»   »  ಸಿಯಾಟಲ್ ಚಲನಚಿತ್ರೋತ್ಸವಕ್ಕೆ ಬೆಟ್ಟದಪುರದ ದಿಟ್ಟ ಮಕ್ಕಳು

ಸಿಯಾಟಲ್ ಚಲನಚಿತ್ರೋತ್ಸವಕ್ಕೆ ಬೆಟ್ಟದಪುರದ ದಿಟ್ಟ ಮಕ್ಕಳು

Posted By: Staff
Subscribe to Filmibeat Kannada

ಅಮೆರಿಕನ್ನಡಿಗ ಹರ್ಷರಾಮ್ ಅವರು ಸೃಷ್ಟಿ ಆರ್ಟ್ಸ್ ಬ್ಯಾನರ್ ಅಡಿ ನಿರ್ಮಿಸಿರುವ 'ಬೆಟ್ಟದಪುರದ ದಿಟ್ಟ ಮಕ್ಕಳು' ಚಲನಚಿತ್ರ ಅಕ್ಟೋಬರ್ 2ರಿಂದ 4ರವರೆಗೆ ಅಮೆರಿಕಾದ ಸಿಯಾಟಲ್ ವಾಷಿಂಗ್ಟನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳಲು ಆಯ್ಕೆಯಾಗಿದೆ.

ಖ್ಯಾತ ಕಾದಂಬರಿಕಾರ ನಾ ಡಿಸೋಜಾ ಅವರು ಬರೆದಿರುವ ಕಾದಂಬರಿಯನ್ನು ಆಧರಿಸಿರುವ ಬೆಟ್ಟದಪುರದ ದಿಟ್ಟ ಮಕ್ಕಳು ಚಿತ್ರ, ಅಕ್ರಮ ಗಣಿಗಾರಿಕೆ ನಡೆಸುವ ಉದ್ಯಮಿಗಳ ವಿರುದ್ಧ ಬೆಟ್ಟದಪುರದ ಮಕ್ಕಳು ದಿಟ್ಟವಾಗಿ ನಡೆಸುವ ಹೋರಾಟದ ಮೂಲವಸ್ತು ಹೊಂದಿದೆ. ಚಲನಚಿತ್ರವನ್ನು ಕೋಡ್ಲು ರಾಮಕೃಷ್ಣ ಅವರು ನಿರ್ದೇಶಿಸಿದ್ದಾರೆ.

ರಾಮನಗರದ ಬೆಟ್ಟದಲ್ಲಿ ಮತ್ತು ದೇವರಾಯನ ದುರ್ಗದ ಸುಂದರ ಪರಿಸರದಲ್ಲಿ ಚಿತ್ರೀಕರಣವನ್ನು ನಡೆಸಲಾಗಿದೆ. ಗಣಿಗಾರಿಕೆಯ ಹುನ್ನಾರವನ್ನು ವಿರೋಧಿಸಿ ಮಕ್ಕಳನ್ನು ಹೋರಾಟಕ್ಕೆ ಉತ್ತೇಜಿಸುವ ಶಿಕ್ಷಕನಾಗಿ ಹರ್ಷರಾಮ್ ಅವರು ಅಭಿನಯಿಸಿದ್ದಾರೆ. ಪ್ರಮುಖ ಭೂಮಿಕೆಯಲ್ಲಿ ಮಾಸ್ಟರ್ ಶಶಾಂಕ್, ವಿನೋದ್, ಅಮೃತಾ, ಸಮುದ್, ಮಂದಾರ, ಶ್ರೀನಿವಾಸ ಮೂರ್ತಿ, ಪದ್ಮಾ ವಾಸಂತಿ, ಶೋಧ ರಾಜ್, ಬ್ಯಾಂಕ್ ಜನಾರ್ಧನ್, ಕರಿಬಸವಯ್ಯ ಮತ್ತು ಜೋಸೈಮನ್ ಇದ್ದಾರೆ.

ಬೆಟ್ಟದಪುರದ ದಿಟ್ಟ ಮಕ್ಕಳು ಚಿತ್ರ ಕರ್ನಾಟಕದಲ್ಲಿ ಸೆಪ್ಟೆಂಬರ್ ಮೂರನೇ ವಾರದಲ್ಲಿ ಬಿಡುಗಡೆಯಾಗುತ್ತಲಿದೆ. ಬೆಟ್ಟದಪುರದ ಮಕ್ಕಳು ಚಿತ್ರಕ್ಕೆ ಮಕ್ಕಳ ಚಿತ್ರದ ಹಣೆಪಟ್ಟಿ ನೀಡದೆ ಹಿಂದಿನ ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರು ವಿವಾದ ಸೃಷ್ಟಿಸಿದ್ದರು. ಈ ಚಿತ್ರೋತ್ಸವದಲ್ಲಿ ಮತ್ತೊಬ್ಬ ಕನ್ನಡಿಗ ಹರ್ಷವರ್ಧನ್ ಅವರು ನಿರ್ಮಿಸಿ ನಿರ್ದೇಶಿಸಿದ 'ಲಾಸ್ ಅಂಡ್ ಫೌಂಡ್' ಚಿತ್ರ ಕೂಡ ಪ್ರದರ್ಶಿತವಾಗುತ್ತಿದೆ. ಹರ್ಷವರ್ಧನ್ ಅವರು ದಟ್ಸ್ ಕನ್ನಡ ಅಂಕಣಕಾರ ಡಾ. 'ಜೀವಿ' ಕುಲಕರ್ಣಿ ಅವರ ಮಗ.

ಬೆಟ್ಟದಪುರದ ದಿಟ್ಟ ಮಕ್ಕಳು ಚಿತ್ರತಂಡಕ್ಕೆ ದಟ್ಸ್ ಕನ್ನಡದ ಅಭಿನಂದನೆಗಳು.

ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುತ್ತಿರುವ ಚಿತ್ರಗಳ ಪಟ್ಟಿ

ಅಕ್ಟೋಬರ್ 2, ಶುಕ್ರವಾರ

ಗಬ್ರೀಚಾ ಪಾಸ್ : ದಿ ಡ್ಯಾಮ್ನಡ್ ರೇನ್ (ಭಾರತ, ಮರಾಠಿ)
ಲಯಾ ಪ್ರಾಜೆಕ್ಟ್ (ಶ್ರೀಲಂಕಾ)
ಸೂಪರ್ ಮ್ಯಾನ್ ಆಫ್ ಮಾಲೇಗಾಂವ್ (ಭಾರತ, ಹಿಂದಿ)
ಲಾಸ್ಟ್ ಅಂಡ್ ಫೌಂಡ್ (ಭಾರತ, ಮರಾಠಿ, ಹಿಂದಿ, ಇಂಗ್ಲಿಷ್)

ಅಕ್ಟೋಬರ್ 3, ಶನಿವಾರ

ಕ್ರೈ ಸಿಯಾಟಲ್ ಶಾರ್ಟ್ ಫಿಲ್ಮಸ್
ಠೇಕೆ ಪೆ ಕ್ಯಾ ಕರತೇ ಹೋ (ಭಾರತ, ಹಿಂದಿ)
ದಿ ಅದರ್ ಸೈಡ್ ಆಫ್ ಚೈಲ್ಡ್ ಹುಡ್ (ಪಾಕಿಸ್ತಾನ)
ಆಶಾ ಗೋಸ್ ಟು ಇಂಡಿಯಾ (ಅಮೆರಿಕ ಮತ್ತು ಭಾರತ, ಇಂಗ್ಲಿಷ್)
ಪ್ರಾಯೋಗಿಕ ಚಲನಚಿತ್ರಗಳು
ಪ್ರಾಜೆಕ್ಟ್ ಕಾಶ್ಮೀರ್ (ಅಮೆರಿಕ ಮತ್ತು ಭಾರತ)
ಐ ಕಾಂಟ್ ಥಿಂಕ್ ಸ್ಟ್ರೇಟ್ (ಯುಕೆ, ಇಂಗ್ಲಿಷ್ : ಲೀಸಾ ರೇ ನಟಿಸಿದ್ದಾರೆ.)

ಅಕ್ಟೋಬರ್ 4, ಭಾನುವಾರ

ನೇಪಾಳಿ ಶಾರ್ಟ್ ಫಿಲ್ಮ್ ಪ್ರೋಗ್ರಾಂ
ಬೆಟ್ಟದಪುರದ ದಿಟ್ಟ ಮಕ್ಕಳು (ಭಾರತ, ಕನ್ನಡ)
ಚೊಬ್ಬಿ : ಬಾಂಗ್ಲಾದೇಶದ ಫೋಟೋ ಡಾಕ್ಯುಮೆಂಟರಿ
ದಿ ಲೀವಿಂಗ್ ಘೋಸ್ಟ್ (ಭಾರತ, ಓರಿಯಾ)

English summary
Bettadapurada Ditta Makkalu |

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada