಮುರಳಿ ತಮಿಳಿನಲ್ಲಿ ಬೇಡಿಕೆ ನಟನಾಗಿ ಅಲ್ಲೇ ನೆಲೆಯೂರಿದ್ದು ಈಗ ಇತಿಹಾಸ.

ರಾಜ್ ಕುಮಾರ್ ಅವರ ಬಹು ಜನಪ್ರಿಯ ಹಾಗೂ ಯಶಸ್ವಿ ಚಿತ್ರ ಬಂಗಾರದ ಮನುಷ್ಯ, ವಿಷ್ಣು, ಲೋಕೇಶ್, ಎಂಪಿ ಶಂಕರ್ ಗೆ ಹೆಸರು ತಂದುಕೊಟ್ಟ ಭೂತಯ್ಯನ ಮಗ ಅಯ್ಯು ಚಿತ್ರವನ್ನು ತೆರೆದುತಂದ ಸಿದ್ದಲಿಂಗಯ್ಯ ನವರು ಕಾದಂಬರಿ ಆಧಾರಿತ ಚಿತ್ರಗಳನ್ನು ಸಮರ್ಥವಾಗಿ ಪ್ರೇಕ್ಷಕರ ಮುಂದಿಟ್ಟು ಯಶಸ್ವಿಯಾದವರು. ಸಿದ್ದಲಿಂಗಯ್ಯ ಆವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಲಭಿಸಿದೆ. ಸಿದ್ದಲಿಂಗಯ್ಯ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಅವರ ಮಾತುಗಳಲ್ಲಿ ಕೇಳಿದರೆ ಚೆನ್ನ ಅಲ್ಲವೇ. ತಪ್ಪದೇ ಬನ್ನಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada