»   » ಈವಾರ ವಿನೋದ್ Vs ವಿನೋದ್ : ಏನ್ಗುರು ಇದು?

ಈವಾರ ವಿನೋದ್ Vs ವಿನೋದ್ : ಏನ್ಗುರು ಇದು?

Posted By: Staff
Subscribe to Filmibeat Kannada


ವಿನೋದ್ Vs ವಿನೋದ್ ! ಏನಿದು ಅನ್ನುವಿರಾ? ಶುಕ್ರವಾರ(ಅ.12) 'ಸರ್ಕಲ್ ರೌಡಿ' ಮತ್ತು 'ಶುಕ್ರ'ತೆರೆಕಂಡಿವೆ. 'ರೌಡಿ'ಯಾಗಿ ವಿನೋದ್ ಪ್ರಭಾಕರ್ ಮಿಂಚಿದ್ದಾರೆ. 'ಶುಕ್ರ'ನಾಗಿ ವಿನೋದ್ ರಾಜ್ , ಅಭಿಮಾನಿಗಳ ಮೋಡಿ ಮಾಡಲು ಪ್ರಯತ್ನಿಸಿದ್ದಾರೆ.

ಒಂದು ಲೆಕ್ಕದಲ್ಲಿ ಈ ಇಬ್ಬರೂ ನಾಯಕರು ಪ್ರತಿಭಾವಂತರು. ತಮ್ಮ ತಂದೆ ಪ್ರಭಾಕರ್ ಅವರಂತೆಯೇ ಹೊಡೆದಾಟ, ಬಡಿದಾಟ, ಸಾಹಸ ಸನ್ನಿವೇಶಗಳಲ್ಲಿ ವಿನೋದ್ ಪ್ರಭಾಕರ್ ಮಿಂಚಿನಂತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಹಾಡು, ಕುಣಿತದಲ್ಲಿ ಲೀಲಾವತಿ ಪುತ್ರ ವಿನೋದ್ ರಾಜ್ ಎತ್ತಿದ ಕೈ. ದುರಂತವೆಂದರೇ, ಇಬ್ಬರಿಗೂ ಕೈತುಂಬ ಕೆಲಸವಿಲ್ಲ. ಇದು ಗಾಂಧಿನಗರದ ರಾಜಕೀಯ.

ವಿನೋದ್ ರಾಜ್ ಚೆನ್ನಾಗಿ ಅಭಿನಯಿಸುತ್ತಾರೆ.. ಅವರ ಡ್ಯಾನ್ಸ್ ಚೆನ್ನಾಗಿರುತ್ತೆ ಎಂದು ಎಲ್ಲರೂ ಹೇಳುತ್ತಾರೆ.. ಆದರೆ ಅವಕಾಶಗಳು ಮಾತ್ರ ಸಿಗುತ್ತಿಲ್ಲ. ಹೀಗಾಗಿಯೇ ಮಗನ ಅಭ್ಯುದಯಕ್ಕಾಗಿ, ಅಭಿಮಾನಿಗಳ ಒತ್ತಾಯಕ್ಕಾಗಿ ನಾನೇ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದು ಲೀಲಾವತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅವರ ಮಾತು ಸತ್ಯ. ವಿನೋದ್ ರಾಜ್ ಮಾತ್ರವಲ್ಲ, ಅನೇಕ ನಟರ ಸ್ಥಿತಿ ಇದೇ ಆಗಿದೆ.

ಚಿತ್ರಮಂದಿರದ ಕೊರತೆಯಿಂದಾಗಿ 'ಸರ್ಕಲ್ ರೌಡಿ' ಬಾಕ್ಸ್ ಬಿಟ್ಟು ಬರಲು ತಡವಾಗಿದೆ. ರಂಭಾ ಎನ್ನುವ ಕುಖ್ಯಾತ ಸಿನಿಮಾ ತೆಗೆದು, ದುಡ್ಡು ದೋಚಿದ ಬಿ.ರಾಮಮೂರ್ತಿ ಈ ಸರ್ಕಲ್ ರೌಡಿಯ ನಿರ್ಮಾಪಕರು. ಚಿತ್ರಕತೆ, ಸಂಭಾಷಣೆ, ನಿರ್ದೇಶನವೂ ಅವರದೇ. ಎಂ.ಎನ್.ಕೃಪಾಕರ್ ಸಂಗೀತ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವನ್ನು ಚಿತ್ರ ಹೊಂದಿದೆ. ನಾಯಕಿ ಪಾತ್ರದಲ್ಲಿದ್ದಾರೆ; ಖುಷಿ. ಶೋಭರಾಜ್, ಜೈಜಗದೀಶ್, ಬ್ಯಾಂಕ್ ಜನಾರ್ದನ್, ಶಕೀಲಾ ಚಿತ್ರದ ತಾರಾಗಣದಲ್ಲಿದ್ದಾರೆ.

ಇನ್ನು 'ಕನ್ನಡ ಕಂದ'ನ ಯಶಸ್ಸಿನಿಂದ ರೋಮಾಂಚಿತರಾದ ಲೀಲಾವತಿ ತಮ್ಮ ಪುತ್ರನಿಗಾಗಿ ನಿರ್ಮಾಣ ಮಾಡಿರುವ ಚಿತ್ರ; ಶುಕ್ರ. ಜಿ.ಕೆ.ಮುದ್ದುರಾಜ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ದೀಕ್ಷಿತ್, ಮೋಹನ್ ರಾಜ್, ಅಶ್ವಥ್  ನೀನಾಸಂ, ಬಿರಾದರ್ ಮತ್ತಿತರರು ಆಭಿನಯಿಸಿದ್ದಾರೆ.  

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada