»   »  ಹುಟ್ಟುಹಬ್ಬದಂದು ರಕ್ತದಾನ ಮಾಡಿದ ಶಿವಣ್ಣ

ಹುಟ್ಟುಹಬ್ಬದಂದು ರಕ್ತದಾನ ಮಾಡಿದ ಶಿವಣ್ಣ

Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಕ್ತದಾನ ಮಾಡುವ ಮೂಲಕ ತಮ್ಮ 48ನೇ ಹುಟ್ಟುಹಬ್ಬನ್ನು ಭಾನುವಾರ ವಿಭಿನ್ನವಾಗಿ ಆಚರಿಸಿಕೊಂಡರು. ಕೇವಲ ನಾಲ್ಕುದಿನಗಳ ಅಂತರದಲ್ಲಿ ಶಿವರಾಜ್ ಕುಮಾರ್ ರಕ್ತದಾನ ಮಾಡುತ್ತಿರುವುದು ಎರಡನೇ ಬಾರಿ.

ತಮ್ಮ ಹುಟ್ಟುಹಬ್ಬದ ನಿಮಿತ್ತ ಶಿವಣ್ಣ ತಮ್ಮ ನಿವಾಸದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ತಮ್ಮ ಅಭಿಮಾನಿಗಳಿಗೆ ಕೇಕನ್ನು ವಿತರಿಸುತ್ತಾ, ಕೇಕ್ ತಿಂದ ಬಳಿಕ ರಕ್ತ್ತದಾನ ಮಾಡುವುದನ್ನು ಮರೆಯಬೇಡಿ ಎಂದರು. ಹಾಗೆಯೇ ಸ್ವತಃ ಅವರು ರಕ್ತದಾನವನ್ನು ಮಾಡುವ ಮೂಲಕ ಅಭಿಮಾನಿಗಳನ್ನು ಪ್ರೇರೇಪಿಸಿದರು.

ರಕ್ತದಾನ ಮಾಡುವಂತೆ ಅಭಿಮಾನಿಗಳನ್ನು ಬರೀ ಬಾಯಿ ಮಾತಿನಲ್ಲಿ ಹುರಿದುಂಬಿಸಿದರೆ ಸಾಲದು. ಸ್ವತಃ ತಾವೇ ರಕ್ತದಾನ ಮಾಡಿ ತೋರಿಸಬೇಕು ಎಂಬ ಉದ್ದೇಶದಿಂದ ಶಿವಣ್ಣ ಹೀಗೆ ಮಾಡಿದರು. ಆದರೆ ಕೆಲದಿನಗಳ ಹಿಂದಷ್ಟೇ ನಿರ್ದೇಶಕ ಸಾಯಿಪ್ರಕಾಶ್ ಅವರ ಹುಟ್ಟುಹಬ್ಬದ ದಿನವೂ ಶಿವಣ್ಣ ರಕ್ತದಾನ ಮಾಡಿದ್ದರು ಎನ್ನುತ್ತವೆ ಮೂಲಗಳು.

ಜುಲೈ 8ರಂದು ತಮ್ಮ ಅಭಿಮಾನಿಗಳ ಜತೆ ಶಿವಣ್ಣ ರಕ್ತದಾನ ಶಿಬಿರದಲ್ಲಿ 'ದೇವರು ಕೊಟ್ಟ ತಂಗಿ' ಸೆಟ್ಸ್ ನಲ್ಲೇ ರಕ್ತದಾನ ಮಾಡಿದ್ದರು. ಒಮ್ಮೆ ರಕ್ತದಾನ ಮಾಡಿದ ನಂತರ ಕನಿಷ್ಠ ಮೂರು ತಿಂಗಳ ಅಂತರ ಇರಬೇಕು ಎನ್ನುತ್ತಾರೆ ವೈದ್ಯರು. ಆದರೆ ಶಿವಣ್ಣ ಈ ಅಂತರವನ್ನು ಮುರಿದು ರಕ್ತದಾನ ಮಾಡಿದ ಕಾರಣ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎನ್ನುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಲು ಶಿವರಾಜ್ ಕುಮಾರ್ ನಿರಾಕರಿಸಿದ್ದಾರೆ. ಈ ಬಗ್ಗೆ ಪುನೀತ್ ರಾಜ್ ಕುಮಾರ್ ಅವರನ್ನು ಕೇಳಿದರೆ, ಅವರು ಇಂದು ಮಾತ್ರ ರಕ್ತದಾನ ಮಾಡಿದ್ದಾರೆ ಆದರೆ ಕಳೆದ ವಾರ ರಕ್ತದಾನ ಮಾಡಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಶಿವರಾಜ್ ಕುಮಾರ್ ಸೇರಿದಂತೆ ಹಲವು ತಾರೆಗಳು ತಮ್ಮ ಹುಟ್ಟುಹಬ್ಬದ ದಿನ ರಕ್ತದಾನದಂತಹ ಅಮೂಲ್ಯ ಕಾರ್ಯವನ್ನು ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ.

(ದಟ್ಸ್ ಕನ್ನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada