»   » ಭಾರೀ 'ಆಕ್ಸಿಡೆಂಟ್', ಪ್ರೇಕ್ಷಕರು ಪಾರು!

ಭಾರೀ 'ಆಕ್ಸಿಡೆಂಟ್', ಪ್ರೇಕ್ಷಕರು ಪಾರು!

Subscribe to Filmibeat Kannada

ರಮೇಶ್ ನಿರ್ದೇಶನದ ಚಿತ್ರ ಎಂದ ಮೇಲೆ ನಿರೀಕ್ಷೆಯಿಲ್ಲದೇ ಪ್ರೇಕ್ಷಕರು ಥಿಯೇಟರಿಗೆ ಹೋಗುತ್ತಾರೆಯೇ? ಅದರಲ್ಲೂ ಥ್ರಿಲ್ಲರ್ ಚಿತ್ರವೆಂದ ಮೇಲೆ ಕೇಳಬೇಕೆ? ಮುಂದೇನು? ಎಂಬ ಕಾತರ ನಿಮಗೂ ಇದ್ದರೆ ಖಂಡಿತವಾಗಿ ಚಿತ್ರವನ್ನೊಮ್ಮೆ ನೋಡಿಬನ್ನಿ. ರಮೇಶ್ ನಿಮಗೆ ನಿರಾಶೆ ಮಾಡುವುದಿಲ್ಲ.

ಸುಂದರೇಶ್, ಬೆಂಗಳೂರು

ಅತಿಯಾದ ನಿರೀಕ್ಷೆ ಅಪಾಯಕ್ಕೆ ಕಾರಣ! ಕಲ್ಪನೆಗಳ ಗೋಪುರ ಕಟ್ಟಿ, ಏನನ್ನೇ ನೋಡಿದರೂ ಅಥವಾ ಅನುಭವಿಸಿದರೂ ನಮಗೆ ತೃಪ್ತಿ ಸಿಗದು. ಹೀಗಾಗಿಯೇ 'ನಿನ್ನ ಪ್ರೀತಿಯ" ಮತ್ತು 'ಗಾಳಿಪಟ" ಚಿತ್ರಗಳು ಕೆಲವರಿಗೆ ಏನೂ ಅನ್ನಿಸಲಿಲ್ಲ. ಎಲ್ಲಾ ಇದ್ದರೂ ಇನ್ನೂ ಏನೋ ಬೇಕು ಎನ್ನುವುದು ಪ್ರೇಕ್ಷಕರಲ್ಲಿನ ಹಸಿವು! ಎಷ್ಟೇ ದೊಡ್ಡ ಏಣಿಗಳನ್ನು ಬಳಸಿದರೂ ನಿರ್ದೇಶಕರಿಗೆ ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೇರಲು ಸಾಧ್ಯವಾಗುವುದಿಲ್ಲ. ಇದು 'ಆಕ್ಸಿಡೆಂಟ್" ಚಿತ್ರಕ್ಕೂ ಅನ್ವಯವಾಗುತ್ತದೆ.

ತಮಾಷೆ ಚಿತ್ರಗಳ ಜಾಡಿನಿಂದ ಹೊರಬಂದಿರುವ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಪ್ರೇಕ್ಷಕರ ಊಹೆಗೆ ನಿಲುಕದಂತೆ ಕ್ಷಣಕ್ಕೊಂದು ತಿರುವು, ಕ್ಷಣಕ್ಕೊಂದು ಮರ್ಡರ್! ಸಸ್ಪೆನ್ಸ್ ಮತ್ತು ಥ್ರಿಲ್ ಜಾಸ್ತಿಯಾಗಲು ಹೆಣಗಳು ಬೀಳಲೇ ಬೇಕು ಎಂದು ರಮೇಶ್ ಸಹ ನಿರ್ಧರಿಸಿದಂತಿದೆ!

ಸೀಟಿನ ತುದಿಯಲ್ಲಿ ಕೂತು, 'ಮುಂದೇನು? ಮುಂದೇನು?" ಎಂಬ ಕಾತರದಿಂದ ಚಿತ್ರ ನೋಡುವಂತೆ ಮಾಡುವಲ್ಲಿ , ಭರ್ತಿ 130 ನಿಮಿಷ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ರಮೇಶ್ ತಿಣುಕಿರುವುದು, ಚಿತ್ರದ ಪ್ರತಿ ಪ್ರೇಮ್‌ನಲ್ಲೂ ಕಾಣಿಸುತ್ತದೆ. ಆದರೆ, ಅವರ ಹೋಮ್‌ವರ್ಕ್ ಚೆನ್ನಾಗಿದೆ. ಇಂಥ ಕಥಾವಸ್ತುವುಳ್ಳ ಚಿತ್ರಕ್ಕೆ ಹಾಡುಗಳ ಅಗತ್ಯವಿತ್ತೇ? ಈ ಚಿತ್ರಕ್ಕೆ ಬಲವಂತದಿಂದ ಹಾಡುಗಳನ್ನು ತುರುಕಿದಂತೆ ಕಿರಿಕಿರಿ. ಕುತೂಹಲದ ಬಿಂದುವಿನಲ್ಲಿ ಚಿತ್ರಕ್ಕೆ ಮಧ್ಯಂತರ. ಆನಂತರ ಏನಾಗುತ್ತದೆ ಎಂದು ಪ್ರೇಕ್ಷಕರು ಕೂತರೆ, ಬೇಡದ ಹಾಡು! ನಮ್ಮ ಆಕ್ಷೇಪ ಹಾಡುಗಳ ಬಗ್ಗೆಯೇ ಹೊರತು, ಹೊಸ ಸಂಗೀತ ನಿರ್ದೇಶಕ ರಿಕಿ ಕೇಜ್ ಬಗೆಗಲ್ಲ.

ಕವಿತೆಗಳನ್ನು ಸಿನಿಮಾಗೆ ಅಳವಡಿಸುವ ಪ್ರಯತ್ನ ಈ ಚಿತ್ರದಲ್ಲೂ ಇದೆ. ಬಿ.ಆರ್.ಲಕ್ಷ್ಮಣ್ ರಾವ್ ಅವರ 'ಬಾ ಮಳೆಯೇ ಬಾ.. ಬಿರುಸಾಗಿ ಬಾ" ಎಂಬ ಜನಪ್ರಿಯ ಕವಿತೆ ಇಲ್ಲಿ ಹಾಡಾಗಿದೆ. ಕ್ಯಾಸೆಟ್ ಟ್ಯೂನನ್ನೇ ಉಳಿಸಿಕೊಂಡಿದ್ದರೆ ಚೆನ್ನಾಗಿತ್ತು. ಸೋನು ನಿಗಮ್ ಕಂಠದಲ್ಲಿ ಹಾಡು ಸೊರಗಿದೆ. ಇನ್ನು ಆ ಕವಿತೆಗೂ, ಇಲ್ಲಿ ಬಳಕೆಯಾದ ಸಂದರ್ಭಕ್ಕೂ ಏನು ನಂಟೋ ತಿಳಿಯುತ್ತಿಲ್ಲ. ಎಲ್ಲಾ ಚಿತ್ರಗಳಂತೆ ಇಲ್ಲಿಯೂ ರಮೇಶ್ ಸುತ್ತಲೂ ಅದೇ ಮಿತ್ರಕೂಟ. ಆ ಗುಂಪಿಗೆ ಪೂಜಾ ಗಾಂಧಿ ಹೊಸ ಸೇರ್ಪಡೆ. ಆಕ್ಸಿಡೆಂಟ್ ರೂಪದ ಕೊಲೆಯ ರಹಸ್ಯವೇ ಚಿತ್ರದ ಬಂಡವಾಳ! ಇವುಗಳ ಮಧ್ಯೆ ಅಶ್ಲೀಲ ಸೀಡಿಗಳ ದಂಧೆ, ನಕಲಿ ಔಷಧ ಜಾಲ ಬೇರೆ.

ಬಹುದಿನಗಳ ನಂತರ ಸುಧಾರಾಣಿ ತೆರೆ ಮೇಲೆ ಕಾಣಿಸಿಕೊಂಡಿದ್ದು, ಅವರ ಪಾತ್ರ ಬಹುಕಾಲ ಮನದಲ್ಲಿ ಉಳಿಯುತ್ತದೆ. ಹಾಗೆ ನೋಡಿದರೆ ಚಿತ್ರದಲ್ಲಿರುವ ಪೂಜಾ ಮತ್ತು ರೇಖಾ ಲೆಕ್ಕಕ್ಕಷ್ಟೇ ಇದ್ದಾರೆ. ಹೊಸ ವಿಲನ್ ಮತ್ತು ಆರೋಗ್ಯ ಮಂತ್ರಿ ಗಮನ ಸೆಳೆಯುತ್ತಾರೆ. ತಿಲಕ್, ಮೋಹನ್, ಬಾಲಾಜಿ, ರಾಜೇಂದ್ರ ಕಾರಂತ್, ಲಂಡನ್ ಮಹೇಶ್, ಚೈತನ್ಯ, ಜಿಮ್ ಭಾಸ್ಕರ್, ರೇಡಿಯೋ ಜಾಕಿ ಮನೋಹರ್, ರಚನಾ ತಾರಾಗಣದಲ್ಲಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಿರ್ದೇಶಕ ದಿನೇಶ್ ಬಾಬು ಗುಡ್! ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್, ಸಂಕಲನಕಾರ ಸೌಂದರರಾಜನ್ ಚಿತ್ರದ ಅಂದ ಹೆಚ್ಚಿಸಿದ್ದಾರೆ.

ಇದೊಂದು ಹದಿನಾರಾಣೆ ಕಮರ್ಷಿಯಲ್ ಚಿತ್ರ ಎಂದು ಘೋಷಿಸಿದ್ದಕ್ಕೋ ಏನೋ ಚಿತ್ರದಲ್ಲೊಂದು ಐಟಮ್ ಸಾಂಗ್ ಸಹಾ ಇದೆ. ಈ ಹಾಡನ್ನು ಸಹಿಸಿಕೊಂಡರೆ, ವಿಶಿಷ್ಟ ನಿರ್ಮಾಣದ ಈ ಚೊಚ್ಚಲ ಪ್ರಯತ್ನವನ್ನು ಮನೆ ಮಂದಿಯೆಲ್ಲ ಎಗ್ಗಿಲ್ಲದೇ ನೋಡಲು ಯಾವುದೇ ತೊಂದರೆಯಿಲ್ಲ. ಯೋಗರಾಜ್ ಭಟ್ ಮತ್ತು ಸೂರಿ ಸೇರಿದಂತೆ ಎಲ್ಲರೂ 'ಮುಂಗಾರು ಮಳೆ ", 'ದುನಿಯಾ" ಚಿತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತಿರುವ ಈ ದಿನಗಳಲ್ಲಿ ಇಂಥದ್ದೊಂದು 'ಆಕ್ಸಿಡೆಂಟ್" ಕನ್ನಡ ಚಿತ್ರೋದ್ಯಮಕ್ಕೆ ಸಕಾಲಿಕ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada