For Quick Alerts
  ALLOW NOTIFICATIONS  
  For Daily Alerts

  ಸ್ವಾಭಿಮಾನದ ನಲ್ಲೆಗೆ ಸರ್ಕಾರಿ ಸೂರು ಸಿಕ್ಕಿಲ್ಲ

  By *ವಿಕ ಸುದ್ದಿ ಲೋಕ
  |

  'ನನ್ನ ಮಗನಿಗೋಸ್ಕರ ಬಿಡಿಎ ಸೈಟ್ ಪಡೆಯುವ ಸಲುವಾಗಿ ಅದೆಷ್ಟೋ ಬಾರಿ ವಿಧಾನ ಸೌಧದ ಮುಂದೆ ಕ್ಯೂ ನಿಂತಿದ್ದೇನೆ. ಆದರೆ, ಇಂದಿಗೂ ಅದು ಸಿಕ್ಕಿಲ್ಲ ಎನ್ನುವುದು ನನ್ನ ದುರದೃಷ್ಟ' ಎಂದು ಹಿರಿಯ ನಟಿ ಲೀಲಾವತಿ ಬೇಸರ ವ್ಯಕ್ತಪಡಿಸಿದರು.

  ಇಲ್ಲಿನ ಬಾದಾಮಿ ಹೌಸ್‌ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಶನಿವಾರ ಹಮ್ಮಿಕೊಂಡಿದ್ದ 'ಬೆಳ್ಳಿ ಹೆಜ್ಜೆ' ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್, ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ಸತ್ಯಮೂರ್ತಿ ಆನಂದೂರು ಉಪಸ್ಥಿತರಿದ್ದರು.

  'ಕರುಳು ಕತ್ತರಿಸುವಂತಹ ಕಷ್ಟ ನಷ್ಟಗಳು ಎದುರಾದರೂ ಮಗ ವಿನೋದ್‌ರಾಜ್‌ಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ನಾನು ಅನುಭವಿಸಿದ ಕಷ್ಟಗಳು ಮತ್ತ್ಯಾವ ಹೆಣ್ಣಿಗೂ ಬರಬಾರದು'ಎಂದು ಭಾವುಕರಾದರು.

  'ನಾನು ಚಿತ್ರರಂಗಕ್ಕೆ ಬಂದಾಗ ಸುಬ್ಬಯ್ಯ ನಾಯ್ಡು, ಜಿ.ವಿ.ಅಯ್ಯರ್ ಮೊದಲಾದ ಹಿರಿಯರಿಂದ ಬೈಸಿಕೊಂಡದ್ದೇ ಹೆಚ್ಚು. ಮುಂದೆ ಅದೇ ಪ್ರೀತಿಯ ಬೈಗುಳ ನನ್ನ ಬದುಕಿನಲ್ಲಿ ಹೂ ಮಳೆ ಸುರಿಸಿತು. ಒಂದು ಕಾಲದಲ್ಲಿ ಉತ್ತುಂಗ ಸ್ಥಾನದಲ್ಲಿದ್ದೆ. ನಂತರ ನನ್ನದಲ್ಲದ ತಪ್ಪಿಗೆ ಉದ್ಯಮದಿಂದ ದೂರವಾದೆ.

  ಆದರೆ, ನಾನು ಯಾರೊಬ್ಬರ ದುಡ್ಡಿನಲ್ಲೂ ಜೀವನ ಮಾಡಿಲ್ಲ್ದ. ಎಲ್ಲ ಸ್ವಂತ ಬೆವರು ಹರಿಸಿ ದುಡಿದ ಹಣ. ಇಲ್ಲಿ ಗಳಿಸಿದ್ದನ್ನು ಇಲ್ಲಿಯೇ ನಿರ್ಮಾಪಕಿಯಾಗಿ ಕಳೆದಿದ್ದೇನೆ. ಚಿತ್ರರಂಗ ನನಗೆ ಅನ್ನ ಕೊಟ್ಟಿದೆ. ಅದಕ್ಕೆ ಸದಾ ಋಣಿಯಾಗಿರುತ್ತೇನೆ' ಎಂದರು.

  'ನಾನು ಬಾತ್‌ರೂಮ್‌ನಲ್ಲಿ ಇದ್ದಾಗಲೂ ಡೈಲಾಗ್ ಪೇಪರ್ ಹಿಡಿದಿರುತ್ತಿದ್ದೆ. ಆದರೆ, ಇಂದಿನ ನಾಯಕಿಯರು ಕ್ಯಾಮೆರಾ ಮುಂದೆ ನಿಂತು ಸಂಭಾಷಣೆ ಕಲಿಯುತ್ತಾರೆ. ಅವರು ನಟನೆಯಲ್ಲಿ

  ತೋರುತ್ತಿರುವ ನಿರಾಸಕ್ತಿ ನೋಡಿ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಶ್ರದ್ಧೆ ಹಾಗೂ ಆಸಕ್ತಿ ಬೆಳೆಸಿಕೊಂಡರೆ ಖಂಡಿತ ಜೀವನದಲ್ಲಿ ಸಾಧನೆ ಮಾಡಬಹುದು' ಎಂದು ತಿಳಿಸಿದರು.

  'ಕನ್ನಡ ಹಾಗೂ ಕನ್ನಡತನ ಉಳಿಸುವ ಸಲುವಾಗಿ ಸರಕಾರ ಹೆಚ್ಚಿನ ಚಿತ್ರಗಳಿಗೆ ಸಹಾಯ ಧನ ನೀಡಬೇಕು. ಸರಕಾರದ ಹಣವನ್ನು ಚಿತ್ರೋದ್ಯಮಿಗಳು ಸರಿಯಾದ ರೀತಿಯಲ್ಲಿ ವಿನಿಯೋಗಿಸಬೇಕು' ಎಂದರು.

  ಲೀಲಾ-ಅಮೃತ: ಐನೂರ ಅರವತ್ತಕ್ಕೂ ಹೆಚ್ಚು ಚಿತ್ರ ಗಳಲ್ಲಿ ನಟನೆ ಮೂವತ್ತೂಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜ್‌ಕುಮಾರ್‌ಗೆ ನಾಯಕಿ ಐದು ಭಾಷೆಯ ಚಿತ್ರಗಳಲ್ಲಿ ಅವಿರತ ಅಭಿನಯ ತಮಿಳಿನ ರಾಜ್ ಕುಮಾರ್ ಎಂಜಿಆರ್‌ಗೆ ತಾಯಿಯಾಗಿದ್ದರು. ತೆಲುಗಿನ ಎನ್‌ಟಿಆರ್ ಚಿತ್ರದಲ್ಲಿ ನಟಿಸುವಾಗ ಒಮ್ಮೆ ಭಯಗೊಂಡು ಡೈಲಾಗ್ ತೊದಲಿದ್ದರು.

  ಹೆಚ್ಚಾಗಿ ಅವರು ಅಳುವ ಪಾತ್ರಗಳನ್ನೇ ಮಾಡಿದ್ದು. ನಾಟಕಗಳಲ್ಲಿ ಅವರ ಪಾತ್ರಗಳನ್ನು ನೋಡಿ, ಜನ ಕಣ್ಣೀರುಗರೆಯುತ್ತಿದ್ದರು. ದಿನಕ್ಕೆ ಐನೂರು ರೂ. ಸಂಭಾವನೆ ಪಡೆದು ನಾಟಕವಾಡಿದ್ದರು. ರಾತ್ರಿ ಮಗನನ್ನು ಜೋಳಿಗೆಯಲ್ಲಿ ಮಲಗಿಸುತ್ತಿದ್ದರು.

  ಕೃಷಿಯಲ್ಲೇ ಖುಷಿ ಕಂಡು ಕೊಂಡಿರುವ ಅವರು, ನೆಲಮಂಗಲ ಸಮೀಪ ತೋಟ ಮಾಡಿದ್ದಾರೆ. ಜತೆಗೆ ಆಸ್ಪತ್ರೆಯೊಂದನ್ನೂ ನಿರ್ಮಿಸಿದ್ದಾರೆ. ತಮಿಳು ನಾಡಿನಲ್ಲಿ ಲೀಲಾವತಿ ಯವರ ಹೆಸರಿನಲ್ಲಿ ರಸ್ತೆ ಇದೆ. ಆದರೆ, ರಾಜ್ಯದಲ್ಲಿ ಅವರ ಹೆಸರಲ್ಲಿ ಗಲ್ಲಿಯೂ ಇಲ್ಲ. ನಾಯಕಿ ಪ್ರಧಾನ ಹೆಸರಿನ ಚಿತ್ರ ಹಾಗೂ ಪಾತ್ರ ಮಾಡಿದ್ದು ಹೆಚ್ಚು. ನಾಯಕ ನಟರಿಗೆ ಸಿಗುತ್ತಿದ್ದ ಡಬಲ್ ಸಂಭಾವನೆ ಸಿಕ್ಕಿದ್ದೂ ಉಂಟು. ಅವರ ಮೇಕಪ್‌ಅನ್ನು ಅವರೇ ಮಾಡಿಕೊಳ್ಳುತ್ತಿದ್ದರು!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X