»   »  ಬಾಕ್ಸಾಫೀಸಲ್ಲಿ ಕನ್ನಡ ಚಿತ್ರಗಳಿಗೆ ಸುಗ್ಗಿಯೋ ಸುಗ್ಗಿ

ಬಾಕ್ಸಾಫೀಸಲ್ಲಿ ಕನ್ನಡ ಚಿತ್ರಗಳಿಗೆ ಸುಗ್ಗಿಯೋ ಸುಗ್ಗಿ

Posted By:
Subscribe to Filmibeat Kannada

ಮಲ್ಟಿಪ್ಲೆಕ್ಸ್ ಮತ್ತು ಹಿಂದಿ ಚಿತ್ರ ನಿರ್ಮಾಪಕರ ನಡುವಣ ಕಿತ್ತಾಟ ಕನ್ನಡ ಚಿತ್ರ ನಿರ್ಮಾಕರಿಗೆ ಲಾಭವಾಗಿದೆ. ಯಾವುದೇ ಹೊಸ ಹಿಂದಿ ಚಿತ್ರಗಳು ಬಿಡುಗಡೆ ಭಾಗ್ಯ ಕಾಣದಿದ್ದರಿಂದ ಕನ್ನಡ ಚಿತ್ರಗಳಿಗೆ ಸುಗ್ಗಿಯೋ ಸುಗ್ಗಿ. ಕನ್ನಡ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಕಾರಣ ಸ್ಯಾಂಡಲ್ ವುಡ್ ನಿರ್ಮಾಪಕರು ಮತ್ತು ವಿತರಕರು ಖುಷಿಯಾಗುವಂತೆ ಮಾಡಿದೆ.

ರಾಮೋಜಿ ರಾವ್ ಬ್ಯಾನರ್ ನಲ್ಲಿ ಬಿಡುಗಡೆಯಾದ 'ಸವಾರಿ' ಚಿತ್ರ ಮಲ್ಟಿಪ್ಲೆಕ್ಸ್ ಮತ್ತು ಇತರ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಿಂದಿ ಚಿತ್ರವನ್ನೇ ನೋಡುತ್ತಿದ್ದವರು ಕೂಡ ಈ ಚಿತ್ರವನ್ನು ನೋಡುತ್ತಿದ್ದಾರೆಂದು ಮಲ್ಟಿಪ್ಲೆಕ್ಸ್ ಅಧಿಕಾರಿಗಳು ಹೇಳುತ್ತಾರೆ. ಕನ್ನಡಿಗರು ಕನ್ನಡ ಚಿತ್ರವನ್ನಲ್ಲದೆ ಬೇರೆ ಭಾಷೆಯ ಚಿತ್ರಗಳನ್ನೂ ನೋಡುತ್ತಾರೆ ಆದರೆ ಹಿಂದಿ ಚಿತ್ರ ಬಿಡುಗಡೆಯಾಗದೇ ಇದ್ದಂತಹ ಈ ಸಮಯದಲ್ಲಿ ಕನ್ನಡ ಚಿತ್ರಗಳನ್ನೇ ಹೆಚ್ಚಾಗಿ ನೋಡುತ್ತಿರುವುದು ಚಿತ್ರರಂಗಕ್ಕೆ ಹೆಚ್ಚಿನ ಲಾಭ ತಂದುಕೊಟ್ಟಿದೆ ಎನ್ನುವುದು ರಾಕ್ ಲೈನ್ ವೆಂಕಟೇಶ್ ಅವರ ಅಭಿಪ್ರಾಯ.

ವಿತರಕರಾದ ಜಯಣ್ಣ ಅವರ ಪ್ರಕಾರ 'ಸವಾರಿ','ಜೋಶ್','ಅಂಬಾರಿ','ತಾಕತ್', 'ವೀರ ಮದಕರಿ' ಮತ್ತು 'ಕಿರಣ್ ಬೇಡಿ' ಚಿತ್ರಗಳು ಉತ್ತರ ಕರ್ನಾಟಕ ಭಾಗದಲ್ಲಿ (ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ) ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ( ರಾಯಚೂರು, ಬೀದರ್, ಗುಲ್ಬರ್ಗ) ಪ್ರದೇಶಗಳಲ್ಲಿ ಉತ್ತಮ ಗಳಿಕೆ ಕಂಡಿದೆಯಂತೆ.

ಉಪೇಂದ್ರ ಅಭಿನಯದ ಅದ್ದೂರಿ ಚಿತ್ರ 'ದುಬೈ ಬಾಬು' ಚಿತ್ರ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ, ಶಿವರಾಜ್ ಕುಮಾರ್ ಅಭಿನಯದ ' ಹೊಡಿ ಮಗ' ಚಿತ್ರ ವಿತರಕ ಕೆಸಿಎನ್ ಕುಮಾರ್ ಅವರಿಗೆ ಶೇ.10 ರಷ್ಟು ಅಧಿಕ ಲಾಭ ತಂದುಕೊಟ್ಟಿದೆಯೆಂದು ಕುಮಾರ್ ಹೇಳಿದ್ದಾರೆ.

ಇಂದಿನಿಂದ ಹಿಂದಿ ಚಿತ್ರಗಳು ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಗೊಳ್ಳುತ್ತಿರುವುದರಿಂದ ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುವ ನಮ್ಮ ಕನ್ನಡಿಗರು 'ಕನ್ನಡ' ಚಿತ್ರಗಳಿಗೆ ಯಾವ ರೀತಿಯ ಪ್ರೋತ್ಸಾಹ ನೀಡುತ್ತಾರೆನ್ನುವುದು ಮುಂದಿನ ದಿನದಲ್ಲಿ ಕಾದು ನೋಡಬೇಕಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada