»   »  ಕೆಟ್ಟ ಚಿತ್ರಗಳಿಗೆ ಕಲ್ಲೆಸೆದು ಪಾಠ ಕಲಿಸಿ: ರಾಜೇಶ್

ಕೆಟ್ಟ ಚಿತ್ರಗಳಿಗೆ ಕಲ್ಲೆಸೆದು ಪಾಠ ಕಲಿಸಿ: ರಾಜೇಶ್

Subscribe to Filmibeat Kannada
Kala Thapaswi Rajesh
ಅದೊಂದು ಮನ ಮಿಡಿಯುವ ತನು ಕರಗುವ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಬುಧವಾರ(ಫೆ.11) ಸಂಸ ಬಯಲು ರಂಗಮಂದಿರದಲ್ಲಿನ ಆಹ್ಲಾದಕರ ವಾತಾವರಣ ಸಹ ಇದಕ್ಕೆ ಜತೆಯಾಗಿತ್ತು.ಕನ್ನಡದ ಹಿರಿಯ ನಟ, ಕಲಾ ತಪಸ್ವಿ, ಬೆಳುವಲದ ಮಡಿಲಲ್ಲಿ ರಾಜೇಶ್ ಅವರ ಆತ್ಮಕಥೆ ' ಕಲಾ ತಪಸ್ವಿ ರಾಜೇಶ್ ಆತ್ಮಕತೆ' ಅನಾವರಣಗೊಂಡ ಕ್ಷಣಗಳು.ಕಾರ್ಯಕ್ರಮದಲ್ಲಿ ರಾಜೇಶ್ ಉತ್ಸಾಹದ ಚಿಲುಮೆಯಾಗಿ ಕಾಣುತ್ತಿದ್ದರು.


ಇಂದಿನ ಕನ್ನಡ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ರಾಜೇಶ್ ನೊಂದುಕೊಂಡಿದ್ದರು. ಅವರು ಮಾತನಾಡುತ್ತಾ, ''ಗುಣಮಟ್ಟವಿಲ್ಲದ, ಕೆಟ್ಟ ಸಂಸ್ಕೃತಿಯ ಕನ್ನಡಚಿತ್ರಗಳಿಗೆ ಕಲ್ಲೆಸೆಯಿರಿ. ಅಂತಹ ಚಿತ್ರಗಳನ್ನು ಬಹಿಷ್ಕರಿಸಿ. ಕೆಟ್ಟ ಚಿತ್ರಗಳನ್ನು ನಿರ್ಮಿಸುವ ನಿರ್ಮಾಪಕರಿಗೆ ತಕ್ಕ ಪಾಠ ಕಲಿಸಿ. ನಿಮಗೆ ನಾಚಿಕೆಯಾಗೊಲ್ಲವೆ ಈ ರೀತಿಯ ಚಿತ್ರಗಳನ್ನು ನಿರ್ಮಿಸಲು'' ಎಂದು ರಾಜೇಶ್ ಈ ತಲೆಮಾರಿನ ನಿರ್ಮಾಪಕ, ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಹಳೆ ಚಿತ್ರಗಳಲ್ಲಿದ್ದ ಗುಣಮಟ್ಟ ಈಗಿನ ಚಿತ್ರಗಳಲ್ಲಿ ಕಾಣೆಯಾಗಿರುವುದೇ ರಾಜೇಶ್ ರ ಕೋಪತಾಪಕ್ಕೆ ಕಾರಣವಾಗಿತ್ತು. ನಲವತ್ತು, ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿದ್ದ ಸಾರ,ಸೊಗಡು ಈಗಿಲ್ಲ. ಈಗೇನಿದ್ದರೂ ಬರೀ ಚರಟ ಮಾತ್ರ ಉಳಿದಿದೆ ಎಂದು ಖೇದ ವ್ಯಕ್ತಪಡಿಸಿದರು.

ಜಂಗ್ಲಿ ಚಿತ್ರದ ಹಳೆ ಪಾತ್ರೆ...ಹಳೆ ಕಬ್ಬಿಣ...ಇದೂ ಒಂದು ಸಾಹಿತ್ಯವೇ?ಎಂದು ಆ ಹಾಡಿನ ಸಾಹಿತ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.ಇಂತಹ ಚಿತ್ರಗಳಿಗೆ ಜನ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು. ಸಮಾಜದಲ್ಲಿ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ. ಈ ರೀತಿಯ ಚಿತ್ರಗಳನ್ನು ನಾವ್ಯಾಕೆ ನೋಡಬೇಕು. ಸಂಸ್ಕಾರವಿಲ್ಲದ ಕನ್ನಡ ಚಿತ್ರಗಳನ್ನು ಬಹಿಷ್ಕರಿಸಿ ಎಂದು ರಾಜೇಶ್ ಕರೆಕೊಟ್ಟರು. ಸದ್ಯ ಈ ರೀತಿಯ ಅಸಭ್ಯ ಚಿತ್ರಗಳನ್ನು ನೋಡಲು ಕನ್ನಡ ಚಿತ್ರರಂಗದ 'ಪುಣ್ಯಾತ್ಮರು' ಇಂದು ನಮ್ಮ ನಡುವೆ ಇಲ್ಲ ಎಂದರು. ರಾಜೇಶ್ ಚಿತ್ರಗಳಲ್ಲಿ ನೀರಿನಲ್ಲಿ ಅಲೆಯ ಉಂಗುರ..., ಈ ನಾಡು ಚೆನ್ನ, ಈ ಮಣ್ಣು ಚಿನ್ನ..., ರವಿವರ್ಮನ ಕುಂಚದ ಕಲೆ...ಯಂತಹ ಅದ್ಭುತ ಹಾಡುಗಳಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ನಂತರ ಅವರ ಮಾತು ಪಬ್ ಸಂಸ್ಕೃತಿಯ ಕಡೆಗೆ ತಿರುಗಿತು. ಯಾರಿಗೆ ಬೇಕು ಪಬ್ ಸಂಸ್ಕೃತಿ? ಮುತಾಲಿಕ್ ಮತ್ತು ಪಬ್ ಮಾಲೀಕರಿಗೆ ಪೊಲೀಸರು ನೋಟೀಸ್ ಜಾರಿ ಮಾಡದಿದ್ದರೆ ನಮ್ಮ ಸಂಸ್ಕೃತಿ ನಿಜಕ್ಕೂ ಅಡ್ಡದಾರಿ ಹಿಡಿಯುತ್ತದೆ ಎಂದು ಕಾನೂನು ಪಾಲಕರ ವಿರುದ್ಧ ರಾಜೇಶ್ ತಿರುಗಿ ಬಿದ್ದರು. ಕನ್ನಡ ಚಿತ್ರರಂಗದ ಇಂದಿನ ದುಸ್ಥಿತಿಗೆ ರಾಜೇಶ್ ಮಾತುಗಳು ಕನ್ನಡಿ ಹಿಡಿದವು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada