»   » ಸಾನಿಯಾ ವಧುದಕ್ಷಿಣೆ 61 ಲಕ್ಷ ವರಹ

ಸಾನಿಯಾ ವಧುದಕ್ಷಿಣೆ 61 ಲಕ್ಷ ವರಹ

Posted By:
Subscribe to Filmibeat Kannada

ಸೋಮವಾರ ಏಪ್ರಿಲ್ 12ರಂದು ಟೆನಿಸ್ ತಾರೆ ಸಾನಿಯಾ ಅವರ ಕೈಹಿಡಿದ ಶೊಯೇಬ್ ಮಲಿಕ್ ನವವಧುವಿಗೆ 61 ಲಕ್ಷರೂಪಾಯಿ ವಧುದಕ್ಷಿಣೆ ಕೊಟ್ಟಿದ್ದಾನೆ. ಮದುವೆಯಾದಾಗ ಹೆಂಡತಿಗೆ ಗಂಡನಾದವನು ಪದ್ಧತಿಗೆ ಅನುಸಾರವಾಗಿ ಕೊಡಬೇಕಾದ ಧನಕನಕಾದಿಗಳ ಬಾಬತ್ತು ಇದಾಗಿದೆ. ಇದಕ್ಕೆ ಮುಸ್ಲಿಂ ಜನಾಂಗದ ಮದುವೆ ಪದ್ಧತಿಯಲ್ಲಿ ಮೆಹರ್ ಎಂದು ಕರೆಯುವರು. ಪತಿ ಕೊಟ್ಟ ಅರುವತ್ತೊಂದು ಲಕ್ಷ ವರಹಗಳನ್ನು ಸಾನಿಯಾ ತನ್ನ ವ್ಯಾನಿಟಿ ಬ್ಯಾಗಿಗೆ ತುಂಬಿಕೊಂಡರು.

ವಧುವನ್ನು ವರಿಸಿದಾತನು ತನ್ನ ಮಡದಿಗೆ ಹಣವನ್ನಾಗಲೀ,ಆಭರಣಗಳನ್ನಾಗಲೀ ಅಥವಾ ಇನ್ನಾವುದೆ ಬಗೆಯ ಸಂಪತ್ತನ್ನಾಗಲೀ ಕೊಡಬೇಕಾಗಿರುವುದು ಮುಸ್ಲಿಂ ಮದುವೆ ಸಂಪ್ರದಾಯದ ರೀತ್ಯ ಕಡ್ಡಾಯವಾಗಿರುತ್ತೆ. ಒಂದು ವೇಳೆ ಪತಿ ವಿಚ್ಛೇದನ ಮಾಡಿದರೆ ಅಥವಾ ತೀರಿಕೊಂಡರೆ ಒಂಟಿಯಾದ ಮಹಿಳೆ ಆರ್ಥಿಕವಾಗಿ ಸಬಲವಾಗಿರಲಿ ಎನ್ನುವುದೇ ಮೆಹರ್ ನ ಉದ್ದೇಶ.

ಮೆಹರ್ ಮೊತ್ತವನ್ನು 61 ಲಕ್ಷರೂಗಳಿಗೆ ನಿಗದಿಪಡಿಸಲಾಗಿದೆ ಎಂದು ಮಲ್ಲಿಕ್ ಸಾನಿಯಾ ಮದುವೆಯ ಪೌರೋಹಿತ್ಯ ವಹಿಸಿದ್ದ ಖಾಜಿ ನಜ್ ಮುದ್ದೀನ್ ಹೇಳಿದ್ದಾರೆ. ಆದರೆ, ವಿಚ್ಛೇದನ ಪಡೆದ ಮೊದಲ ಪತ್ನಿ ಆಯೇಶಾಗೆ ಮಲ್ಲಿಕ್ 500 ರೂಪಾಯಿ ಮೆಹರ್ ಕೊಟ್ಟು ಸಾನಿಯಾಗೆ ಮಾತ್ರ ಹೇರಳ ಸವಲತ್ತುಗಳನ್ನು ಕೊಟ್ಟಿದ್ದಾರೆ ಎನ್ನುವ ಸುದ್ದಿ ಹೈದರಾಬಾದಿನಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ಚಳವಳಿ ಸುದ್ದಿಗಿಂತ ಹೆಚ್ಚು ಮನೆಮನೆ ಮಾತಾಗಿದೆ.

ಮೊದಲನೆ ಮದುವೆ, ಎರಡನೆ ಮದುವೆ, ವಿಚ್ಛೇದನ, ಅಲಿಮನಿ ವಿವಾದದ ಸುತ್ತ ಸಿಲುಕಿದ್ದ ಮಲಿಕ್ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಲು ಆಯೇಶಾಗೆ ಕೋಟಿಗಟ್ಟಳೆ ರೂಪಾಯಿ ಕೊಟ್ಟಿದ್ದಾನೆಂದೂ ಸ್ಥಳೀಯ ಟಿವಿ ಚಾನಲ್ಲುಗಳು ಸುದ್ದಿ ಬಿತ್ತರಿಸುತ್ತಿವೆ. ಈ ಸುದ್ದಿಗಳಿಗೆ ಯಾವುದೇ ಸಾಕ್ಷಾಧಾರಗಳು ಕಂಡುಬರುತ್ತಿಲ್ಲ.

ಮಲಿಕ್ ಮತ್ತು ಆಯೇಶಾ ವಿಚ್ಛೇದನ ಸಂಧಾನ ಮಾತುಕತೆಗಳನ್ನು ನಡೆಸಿದ ದಳ್ಳಾಳಿಗಳು ತಮಗೆ ಆಯೇಶಾದಿಂದ ಬರಬೇಕಾದ ಕಮಿಷನ್ ಹಣ ಸಂದಾಯವಾಗಿಲ್ಲ ಎಂದು ಹೇಳುತ್ತಿದ್ದಾರೆ ಎಂಬ ಸುದ್ದಿಗಳೂ ಪ್ರಕಟಗೊಂಡಿವೆ. ಇದೇ ವೇಳೆ ಆಯೇಶಾಗೆ ಮಲ್ಲಿಕ್ ವಿಚ್ಛೇದನ ಪರಿಹಾರಧನದ ಮೊತ್ತ ತಿಂಗಳಿಗೆ 5000 ರೂಗಳಂತೆ ಮೂರು ತಿಂಗಳಿಗೆ 15,000 ರೂಗಳನ್ನು ಕೊಟ್ಟಿದ್ದಾನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada