»   » ಕಂಠೀರವದಲ್ಲಿ ಜೋಗಯ್ಯ ಜಗಮಗ ಸ್ಟೈಲೊ

ಕಂಠೀರವದಲ್ಲಿ ಜೋಗಯ್ಯ ಜಗಮಗ ಸ್ಟೈಲೊ

Posted By:
Subscribe to Filmibeat Kannada

ಬಹಳ ದಿನಗಳ ಬಳಿಕ ಜೋಗಯ್ಯ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಸಡಗರ, ಸಂಭ್ರಮಕ್ಕೆ ಕಾರಣವಾಯಿತು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 'ಜೋಗಯ್ಯ' ಚಿತ್ರದ ಮುಹೂರ್ತ ಇಂದು ಅದ್ದೂರಿಯಾಗಿ ನೆರವೇರಿತು. ಚಿರಂಜೀವಿ ಕ್ಲಾಪ್ ಮಾಡುವ ಮೂಲಕ ಜೋಗಯ್ಯನಿಗೆ ಚಾಲನೆ ನೀಡಲಾಯಿತು.

ಮೆಗಾ ಸ್ಟಾರ್ ಚಿರಂಜೀವಿ ಮಾತನಾಡುತ್ತಾ, ಶಿವರಾಜ್ ಕುಮಾರ್ ನನ್ನ ಆತ್ಮೀಯ ಗೆಳೆಯ. ಆಂಧ್ರಪ್ರದೇಶದಲ್ಲಿ ಅಧಿವೇಶನ ನಡೆಯುತ್ತಿದ್ದರೂ ಪ್ರೇಮ್ ಅವರ ಕರೆಗೆ ಓಗೊಟ್ಟು ಜೋಗಯ್ಯ ಮುಹೂರ್ತ ಸಮಾರಂಭಕ್ಕೆ ಬಂದಿದ್ದೇನೆ ಎಂದರು. ಎಲ್ಲರೂ ನನ್ನನ್ನು ಕೇಳುತ್ತಿರುತ್ತಾರೆ ಇಷ್ಟೊಂದು ಸರಳವಾಗಿದ್ದೀರಲ್ಲಾ ಯಾಕೆ? ಎಂದು. ಇದಕ್ಕೆ ಸ್ಫೂರ್ತಿ ವರನಟ ಡಾ.ರಾಜ್ ಕುಮಾರ್ ಅವರು ಎಂದು ಹೇಳುತ್ತೇನೆ ಎಂದು ಅಣ್ಣಾವ್ರ ಸರಳತೆಯನ್ನು ನೆನೆದರು.

ಡಾ.ರಾಜ್ ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ಅವರ ಆತ್ಮ ಇಲ್ಲೇ ಇದೆ. ರಾಜ್ ಕುಮಾರ್ ಅವರಂತಹ ಮಹಾನ್ ವ್ಯಕ್ತಿಯ ಮಗನಾಗಿ ಹುಟ್ಟಿದ್ದು ಶಿವರಾಜ್ ಕುಮಾರ್ ಅವರ ಅದೃಷ್ಟ. ರಾಜ್ ಅವರ ಕೀರ್ತಿ, ಘನತೆಯನ್ನು ಶಿವಣ್ಣ ಎತ್ತಿಹಿಡಿಯುತ್ತಿದ್ದಾರೆ. ಜೋಗಿ ಚಿತ್ರದ ದಾಖಲೆಯನ್ನು ಜೋಗಯ್ಯ ಚಿತ್ರ ಅಳಿಸಿ ಹಾಕಲಿ ಎಂದು ಚಿರಂಜೀವಿ ಹಾರೈಸಿದರು.

ಜೋಗಯ್ಯ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ತಮಿಳು ಸೂಪರ್ ಸ್ಟಾರ್ ಸೂರ್ಯ ಹಾರೈಸಿದರು. ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್ ಮಾತನಾಡುತ್ತಾ, ಶಿವರಾಜ್ ಕುಮಾರ್ ತಮ್ಮ 25 ವರ್ಷಗಳ ವೃತ್ತಿ ಜೀವನದಲ್ಲಿ 100 ಚಿತ್ರಗಳಲ್ಲಿ ನಟಿಸಿರುವುದು ನಿಜಕ್ಕೂ ಅದ್ಭುತ ಎಂದರು.

ಎಂಜಿಆರ್, ಶಿವಾಜಿ ಗಣೇಶನ್, ರಾಜ್ ಕುಮಾರ್ ಅವರಂತೆ ಶಿವಣ್ಣ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಸಂಪಾದಿಸಿದ ನಟ. ಪ್ರೇಮ, ಕುಟುಂಬ, ಸೆಂಟಿಮೆಂಟ್, ಆಕ್ಷನ್ ಸೇರಿದಂತೆ ಎಲ್ಲ ರೀತಿಯ ಪಾತ್ರಗಳಿಗೆ ಶಿವಣ್ಣ ಜೀವ ತುಂಬಿದ್ದಾರೆ. ಇದಕ್ಕೆ ಅವರ ಓಂ, ಎಕೆ 47, ಜೋಗಿಯಂತಹ ಚಿತ್ರಗಳೆ ಸಾಕ್ಷಿ ಎಂದರು. ಜೋಗಿ ಚಿತ್ರದ ಡಿವಿಡಿ ಕೊಟ್ಟು ಚಿತ್ರ ನೋಡಿ ಎಂದರು. ಆದರೆ ನಾನು ಚಿತ್ರಮಂದಿರದಲ್ಲೆ ನೋಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದು ಚಿತ್ರ ನೋಡಿದ್ದಾಗಿ ಹೇಳಿದರು.

ಕಾರ್ಯಕ್ರಮವನ್ನು ನಟಿ ಭಾವನಾ ನಿರೂಪಿಸಿದರು. ಕಾರ್ಯಕ್ರಮಕ್ಕೆ ರಕ್ಷಿತಾ, ಪ್ರೇಮ್, ಸುಮಲತಾ, ಅಂಬರೀಷ್, ರಾಘವೇಂದ್ರ ರಾಜ್ ಕುಮಾರ್, ಸಾ.ರಾ.ಗೋವಿಂದು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಸಂತಕುಮಾರ್ ಪಾಟೀಲ್, ಪಾರ್ವತಮ್ಮ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿ ಹರಿಕೃಷ್ಣ ಸೇರಿದಂತೆ ಮುಂತಾದವರು ಆಗಮಿಸಿದರು.

ಜೋಗಯ್ಯನ ವಿಶೇಷ ಗೆಟಪ್ ನಲ್ಲಿ ಶಿವರಾಜ್ ಕುಮಾರ್ ಆಗಮಿಸಿ ಅಭಿಮಾನಿಗಳನ್ನು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಡೊಳ್ಳು ಕುಣಿತದ ಹಾಡಿನ ಚಿತ್ರೀಕರಣ ಕಂಠೀರವ ಒಳಾಂಗಣ ಕ್ರೀಡಾಂಗಣಲ್ಲಿ ನಡೆಯಿತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂಕು ನುಗ್ಗಲಿನ ಕಾರಣ ಪತ್ರಕರ್ತರೂ ಪರಡುವಂತಾಯಿತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada