»   »  'ರಾಜ್' ಎಂಬ ಹೊಸ ವೈರಾಣು ಜ್ವರ ಉಲ್ಬಣ!

'ರಾಜ್' ಎಂಬ ಹೊಸ ವೈರಾಣು ಜ್ವರ ಉಲ್ಬಣ!

Subscribe to Filmibeat Kannada

ಹಂದಿಜ್ವರದ ಭೀತಿಯಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಎಚ್1ಎನ್1 ಎಂಬ ಮಹಾಮಾರಿ ಹಲವಾರನ್ನು ಈಗಾಗಲೇ ನುಂಗಿ ನೀರು ಕುಡಿದಿದೆ. ಇದರ ಜೊತೆಗೆ ಕರ್ನಾಟಕ ಸೇರಿದಂತೆ ಮುಖ್ಯವಾಗಿ ಬೆಂಗಳೂರು ನಗರದಲ್ಲಿ 'ರಾಜ್'ಎಂಬ ಹೊಸ ವೈರಸ್ ಅಸ್ತಿತ್ವಕ್ಕ್ಕೆ ಬಂದಿದೆ. ಈ ವೈರಸ್ ಹಲವರ ಮಾನಸಿಕ ಕ್ಷೋಭೆಗೆ ಕಾರಣವಾಗಿದೆ!

ಈ ವೈರಾಣುವಿಗೆ ಬಲಿಯಾದವರೆಂದರೆ ಮುಖ್ಯವಾಗಿ 'ರಾಜ್' ಟಿಕೆಟ್ ಸಿಗದವರು! ಈ ವೈರಸ್ ಗೆ 'ರಾಜ್' ಟಿಕೆಟ್ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಸದ್ಯಕ್ಕೆ ಇದೊಂದೇ ರಾಮಬಾಣ! ಹೌದು 'ರಾಜ್' ಬಿಡುಗಡೆಗಾಗಿ ಹಂಬಲಿಸುತ್ತಿದ್ದ ದಿನ ಬಂದೇ ಬಿಟ್ಟಿದೆ. ಟಿಕೆಟ್ ಗಾಗಿ ಪ್ರೇಕ್ಷಕರ ಪರದಾಟ ಮಾತ್ರ ಮುಂದುವರಿದಿದೆ. ಟಿಕೆಟ್ ಸಿಗದವರಿಗೆ 'ರಾಜ್' ಜ್ವರ ಬಿಗಡಾಯಿಸಿದೆ.

'ರಾಜ್ ಚಿತ್ರದ ಮೂರು ದಿನದ ಟಿಕೆಟ್ ಗಳು ಮಾರಾಟವಾಗಿವೆ' ಎಂಬ ಫಲಕಗಳು ಟಿಕೆಟ್ ಸಿಗದವರನ್ನು ಹಂಗಿಸುತ್ತಿವೆ. ಟಿಕೆಟ್ ಗಾಗಿ ಅವರಿವರ ಮೊಬೈಲ್ ಗೆ ಎಡತಾಕುವುದು ಸಾಮಾನ್ಯ ದೃಶ್ಯವಾಗಿದೆ. ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ರಾಜ್ ಚಿತ್ರಕ್ಕೆ ಸಂಬಂಧಿಸಿದ ಹಲವರ ಮೊಬೈಲ್ ಬುಧವಾರ ಬೆಳಗ್ಗೆಯಿಂದಲೇ ನಿರ್ಜೀವವಾಗಿದೆ.

ತೆಲುಗಿನ 'ಮಗಧೀರ' ಚಿತ್ರದ ಟಿಕೆಟ್ ಗಳು ಕಾಳಸಂತೆಯಲ್ಲಿ ರು.800ಕ್ಕೆ ಮಾರಾಟವಾಗಿದ್ದವು. ಈ ದಾಖಲೆಯನ್ನು 'ರಾಜ್' ಚಿತ್ರ ಅಳಿಸಿ ಹಾಕಿದೆ. ಪಿವಿಆರ್ ಮಾತು ಹಾಗಿರಲಿ ಸಾಮಾನ್ಯ ಚಿತ್ರಮಂದಿರಗಳಲ್ಲಿ ರು.1000ಕ್ಕೆ ಟಿಕೆಟ್ ಗಳು ಮಾರಾಟವಾಗಿವೆ. ಪಿವಿಆರ್ ಮತ್ತು ಮಲ್ಟಿಫೆಕ್ಸ್ ಗಳಲ್ಲೂ ಮೂರು ದಿನಗಳ ಎಲ್ಲಾ ಆಟಗಳು ಭರ್ತಿಯಾಗಿವೆ.

'ರಾಜ್' ಜ್ವರ ಬರೀ ಸಾಮಾನ್ಯ ಪ್ರೇಕ್ಷಕರನ್ನಷ್ಟೇ ಅಲ್ಲ ರಾಜಕಾರಣಿಗಳು, ಅಧಿಕಾರಿಗಳು, ಚಿತ್ರೋದ್ಯಮಿಗಳು, ಸಾಫ್ಟ್ ವೇರ್ ಉದ್ಯೋಗಿಗಳನ್ನು ಕಾಡುತ್ತಿದೆ. ಸದ್ಯಕ್ಕೆ ಬಿಗಡಾಯಿಸಿರುವ ರಾಜ್ ಜ್ವರ ಇನ್ನೂ ಒಂದು ವಾರ ಕಾಲ ಪ್ರೇಕ್ಷಕರನ್ನು ಕಾಡಲಿದೆ. ಸದ್ಯಕ್ಕೆ ಹತೋಟಿಗೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada