»   »  ಆರ್ಥಿಕ ಬಿಕ್ಕಟ್ಟು ಮೆಟ್ಟಿ ನಿಂತ ನಾನು ಗಾಂಧಿ

ಆರ್ಥಿಕ ಬಿಕ್ಕಟ್ಟು ಮೆಟ್ಟಿ ನಿಂತ ನಾನು ಗಾಂಧಿ

Subscribe to Filmibeat Kannada

*ಜಯಂತಿ

ಸಿನಿಮಾ ರಿಸೆಷನ್ನಿನ ಕಾಲದಲ್ಲೂ ನಾನು ಗಾಂಧಿ ಹಾಫ್ ಸೆಂಚುರಿ ಬಾರಿಸಿದೆ. ಅರ್ಥಾತ್ ಐವತ್ತು ದಿನ ಓಡಿದೆ. ನಂಜುಂಡೇಗೌಡರು ಈ ಸಂತೋಷವನ್ನು ಊಟ ಹಾಕಿಸುವ ಮೂಲಕ ಹಂಚಿಕೊಂಡರು. ಊಟದ ನಡುವೆ ನೆಂಚಿಕೊಳ್ಳಲು ಪುಕ್ಕಟೆ ಸಲಹೆಗಳನ್ನು ಕೊಟ್ಟರು. ಅವುಗಳ ಸಣ್ಣ ಪಟ್ಟಿ ಹೀಗಿದೆ.

1. ಮಕ್ಕಳ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಮಕ್ಕಳ ಸಮಿತಿಯೇ ಇರಬೇಕು.
2. ಚಿತ್ರಮಂದಿರಗಳು ಮಕ್ಕಳ ಸಿನಿಮಾಗೆ ಬಾಡಿಗೆಯಲ್ಲಿ ರಿಯಾಯಿತಿ ಕೊಡಬೇಕು.
3. ಸಿನಿಮಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತಂದು, ಬೆಳಿಗ್ಗೆ 10.30ಕ್ಕೆ ಮೊದಲೇ ಮಕ್ಕಳಿಗೆ ಸಿನಿಮಾ ತೋರಿಸುವ ಅವಕಾಶ ಕಲ್ಪಿಸಬೇಕು.

ಗೌಡರ ಪ್ರಕಾರ ಇಷ್ಟು ಮಾಡಿದರೆ ಮಕ್ಕಳ ಚಿತ್ರಗಳಿಗೆ ಹಾಕಿದ ಬಂಡವಾಳ ವಾಪಸ್ಸು ಬರುತ್ತದೆ. ಜೊತೆಗೆ ಮಕ್ಕಳೂ ನೋಡುವಂತಾಗುತ್ತದೆ. ಅವರ ನಾನು ಗಾಂಧಿ ಸಿನಿಮಾ ಬೆಂಗಳೂರಿನ ಸಪ್ನಾ ಚಿತ್ರಮಂದಿರದಲ್ಲಿ ಚೆನ್ನಾಗಿ ಓಡಿದ್ದರೂ ಲುಕ್ಸಾನಾಗಿದೆ. ಇದಕ್ಕೆ ಕಾರಣ ಏರಿದ ಬಾಡಿಗೆ. ಎರಡು ಶೋ ಬಾಡಿಗೆಯೇ 45 ಸಾವಿರ ಅನ್ನೋದು ಅವರ ಅಳಲು. ಅದೇ ಮೈಸೂರಲ್ಲಿ ಒಲಿಂಪಿಸ್ ಥಿಯೇಟರನ್ನು ಶೇ.50ರಷ್ಟು ಕಡಿಮೆ ಬಾಡಿಗೆಗೆ ಅದರ ಮಾಲೀಕ ಕೊಟ್ಟಿದ್ದಾರೆ. ಪರಿಣಾಮ ಅಲ್ಲೊಂದೇ ಕಡೆ ಒಂದು ಲಕ್ಷ ರೂಪಾಯಿ ಶೇರು ಹುಟ್ಟಿದೆ.

ಇಷ್ಟು ಸಾಲದೆಂಬಂತೆ ಗೌಡರು ಶಾಲೆಶಾಲೆಗೆ ಎಡತಾಕಿದ್ದಾರೆ. ಆಡಿಟೋರಿಯಂ ಇದ್ದರೆ ಸಾಕು; ಅಲ್ಲೆಲ್ಲಾ ತಮ್ಮ ಸಿನಿಮಾ ತೋರಿಸಿದ್ದಾರೆ. ಪ್ರತಿ ಮಗುವಿಗೆ ವಿಧಿಸಿದ ಶುಲ್ಕ ಕೇವಲ 15 ರೂಪಾಯಿ. ಈ ಯತ್ನ ಫಲಕಾರಿಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳನ್ನೂ ಅವರ ಸಿನಿಮಾ ಪ್ರವೇಶಿಸಿರುವುದು ಅಗ್ಗಳಿಕೆ. ಕನ್ನಡ ಬರದೇ ಇರುವ ಮಕ್ಕಳೂ ಸಿನಿಮಾಗೆ ಇಂಗ್ಲಿಷ್‌ನಲ್ಲೇ ಪ್ರತಿಕ್ರಿಯೆ ಕಳಿಸಿರುವುದು ತಮಾಷೆ.

ಬಂದಿರುವ ಪ್ರತಿಕ್ರಿಯೆಗಳಲ್ಲಿ ನೂರಿನ್ನೂರನ್ನು ಸೇರಿಸಿ, ಒಂದು ಪುಸ್ತಕ ತರುವ ಯೋಚನೆಯೂ ಅವರದ್ದು. ಒಂದೇ ಒಂದು ಸಿನಿಮಾ ಇಟ್ಟುಕೊಂಡು ಹೇಗೆಲ್ಲಾ ಮಾರುಕಟ್ಟೆ ಮಾಡಬಹುದು ಅನ್ನೋದಕ್ಕೆ ನಾನು ಗಾಂಧಿ ಒಂದು ಉದಾಹರಣೆ. ಅಂದಹಾಗೆ, ಇಷ್ಟೆಲ್ಲಾ ಕಸರತ್ತಿನ ನಂತರ ಗೌಡರಿಗೆ ಹುಟ್ಟಿರುವ ಹಣ ಎಂಟು ಲಕ್ಷ ರೂಪಾಯಿ. ಸರ್ಕಾರದಿಂದ ರು. 25 ಲಕ್ಷ ಸಬ್ಸಿಡಿ ಬರುವುದಿನ್ನೂ ಬಾಕಿ ಇದೆ. ಇಷ್ಟಕ್ಕೇ ಮುಗಿಯಲಿಲ್ಲ. ಗೌಡರ ತಲೆಯಲ್ಲಿ ಇನ್ನೊಂದು ಮಕ್ಕಳ ಚಿತ್ರದ ಯೋಚನೆಯೂ ಕುಣಿಯುತ್ತಿದೆ. ಹೇಗಿದೆ ನೋಡಿ ಗಾಂಧಿ ಮಹಾತ್ಮೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada