ಬೆಂಗಳೂರಿನಲ್ಲಿ ನಡೆಯಲಿದೆ ನೀರಿನ ಮಹತ್ವ ಸಾರುವ ಚಲನಚಿತ್ರೋತ್ಸವ
'11ನೇ ಇಂಟರ್ ನ್ಯಾಷಿನಲ್ ಟ್ರಾವೆಲಿಂಗ್ ಫಿಲ್ಮ್ ಫೆಸ್ಟಿವಲ್ ಆನ್ ವಾಟರ್' ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ. ಇದೇ ತಿಂಗಳು ಅಂದರೆ ಡಿಸೆಂಬರ್ 14, 15 ಮತ್ತು 16 ರಂದು ಮೂರು ದಿನಗಳ ಕಾಲ ಈ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲ ಫಿಲ್ಮ್ ಫೆಸ್ಟಿವಲ್ ಗಳಿಗಿಂತ ಈ ಚಲನಚಿತ್ರೋತ್ಸವ ತುಂಬ ವಿಶೇಷವಾಗಿದೆ. ಮುಖ್ಯವಾಗಿ ಇಲ್ಲಿ ನೀರಿನ ಮಹತ್ವವನ್ನು ಹೇಳುವ ಸಿನಿಮಾಗಳನ್ನು ಮಾತ್ರ ಪ್ರದರ್ಶನ ಮಾಡಲಾಗುತ್ತದೆ. ನೀರಿನ ಅಗತ್ಯತೆ, ಮಳೆ ನೀರಿನ ಕೊಯ್ಲು, ನದಿ, ಕೆರೆ, ಪ್ರವಾಹಗಳ ಪ್ರಭಾವ ಈ ರೀತಿಯ ವಿಷಯದ ಮೇಲೆ ಇರುವ ಸಿನಿಮಾಗಳನ್ನು ಈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗುತ್ತದೆ.

ಒಳ್ಳೆಯ ಉದ್ದೇಶದಿಂದ ಮಾಡುತ್ತಿರುವ ಈ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಕೂಡ ಇರುವುದಿಲ್ಲ. ಅಂದಹಾಗೆ, ಈ ಫಿಲ್ಮ್ ಫೆಸ್ಟಿವಲ್ ನ ಬೆಂಗಳೂರು ಫಿಲ್ಮ್ ಸೊಸೈಟಿ, ವಾಯ್ಸ್ ಫ್ರಮ್ ದಿ ವಾಟರ್ಸ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ.
60 ದೇಶದ 229 ಸಿನಿಮಾಗಳು ಈ ಬಾರಿಯ '11ನೇ ಇಂಟರ್ ನ್ಯಾಷನಲ್ ಟ್ರಾವೆಲಿಂಗ್ ಫಿಲ್ಮ್ ಫೆಸ್ಟಿವಲ್ ಆನ್ ವಾಟರ್' ನಲ್ಲಿ ಪ್ರದರ್ಶನವಾಗಲಿದೆ. ಕಾರ್ಯಕ್ರಮ ಜಯನಗರ 9ನೇ ಹಂತದಲ್ಲಿರುವ ಜೈನ್ ವಿಶ್ವವಿದ್ಯಾನಿಲಯದಲ್ಲಿ ಮತ್ತು ಚರ್ಚ್ ಸ್ಟ್ರೀಟ್ ಬಳಿಯ ಪರಿಸರ ಭವನದಲ್ಲಿ ನಡೆಯಲಿದೆ.


Click it and Unblock the Notifications











