»   » ಜನವರಿಯಿಂದ ರಾಜ್ಯದಲ್ಲಿ ಚಿತ್ರ ಬಿಡುಗಡೆ ಬಂದ್

ಜನವರಿಯಿಂದ ರಾಜ್ಯದಲ್ಲಿ ಚಿತ್ರ ಬಿಡುಗಡೆ ಬಂದ್

Subscribe to Filmibeat Kannada

2010ರ ಜನವರಿ 1ರಿಂದ ರಾಜ್ಯದಲ್ಲಿ ಕನ್ನಡ ಸೇರಿದಂತೆ ಯಾವ ಭಾಷೆಯ ಚಿತ್ರಗಳನ್ನು ಬಿಡುಗಡೆ ಮಾಡದಂತೆ ಕರ್ನಾಟಕ ಚಲಚಿತ್ರ ನಿರ್ಮಾಪಕ ಸಂಘ ತೀರ್ಮಾನಿಸಿದೆ. ಶೇಕಡವಾರು ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿ ಎಂಬುದು ನಿರ್ಮಾಪಕರ ಒತ್ತಾಯ. ಆದರೆ ಚಿತ್ರಮಂದಿರದ ಮಾಲೀಕರು ಈ ಪದ್ಧತಿಯನ್ನು ಸುತಾರಾಂ ಒಪ್ಪುತ್ತಿಲ್ಲ. ಬಾಡಿಗೆ ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದಾರೆ.

ಈ ಕಾರಣಕ್ಕೆ ಜನವರಿ 1ರಿಂದ ಚಿತ್ರಗಳ ಬಿಡುಗಡೆಯನ್ನು ತಡೆಹಿಡಿಯಲು ನಿರ್ಧರಿಸಿದ್ದೇವೆ. ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ನವೆಂಬರ್ 13ರಂದು ಸಂಘದ ಸರ್ವಸದಸ್ಯರ ಸಭೆಯನ್ನು ಕರೆಯಲಾಗಿದೆ. ಬೇರೆ ಭಾಷೆಯ ನಿರ್ಮಾಪಕರನ್ನು ಸಭೆಗೆ ಆಹ್ವಾನಿಸಲಾಗಿದ್ದ್ದು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ ಎಂದು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ ಸಿ ಎನ್ ಚಂದ್ರಶೇಖರ್ ತಿಳಿಸಿದ್ದಾರೆ.

ಬಾಡಿಗೆ ಪದ್ಧತಿಯಲ್ಲಿ ಚಿತ್ರಗಳು ಬಿಡುಗಡೆಯಾದರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಹಾಗಾಗಿ ಶೇಕಡವಾರು ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿ ಎಂಬುದು ನಿರ್ಮಾಪಕರ ಪ್ರಮುಖ ಅಹವಾಲು. ಇದಕ್ಕೆ ಚಿತ್ರಮಂದಿರದ ಮಾಲೀಕರು ಒಪ್ಪುತ್ತಿಲ್ಲ.

ಚಲನಚಿತ್ರ ವಾಣಿಜ್ಯ ಮಂಡಳಿ ಸಹ ನ.16ಕ್ಕೆ ಚಿತ್ರ ಪ್ರದರ್ಶಕರ ಸಭೆ ಕರೆದಿದೆ. ಶೇಕಡವಾರು ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವಂತೆ ಪ್ರದರ್ಶಕರ ಬಳಿ ಮನವಿ ಮಾಡುತ್ತೇವೆ ಎಂದು ಕೆ ಎಫ್ ಸಿಸಿ ಅಧ್ಯಕ್ಷೆ ಡಾ.ಜಯಮಾಲಾ ಹೇಳಿದ್ದಾರೆ. ಒಟ್ಟಿನಲ್ಲಿ ಜನವರಿಯಲ್ಲಿ ತೆರೆಕಾಣಲಿರುವ ಸಾಲುಸಾಲು ಕನ್ನಡ ಚಿತ್ರಗಳ ಸ್ಥಿತಿ ಅಯೋಮಯವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada