twitter
    For Quick Alerts
    ALLOW NOTIFICATIONS  
    For Daily Alerts

    ದ್ವಾರಕೀಶ್ ಗೆ ಶಿಳ್ಳೆ, ವಿಷ್ಣುವರ್ಧನ್ ಗೆ ಹೊಡೀ ಚಪ್ಪಾಳೆ

    By * ಎನ್ ಟಿ ಪರಮೇಶ್
    |

    Movie Vishnuvardhana
    ದಶಕಗಳ ಹಿಂದೆ ಟೆಂಟ್ ಸಿನಿಮಾ ಹಾಲ್ ಆಗಿದ್ದ ಮತ್ತು ಈಗಿನ ಬೆಂಗಳೂರು, ಗಿರಿನಗರದಲ್ಲಿರುವ ವೆಂಕಟೇಶ್ವರ ಥಿಯೇಟರ್ ನಲ್ಲಿ ಸುದೀಪ್ ಅಭಿನಯದ ವಿಷ್ಣುವರ್ಧನ ಚಿತ್ರ ನೋಡಲು ಕಳೆದ ಭಾನುವಾರ ( ಡಿ 11) ಹೋಗಿದ್ದೆ. ತುಂಬಿ ತುಳುಕುತ್ತಿದ್ದ ಚಿತ್ರಮಂದಿರದಲ್ಲಿ ಮೊದಲ ಹದಿನೈದು ನಿಮಿಷ ಬರೀ ಶಿಳ್ಳು, ಚಪ್ಪಾಳೆಗಳದ್ದೇ ಕಾರುಬಾರು.

    ಚಿತ್ರ ವೀಕ್ಷಿಸುವ ಬದಲು ಸ್ಕ್ರೀನ್ ನಲ್ಲಿ ಡಾ. ವಿಷ್ಣುವರ್ಧನ್ ದೃಶ್ಯ ಬರುತ್ತಿದ್ದಂತೆ ಕುಣಿದು ಕುಪ್ಪಳಿಸುತ್ತಿದ್ದ ಜನಸ್ತೋಮವನ್ನೇ ನೋಡಿ ನನಗೇನೋ ಆನಂದವಾಗುತ್ತಿತ್ತು. ಜೊತೆಗೆ ಕಿಚ್ಚ ಸುದೀಪ್ ಗೆ ಇರುವ ಸ್ಟಾರ್ ವ್ಯಾಲ್ಯೂ. ಅಭಿಮಾನಿಗಳ 'ಅಭಿಮಾನದ ಮಹಾಪೂರ' ಭೋರ್ಗರೆದು ಹರಿಯುತ್ತಿದ್ದರೆ ಇತ್ತ ತಿಗಣೆಯ ಕಾಟ ನನ್ನ ಗಮನಕ್ಕೆ ಬಂದಿರಲಿಲ್ಲ.

    ಚಿತ್ರ ಸಾಗುತ್ತಿದ್ದಂತೆ ನಿರ್ಮಾಪಕ ದ್ವಾರಕೀಶ್ ತೆರೆಗೆ ಪ್ರವೇಶವಾದಾಗ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಒಂದಡೆ ಅವರ ಪರವಾಗಿ ಜೈಕಾರ ಕೂಗುತ್ತಿದ್ದರೆ ಇನ್ನೊಂಡದೆ ವಿಷ್ಣು ಅಭಿಮಾನಿಗಳು ಅದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದರು.

    ಚಿತ್ರದ ಮಧ್ಯಂತರದ ವೇಳೆಯಲ್ಲೂ ದ್ವಾರಕೀಶ್ ಪರ - ವಿರೋಧ ಚರ್ಚೆಗಳು ಮುಗಿಲೇರಿತ್ತು. ಇದು ಯಾವ ಮಟ್ಟಿಗೆ ಅಂದರೆ ಅಂಟಿಸಿಕೊಂಡ ಸಿಗರೆಟ್ ಕೈ ಸುಡುವ ತನಕ ಚರ್ಚೆಯೋ ಚರ್ಚೆ. ಮಧ್ಯೆ.. ಹೋಗ್ಲಿ ಬಿಡು ಗುರು.. ನಮ್ಮಣ್ಣನ ಸಿನಿಮಾ ತಾನೇ ತೆಗೆದಿದ್ದು. ಸುಮ್ನೆ ಯಾಕೆ ಕಿತ್ತಾಡ್ತೀರಾ ಎನ್ನುವ ಸಮಜಾಯಿಷಿ ಮಾತು ಅಲ್ಲಿ ಯಾರೂ ಕೇಳುವವರಿರಲಿಲ್ಲ.

    ಚಿತ್ರದ ಒಂದು ಸನ್ನಿವೇಶದಲ್ಲಿ ನಾಯಕ ಮೊದಲ ಬಾರಿಗೆ ನಾಯಕಿಯ ಮನೆಗೆ ಬರುತ್ತಾನೆ. ನಾಯಕಿ ತನ್ನ ತಂದೆಗೆ (ದ್ವಾರಕೀಶ್) ನಾಯಕನ್ನನ್ನು ಪರಿಚಯಿಸುತ್ತಾಳೆ. ನಾಯಕಿಯ ತಂದೆ ನಾಯಕನನ್ನು ನಿನ್ನ ಹೆಸರೇನಪ್ಪಾ ಎಂದಾಗ ನಾಯಕ ವಿಷ್ಣುವರ್ಧನ ಎನ್ನುತ್ತಾನೆ. ಆಗ ದ್ವಾರಕೀಶ್ " ನನಗೂ ಒಬ್ಬ ಆಪ್ತಮಿತ್ರನಿದ್ದ ಅವನ ಹೆಸರೂ ವಿಷ್ಣು, ಡಾ. ವಿಷ್ಣುವರ್ಧನ್, ಈಗ ಅವನು ಇಲ್ಲ ಆದರೆ ನನ್ನ ಹೃದಯದಲ್ಲಿದ್ದಾನೆ " ಎಂದಾಗ ಪ್ರೇಕ್ಷಕರ ಕಡೆಯಿಂದ ತೂರಿ ಬಂದ ಕೂಗು " ಲೇ.. ಕುಳ್ಳಾ.. ಸಾಕು ಬಿಡಲೇ, ಡವ್ ಮಾಡಬೇಡ. ಬಹಳ ಆಯಿತು ನಿಂದು' ಕೇಳಿ ಒಂದು ಕ್ಷಣ ನಾನು ಅವಕ್ಕಾದೆ.

    ಚಿತ್ರದಲ್ಲಿ ಎಲ್ಲೂ ನಮ್ಮ ವಿಷ್ಣುವರ್ಧನ್ ಅವರನ್ನು ಲೇವಡಿ ಮಾಡುವ ದೃಶ್ಯ, ಸಂಭಾಷಣೆ ಇಲ್ಲ. ಬದಲಾಗಿ ಚಿತ್ರದ ನಿರ್ಮಾಪಕ ದ್ವಾರಕೀಶ್ ತನ್ನ ಆಪ್ತಮಿತ್ರನ ಮೇಲೆ ತನಗಿರುವ ಪ್ರೀತಿಯನ್ನು ತೋರಿಸಿದ್ದಾರೆ ಎನ್ನುವುದು ವಾಸ್ತವತೆ, ಯಾಕೆಂದರೆ ವಿಷ್ಣುವರ್ಧನ ಚಿತ್ರ ನಮ್ಮ ಮುಂದಿದೆ.

    ಒಟ್ಟಿನಲ್ಲಿ ಇಂದೊಂದು 100 % ಎಂಟರ್ಟೈನ್ಮೆಂಟ್ ಚಿತ್ರ. ಇದು ಆ ಚಿತ್ರದ ರಿಮೇಕಾ ಈ ಚಿತ್ರದ ರಿಮೇಕಾ ಎಂದು ಮಹಾನ್ ಸಂಶೋಧನೆಗೆ ಕೈ ಹಾಕದೆ ಕುಟುಂಬ ಸಮೇತ ಧಾರಾಳವಾಗಿ ನೋಡ ಬಹುದಾದ ಚಿತ್ರವಿದು. ಅದಕ್ಕಿಂತಲೂ ಹೆಚ್ಚಾಗಿ 'Don't miss it' ಅನ್ನಬಹುದು.

    English summary
    Oneindia Kannada reader N T Paramesh has written his experience - watching Kannada movie Vishnuvardhana.
    Tuesday, December 13, 2011, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X