»   » ಹೊಸ ಅನುಭವದೊಂದಿಗೆ ಮರಳಿದ ಕಾಶಿನಾಥ್

ಹೊಸ ಅನುಭವದೊಂದಿಗೆ ಮರಳಿದ ಕಾಶಿನಾಥ್

By: *ಉದಯರವಿ
Subscribe to Filmibeat Kannada

ಕಾಶಿನಾಥ್ ಹೆಸರೇಳಿದರೆ ಸಾಕು ಕನ್ನಡಚಿತ್ರರಸಿಕರು ಎಂಬತ್ತರ ದಶಕಕ್ಕೆ ಮರಳುತ್ತಾರೆ. ಎಂಬತ್ತರ ದಶಕ ಎಂದರೆ ಕನ್ನಡ ಚಿತ್ರರಂಗದ ಮಟ್ಟಿಗೆ ಕಾಶಿನಾಥ್ ಯುಗ ಎಂದೇ ಹೇಳಬೇಕು. ಅವರ 'ಅನುಭವ' ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದ್ದಂತಹ ಕಾಲ. ಇದೀಗ ಹೊಸ ಐಡಿಯಾದೊಂದಿಗೆ ಕಾಶಿನಾಥ್ ಮತ್ತೆ ಬೆಳ್ಳಿಪರದೆಗೆ ಮರಳಿದ್ದಾರೆ.

ಕೇವಲ ನಟ, ನಿರ್ದೇಶಕನಿಗಷ್ಟೆ ತರಬೇತಿ ಕೊಟ್ಟರೆ ಸಾಲದು ನಿರ್ಮಾಪಕನಿಗೂ ತರಬೇತಿ ಅವಶ್ಯಕ ಎಂಬುದು ಅವರ ಹೊಸ ಕಾನ್ಸೆಪ್ಟ್. ಮೊದಲು ದುಡ್ಡು ಹಾಕಿ ಬಳಿಕ ಎಣಿಸುವುದು ಹೇಗೆ ಎಂಬುದನ್ನು ಕಾಶಿನಾಥ್ ಹೇಳಿಕೊಡಲಿದ್ದಾರೆ. ವಿಜಯಕುಮಾರ್ ಎಂಬ ಹೊಸ ನಿರ್ಮಾಪಕರನ್ನು ಕಾಶಿನಾಥ್ ಕನ್ನಡಕ್ಕೆ ಪರಿಚಯಿಸುತ್ತಿದ್ದಾರೆ.

ಉಪೇಂದ್ರ, ಸುನಿಲ್ ಕುಮಾರ್ ದೇಸಾಯಿ, ವಿ ಮನೋಹರ್ ಸೇರಿದಂತೆ ಹಲವು ಪ್ರತಿಭೆಗಳನ್ನು ಕನ್ನಡಚಿತ್ರರಂಗಕ್ಕೆ ಕೊಟ್ಟ ಹೆಗ್ಗಳಿಕೆ ಕಾಶಿನಾಥ್ ಅವರದು. ಅವರ ಗರಡಿಯಲ್ಲಿ ಪಳಗಿದ ಎಷ್ಟೋ ಪ್ರತಿಭೆಗಳು ಮಿಂಚುತ್ತಿವೆ. ಆದರೆ ಕಾಶಿನಾಥ್ ಮಗ ಅಲೋಕ್ ಗೆ ಬ್ರೇಕ್ ಸಿಗದೆ ಇರುವುದು ದುರಂತ ಎನ್ನಬೇಕು.

ನಿರ್ಮಾಪಕ ವಿಜಯ್ ಕುಮಾರ್ ಅವರೊಂದಿಗೆ ಅವರ ಪುತ್ರ ಅಭಿಮನ್ಯು ಅವರನ್ನು ಕನ್ನಡ ಚಿತ್ರರಂಗಕ್ಕೆ ಕಾಶಿನಾಥ್ ಪರಿಚಯಿಸುತ್ತಿದ್ದಾರೆ. ಚಿತ್ರದ ಹೆಸರು '12 AM'. ಚಿತ್ರ ನಿರ್ಮಾಪಕರಿಗೆ ತರಬೇತಿ ಕೊಡಬೇಕು ಎಂಬ ಕಾಶಿನಾಥ್ ಅವರ ಐಡಿಯಾವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಸ್ವಾಗತಿಸಿದೆ.

ಚಿತ್ರೋದ್ಯಮದ ವಿವಿಧ ವಿಭಾಗಗಳ ಬಗ್ಗೆ ನಿರ್ಮಾಪಕನಿಗೆ ಅರಿವಿದ್ದರೆ ಆತ ಉತ್ತಮ ಚಿತ್ರಗಳನ್ನು ನಿರ್ಮಿಸಬಹುದು ಎಂಬುದು ಕಾಶಿನಾಥ್ ಕಳಕಳಿ. ಚಿತ್ರ ನಿರ್ಮಾಣದ ಬಗ್ಗೆ ಅಆಇಈ ಗೊತ್ತಿಲ್ಲದವರೆಲ್ಲಾ ನಿರ್ಮಾಪಕರಾದರೆ ಚಿತ್ರೋದ್ಯಮ ಹೇಗೆ ಹಳ್ಳ ಹಿಡಿಯುತ್ತದೆ ಎಂಬುದನ್ನು ನೋಡಿದ್ದೇವೆ. ಕಾಶಿನಾಥ್ ಅವರ ಹೊಸ ಐಡಿಯಾವನ್ನು ಸ್ವಾಗತಿಸೋಣ. ಕನ್ನಡ ಚಿತ್ರರಂಗಕ್ಕೆ ಪ್ರತಿಭಾನ್ವಿತ ನಿರ್ಮಾಪಕರು ಸಿಗುವಂತಾಗಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada