»   » ವಿಷ್ಣು ಯಜಮಾನನಿಗೆ ಬಸವನಗುಡಿಯಲ್ಲಿ ಪುಷ್ಪ ನಮನ

ವಿಷ್ಣು ಯಜಮಾನನಿಗೆ ಬಸವನಗುಡಿಯಲ್ಲಿ ಪುಷ್ಪ ನಮನ

Subscribe to Filmibeat Kannada

ಅಗಲಿದ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ವೈಕುಂಠ ಸಮಾರಾಧನೆಯನ್ನು (13ನೇ ದಿನ) ಅವರ ಕುಟುಂಬ ವರ್ಗ ಬಸವನಗುಡಿ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನೆರವೇರಿಸಿತು. ಬೆಳಿಗ್ಗೆ ಏಳು ಗಂಟೆಗೆ ಪೂಜಾ ಪುನಸ್ಕಾರ ನೆರವೇರಿಸಿದ ವಿಷ್ಣು ಕುಟುಂಬ ವರ್ಗ ಪುಷ್ಪ ನಮನ ಸಲ್ಲಿಸಿತು. ವಿಷ್ಣುಗೆ ದತ್ತು ಮಗನಂತಿದ್ದ ಶ್ರೀಧರ್ ಪೂಜಾ ವಿಧಿವಿಧಾನಗಳನ್ನುನೆರವೇರಿಸಿದರು.

ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಮತ್ತು ನಿರ್ದೇಶಕರು ಆಗಮಿಸಿ ವಿಷ್ಣು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಟ ಮತ್ತು ಅಳಿಯ ಅನಿರುದ್ಧ ಕಲ್ಯಾಣ ಮಂಟಪದ ಬಾಗಿಲ ಬಳಿ ನಿಂತು ಎಲ್ಲರನ್ನೂ ಆತ್ಮೀಯವಾಗಿ ಬರ ಮಾಡಿಕೊಂಡರು. ವಿಷ್ಣು ಪತ್ನಿ ಭಾರತಿ ಆತ್ಮ ಸ್ಥೈರ್ಯ ಕಳೆದುಕೊಳ್ಳದೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸಿ ಯಜಮಾನನಿಗೆ ಪೂಜಾ ಪುನಸ್ಕಾರಗಳನ್ನು ನೆರವೇರಿಸಿದರು.

ನಟ ಶಿವರಾಜ್ ಕುಮಾರ್ ಮಾತನಾಡುತ್ತಾ, ವಿಷ್ಣು ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಅವರ ಆತ್ಮ ಇಲ್ಲೇ ಎಲ್ಲೋ ಇದ್ದೇ ಇರುತ್ತದೆ.ಅಪ್ಪಾಜಿ ಅವರು ಹಾಗೂ ವಿಷ್ಣು ಒಟ್ಟಿಗೆ ಇರುತ್ತಾರೆ. ವಿಷ್ಣು ಶಾಂತಿ ಪ್ರಿಯರು, ಸ್ನೇಹ ಜೀವಿ ಎಂದು ಶಿವರಾಜ್ ಕುಮಾರ್ ಬಣ್ಣಿಸಿದರು.

ದ್ವಾರಕೀಶ್, ಶಿವರಾಂ, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಜಯಮಾಲ, ಸಿ ಆರ್ ಸಿಂಹ, ಅಶೋಕ್, ಸಾಹುಕಾರ್ ಜಾನಕಿ,ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ರಮೇಶ್ ಭಟ್, ಸುಧಾ ರಾಣಿ, ವಿನೋದ್ ರಾಜ್, ಸಂಸದ ಅನಂತ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು.

ವಿಷ್ಣು ಅಭಿಮಾನಿಗಳು ನ್ಯಾಷನಲ್ ಕಾಲೇಜ್ ಆವರಣದಲ್ಲಿ ರಕ್ತದಾನ ಶಿಬಿರ ನಡೆಸಿದರು. ವಿಷ್ಣು ಕಟ್ಟಿ ಬೆಳೆಸಿದ 'ಸ್ನೇಹಲೋಕ' ತಂಡದ ಗೆಳೆಯರು ವೈಕುಂಠ ಸಮಾರಾಧನೆಯನ್ನು ನೆರವೇರಿಸಿದರು. ಸಾವಿರಾರು ಅಭಿಮಾನಿಗಳು ಆಗಮಿಸಿ ವಿಷ್ಣು ಭಾವಚಿತ್ರಕ್ಕೆ ಹೂಹಾರ ಹಾಕಿ ಶ್ರದ್ಧಾಂಜಲಿ ಅರ್ಪಿಸಿದರು. ಕೆಲವು ವಿಷ್ಣು ಅಭಿಮಾನಿಗಳು ವಿಷ್ಣು ಭಾವಚಿತ್ರದ ಮುಂದೆ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada