»   »  ರಾಜೇಂದ್ರ ಕಾರಂತ್; ಮಂಕಾಗಿ ಉಳಿದ ಪ್ರತಿಭೆ

ರಾಜೇಂದ್ರ ಕಾರಂತ್; ಮಂಕಾಗಿ ಉಳಿದ ಪ್ರತಿಭೆ

Posted By:
Subscribe to Filmibeat Kannada
*ಜಯಂತಿ

ನಸೀಬು ನೆಟ್ಟಗಿದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ರಂಗಾಯಣ ರಘು ರೂಪುಗೊಳ್ಳಬೇಕಿತ್ತು. ಅವರು ರಾಜೇಂದ್ರ ಕಾರಂತ. ರಘು ಅವರಿಗೆ ಶುಕ್ರದೆಸೆ ಚಾಲ್ತಿಯಲ್ಲಿದೆಯೋ, ಅಥವಾ ಕಾರಂತರಿಗೆ ಗುರು ಬಲವಿಲ್ಲವೋ ಗೊತ್ತಿಲ್ಲ. ಮಿಂಚಬೇಕಾದ ಪ್ರತಿಭೆ ಮಂಕಾಗಿಯೇ ಉಳಿದಿದೆ.

ಹಾಸ್ಯದ ಹೋಳಿಯಲ್ಲಿ ತನ್ನತನವನ್ನೇ ಕಳಕೊಂಡಿದ್ದ ರಮೇಶ್ ಅರವಿಂದ್‌ಗೆ ನಿರ್ದೇಶಕರಾಗಿ ಹೆಸರು ತಂದುಕೊಟ್ಟಿದ್ದು ಆಕ್ಸಿಡೆಂಟ್. ಸಿನಿಮಾ ಗೆಲ್ಲಲಿಲ್ಲ, ಆ ಮಾತು ಬೇರೆ. ಆದರೆ, ಕನ್ನಡ ಚಿತ್ರರಂಗಕ್ಕೆ ಆಕ್ಸಿಡೆಂಟ್ ಹೊಸ ಪ್ರತಿಭೆಯೊಂದನ್ನು ಪರಿಚಯಿಸಿತು. ಖಳನ ಪಾತ್ರದಲ್ಲಿ ನಟಿಸಿದ್ದ ರಾಜೇಂದ್ರ ಕಾರಂತ್ ಚಿತ್ರಕ್ಕೆ ರಭಸವೊಂದನ್ನು ಕಲ್ಪಿಸಿಕೊಟ್ಟಿದ್ದರು. ಆದರೆ, ಆ ರಭಸ ಕಾರಂತ್‌ಗೆ ವೃತ್ತಿಜೀವನದಲ್ಲಿ ಈವರೆಗೆ ಒದಗಿಬಂದಿಲ್ಲ.

ಆಕ್ಸಿಡೆಂಟ್ ಚಿತ್ರದ ಸಂದರ್ಭದಲ್ಲಿ ಮತ್ತೊಂದು ವಿಷಯವನ್ನು ನೆನಪಿಸಿಕೊಳ್ಳಬೇಕು. ಇಡೀ ಚಿತ್ರದ ಚಿತ್ರಕಥೆ ರೂಪುಗೊಳ್ಳುವಲ್ಲಿ ಕಾರಂತ್ ಪಾತ್ರ ದೊಡ್ಡದಿದೆ. ಸಂಭಾಷಣೆ ಪೂರಾ ಅವರದ್ದೇ. ನಂತರದಲ್ಲಿ ವಂಶಿ, ಬಿರುಗಾಳಿಯಂಥ ಒಂದೆರಡು ಚಿತ್ರಗಳಲ್ಲಿ ಅಭಿನಯಿಸಿದರೂ ಕಾರಂತ ಪ್ರತಿಭೆಗೆ ನ್ಯಾಯ ಸಿಕ್ಕಿದ ಉದಾಹರಣೆಯಿಲ್ಲ. ರಮೇಶ್‌ರ ಹೊಸ ಚಿತ್ರ ವೆಂಕಟ ಇನ್ ಸಂಕಟದಲ್ಲೂ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯಕ್ಕೆ ರಾಜೇಂದ್ರ ಕಾರಂತರು ರಂಗಭೂಮಿಯಲ್ಲಿ ಬಿಜಿ. ಹಾಂ, ಕೆ.ಎಸ್.ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆ ಇದೆಯಲ್ಲ, ಆ ರಸಕಾವ್ಯವನ್ನು ರಂಗಕ್ಕೆ ಅಳವಡಿಸಿದ್ದು ಇದೇ ಕಾರಂತರು. ಪ್ರಸ್ತುತ ವರಕವಿ ಬೇಂದ್ರೆ ಅವರ ಬದುಕು ವಿಚಾರಗಳನ್ನು ರಂಗಭೂಮಿಗೆ ಅಳವಡಿಸುವ ಪ್ರಯತ್ನದಲ್ಲಿದ್ದಾರೆ. ಆನಂತರದಲ್ಲಿ ಕೆ.ವಿ.ಅಯ್ಯರ್ ಅವರ ಸುಪ್ರಸಿದ್ಧ ಕಾದಂಬರಿ ರೂಪದರ್ಶಿಯನ್ನು ನಾಟಕ ಮಾಡುವ ಐಡಿಯಾ ಅವರದ್ದು. ಸಾಂಸ್ಕೃತಿಕ ಚೇತನಗಳನ್ನು ನಾಟಕದ ಮೂಲಕ ಜನರಿಗೆ ಮುಟ್ಟಿಸಬೇಕು ಎನ್ನೋದು ಈ ಪ್ರಯತ್ನಗಳ ಹಿಂದಿನ ಉದ್ದೇಶ.

ಅಂದಹಾಗೆ, ರಾಜೇಂದ್ರ ಕಾರಂತರಿಗೆ ಮಹತ್ವಾಕಾಂಕ್ಷೆಯೊಂದಿದೆ. ಹೇಗೂ ಸಣ್ಣದಾಗಿ ಸಿನಿಮಾ ನಂಟು ಬೆಳೆದಿದೆಯಲ್ಲ; ಈ ನಂಟು ಇನ್ನಷ್ಟು ಗಟ್ಟಿಗೊಂಡರೆ, ಸಿನಿಮಾ ಕಲಾವಿದರನ್ನು ಹಂತಹಂತವಾಗಿ ರಂಗಕ್ಕೆ ಯಾಕೆ ಕರೆತರಬಾರದು? ನೋಡ್ತಾ ಇರಿ. ಒಂದಲ್ಲಾ ಒಂದಿನ ಸಿನಿಮಾದವರಿಗೆ ನಾಟಕದಲ್ಲಿ ಬಣ್ಣ ಹಚ್ಚಿಸಿಯೇ ಹಚ್ಚಿಸ್ತೇನೆ ಅಂತಾರೆ ಕಾರಂತರು. ಅಸ್ತು ಅನ್ನಿ.

ಭಾರೀ 'ಆಕ್ಸಿಡೆಂಟ್', ಆದರೆ ಪ್ರೇಕ್ಷಕರು ಪಾರು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada