»   »  'ಮಗಧೀರ'ನ ವಿರುದ್ಧ ತಿರುಗಿ ಬಿದ್ದ ಕನ್ನಡ ನಿರ್ಮಾಪಕ

'ಮಗಧೀರ'ನ ವಿರುದ್ಧ ತಿರುಗಿ ಬಿದ್ದ ಕನ್ನಡ ನಿರ್ಮಾಪಕ

Subscribe to Filmibeat Kannada

''ಪರಭಾಷಾ ಚಿತ್ರ ವಿತರಕರ ಹಾವಳಿಯಿಂದ ಕನ್ನಡ ನೆಲದಲ್ಲಿ ಕನ್ನಡ ಚಿತ್ರಗಳಿಗೆ ತೊಂದರೆಯಾಗಿದೆ. ಕನ್ನಡ ಚಿತ್ರ ನಿರ್ಮಾಪಕ ಬೀದಿಗೆ ಬರುವಂತಾಗಿದೆ'' ಎಂದು ಆಗ್ರಹಿಸಿ ಕನ್ನಡ ಚಿತ್ರ ನಿರ್ಮಾಪಕರ ಸಂಘ ಕನ್ನಡ ಭಾಷೆ ಮತ್ತು ಕನ್ನಡ ಚಿತ್ರ ನಿರ್ಮಾಪಕನನ್ನು ಉಳಿಸಿಕೊಳ್ಳಲು ಮಂಗಳವಾರ ಪ್ರತಿಭಟನಾ ಧರಣಿಗೆ ಮುಂದಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ(ಕೆಎಫ್ ಸಿಸಿ) ಬಹುತೇಕ ಕನ್ನಡ ಚಿತ್ರ ನಿರ್ಮಾಪಕರು ಪ್ರತಿಭಟನೆಗಾಗಿ ಆಗಮಿಸಿದ್ದಾರೆ.

ತೆಲುಗಿನ 'ಮಗಧೀರ' ಚಿತ್ರ ಕೆಎಎಫ್ ಸಿಸಿ ನಿಯಮಗಳನ್ನು ಉಲ್ಲಂಘಿಸಿದೆ. 21ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ 50 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ ಎಂದು ಚಿತ್ರ ನಿರ್ಮಾಪಕರ ಸಂಘ ಆರೋಪಿಸಿದೆ. 'ಮಗಧೀರ'ಚಿತ್ರದ ವಿತರಕ ವಿಜಯಕುಮಾರ್ ಹೆಚ್ಚುವರಿಯಾಗಿ ಮೊದಲ ವಾರದಲ್ಲಿ ಒಂದು ಹಾಗೂ ಎರಡನೇ ವಾರದಲ್ಲಿ ಹನ್ನೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

''ಕೆಎಫ್ ಸಿಸಿಯ ಸದಸ್ಯರಾಗಿದ್ದೂ ವಿಜಯ್ ಕುಮಾರ್ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಕೆಎಫ್ ಸಿಸಿ ನಿಯಮಗಳ ಪ್ರಕಾರ, ಬೆಂಗಳೂರಿನಲ್ಲಿ ಪರಭಾಷಾ ಚಿತ್ರವೊಂದು ಕೇವಲ 17 ಚಿತ್ರಮಂದಿರಗಳಲ್ಲಿ ಹಾಗೂ ರಾಜ್ಯದ ಇತರೆಡೆ 4 ಚಿತ್ರಮಂದಿರಗಳಲ್ಲಿ ಮಾತ್ರಬಿಡುಗಡೆಯಾಗಬೇಕು. ಆದರೆ ವಿತರಕ ವಿಜಯ್ ಕುಮಾರ್ ಈ ಎಲ್ಲಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ನಿರ್ಮಾಪಕರ ಸಂಘ ಆಗ್ರಹಿಸಿತು.

ತೆಲುಗಿನ ಮತ್ತೊಂದು ಚಿತ್ರ 'ಜಲ್ಸಾ' ಬಿಡುಗಡೆಯಾದಾಗಲೂ ವಿಜಯ್ ಕುಮಾರ್ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದರು. ಮಗಧೀರ ಚಿತ್ರ ಹಕ್ಕುಗಳನ್ನು 1.5 ಕೋಟಿ ರು.ಗಳಿಗೆ ವಿಜಯ್ ಕುಮಾರ್ ಕೊಂಡುಕೊಂಡಿದ್ದು ಅದರಿಂದ 4.5 ಕೋಟಿ ರು. ಲಾಭ ಗಳಿಸಿದ್ದಾರೆ ಎನ್ನುತ್ತವೆ ಮೂಲಗಳು. ನಿರ್ಮಾಪಕರಾದ ಜೈ ಜಗದೀಶ್, ಕೆಸಿಎನ್ ಚಂದ್ರಶೇಖರ್ ಸೇರಿಂದಂತೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಜೋಸೈಮನ್ ಮತ್ತು ಮಧುಸೂಧನ ರೆಡ್ಡಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು (ಆ.11) ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada