»   »  ರಾಜ್ ದಿ ಶೋಮ್ಯಾನ್ ಚಿತ್ರದ ಮುನ್ನೋಟ

ರಾಜ್ ದಿ ಶೋಮ್ಯಾನ್ ಚಿತ್ರದ ಮುನ್ನೋಟ

By: * ದಟ್ಸ್ ಕನ್ನಡ, ವಿಕ ಚಿತ್ರಲೋಕ
Subscribe to Filmibeat Kannada

ಬೆಂಗಳೂರು,ಆ. 14 : ಮಗಧೀರ ಚಿತ್ರದ ಭರ್ಜರಿ ಗೆಲುವಿನಿಂದ ಕನ್ನಡ ಚಿತ್ರಗಳು ಸೋಲುತ್ತಿವೆ ಎಂದು ಕೆಲ ನಿರ್ಮಾಪಕರು ಧರಣಿ ಕುಳಿತ ಬೆನ್ನಲ್ಲೇ ರಾಜ್ ದಿ ಶೋ ಮ್ಯಾನ್' ತೆರೆ ಕಾಣುವ ಮುನ್ನ ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಕುತೂಹಲ ಹುಟ್ಟಿಸಿದೆ.

ರಾಮ್ ಚರಣ್ ತೇಜ ಅಭಿನಯದ ಮಗಧೀರ ಮತ್ತು ಪುನೀತ್ ಅಭಿನಯದ ರಾಜ್ ಚಿತ್ರಗಳ ನಡುವೆ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಎರಡು ವಾರಗಳ ಹಿಂದೆ ತೆರೆ ಕಂಡ ಮಗಧೀರ ಗಳಿಕೆಯಲ್ಲಿ ಎಲ್ಲಾ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಇದೇ ಹೊತ್ತಿಗೆ ಪ್ರೇಮ್ ನಿರ್ದೇಶನದ ರಾಜ್ ಚಿತ್ರ ತೆರೆ ಕಾಣುವ ಮುನ್ನ ಮೂರು ದಿನಗಳ ಟಿಕೆಟ್‌ಗಳು ಎಲ್ಲಾ ಕೇಂದ್ರಗಳಲ್ಲಿ ಮಾರಾಟವಾಗುವ ಮೂಲಕ ಕನ್ನಡ ಮತ್ತು ಪರಭಾಷಾ ಚಿತ್ರಗಳ ನಡುವಿನ ಹೋರಾಟಕ್ಕೆ ಮುನ್ನುಡಿ ಬರೆದಿದೆ.

ಕಾಳಸಂತೆ ಕರಾಮತ್ತು !

ಇತ್ತೀಚಿನ ದಿನಗಳಲ್ಲಿ ರಾಜ್ ಹುಟ್ಟಿಸಿದಷ್ಟು ನಿರೀಕ್ಷೆಯನ್ನು ಬೇರಾವ ಚಿತ್ರವೂ ಮಾಡಿರಲಿಲ್ಲ. ಕಾಳಸಂತೆಯಲ್ಲಿ ಎರಡು ಸಾವಿರ ರೂ.ಗೂ ಟಿಕೆಟ್ ಸಿಗುತ್ತಿಲ್ಲ. ಮಗಧೀರ ಇದೇ ರೀತಿ ಎಂಟು ನೂರಕ್ಕೆ ಮಾರಾಟವಾಗಿತ್ತು. ಒಟ್ಟು ನೂರಾ ಇಪ್ಪತ್ತು ಕೇಂದ್ರಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ. ಬರೀ ಇಲ್ಲಷ್ಟೆ ಅಲ್ಲ, ದೆಹಲಿ, ಮುಂಬಯಿ ಮತ್ತು ಅಮೆರಿಕ, ಯುಕೆ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ದುಬೈ ಸೇರಿದಂತೆ ಒಂಬತ್ತು ದೇಶಗಳಲ್ಲಿ ತೆರೆ ಕಾಣುತ್ತಿದೆ. ಕನ್ನಡದ ಮಟ್ಟಿಗೆ ಇದು ಪ್ರಥಮ.

ಒಂದು ಲೆಕ್ಕಾಚಾರದ ಪ್ರಕಾರ ಬಿಡುಗಡೆಯಾದ ಮೊದಲ ದಿನ ರಾಜ್ಯಾದ್ಯಂತ 50 ಲಕ್ಷ ಜನ ಈ ಚಿತ್ರ ವೀಕ್ಷಿಸಲಿದ್ದಾರೆ. ಬೆಂಗಳೂರಿನಲ್ಲಿ ಮೂವತ್ತು ಥಿಯೇಟರ್ ಗಳಲ್ಲಿ ತೆರೆ ಕಾಣುತ್ತಿದೆ. ಬಹುತೇಕ ಕೇಂದ್ರಗಳಲ್ಲಿ ದಿನಕ್ಕೆ ಆರು ಪ್ರದರ್ಶನ ಏರ್ಪಡಿಸುವಂತೆ ಪ್ರೇಕ್ಷಕರು ಒತ್ತಾಯಿಸುತ್ತಿದ್ದಾರೆ. ನಗರದ ಮುಖ್ಯ ಚಿತ್ರಮಂದಿರ ಸಂತೋಷ್‌ದಲ್ಲಿ ನಾಲ್ಕು ದಿನಗಳಿಂದ ಜನರು ಮುಗಿ ಬಿದ್ದಿದ್ದಾರೆ. ಟಿಕೆಟ್ ಸಿಕ್ಕವರ ಸಂತಸ, ಸಿಗದವರ ನಿರಾಸೆ ಸೇರಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಪಿವಿಆರ್, ಐನಾಕ್ಸ್, ಫನ್ ಸಿನಿಮಾಸ್ ಸೇರಿದಂತೆ ಹೈಟೆಕ್ ಚಿತ್ರಮಂದಿರಗಳಲ್ಲೂ ರಾಜ್ ಮೋಡಿಮಾಡಿದ್ದಾನೆ. ಅಲ್ಲಿ ಕೂಡ ಆನ್‌ಲೈನ್ ಬುಕಿಂಗ್ ಭರದಿಂದ ಸಾಗಿದೆ. ಐಟಿ ಬಿಟಿ, ಇಂಜಿನಿಯರ್ಸ್ ಸೇರಿದಂತೆ ಉನ್ನತ ವರ್ಗವೂ ಟಿಕೆಟ್‌ಗಾಗಿ ಒದ್ದಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಐನಾಕ್ಸ್‌ನ ಮ್ಯಾನೇಜರ್ ಸಂಪತ್.

ಜೋಗಿ ಚಿತ್ರದ ನಂತರ ಅದರ ನಾಲ್ಕು ಪಟ್ಟು ಕ್ರೇಜ್ ಹುಟ್ಟಿಸಿರುವ ರಾಜ್ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಜಾತ್ರೆಯ ಸಂಭ್ರಮ ಮೂಡಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಈ ಚಿತ್ರ ಮುಂದಿನ ದಿನಗಳಲ್ಲಿ ಮತ್ತಿನ್ನೇನನ್ನು ಮೋಡಿ ಮಾಡಲಿದೆ ಎಂದು ಕಾದು ನೋಡಬೇಕು. ಮಹಾರಾಷ್ಟ್ರದಲ್ಲಿ ಹಂದಿಜ್ವರ ಹರಡಿರುವ ಹಿನ್ನೆಲೆಯಲ್ಲಿ ಥಿಯೇಟರ್‌ಗಳಿಗೆ ರಜಾ ಘೋಷಿಸಲಾಗಿದೆ. ಹಾಗಾಗಿ ರಾಜ್ ಬಿಡುಗಡೆಯಾಗುತ್ತಿಲ್ಲ. ಚಿತ್ರಮಂದಿರ ಸೌಲಭ್ಯ ಕೊರತೆಯಿಂದಾಗಿ ತಮಿಳುನಾಡು ಹಾಗೂ ಆಂಧ್ರದಲ್ಲಿ ಕೂಡ ಒಂದು ವಾರ ಮುಂದಕ್ಕೆ ಹೋಗಿದೆ.

ಸಮಾಧಿಗೆ ಪೂಜೆ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಗೆ ರಾಜ್' ಚಿತ್ರದ ಪ್ರಿಂಟ್ ಕೊಂಡೊಯ್ದು ಮೊದಲು ಅಲ್ಲಿ ಪೂಜೆ ಸಲ್ಲಿಸಿ ನಂತರ ಥಿಯೇಟರ್‌ಗಳಿಗೆ ಕಳಿಸಿಕೊಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಎಲ್ಲೆಲ್ಲೂ ರಾಜ್ ಕಹಳೆ

ಬಿಡುಗಡೆ ಭರಾಟೆ ಚಿತ್ರಮಂದಿರಗಳು ಹೊರದೇಶ 27 ಹೊರ ರಾಜ್ಯ 20 ರಾಜ್ಯ 130 ಚಿತ್ರದ ಅವಧಿ : ಎರಡು ಗಂಟೆ ಹದಿನೈದು ನಿಮಿಷ. ನಾಯಕ ಡಾ.ರಾಜ್ ಅಭಿಮಾನಿ. ಕತೆಯ ಎಳೆಯಲ್ಲಿ ಕಿಂಚಿತ್ತೂ ಗುಟ್ಟು ಬಿಟ್ಟುಕೊಡದ ಪ್ರೇಮ್. ಜಟಾಧಾರಿಯಾಗಿ, ವಿಭಿನ್ನ ಗೆಟಪ್‌ನಲ್ಲಿ ಪುನೀತ್. ಹಿಟ್ ಹಾಡು : ಪಾರು, ಏ ಪಾರು ಮತ್ತು ಪೋಲಿ ಇವನು...ನಿಶಾ ಕೊಠಾರಿ: ರಾಮ್ ಗೋಪಾಲ್ ವರ್ಮಾ ಬತ್ತಳಿಕೆಯ ಮಿಸೈಲು! ಉಳಿದವರು ತಮ್ಮ ಚಿತ್ರ ಬಿಡುಗಡೆ ಮಾಡದೇ ಕುಳಿತಿದ್ದಾರೆ.

ಸಿನಿಮಾ ಹುಟ್ಟು ಹಾಕಿರುವ ಕ್ರೇಜ್ ನೋಡಿ ನನಗೆ ಭಯ ಆಗುತ್ತಿದೆ. ಡಬ್ಬಿಂಗ್ ಮಾಡುವಾಗ ಏನಪ್ಪಾ ಇದು. ಇಷ್ಟೊಂದು ಅದ್ಭುತವಾಗಿದೆ. ಜನ ಹೇಗೆ ಸ್ವೀಕರಿಸುತ್ತಾರಪ್ಪಾ ಎಂದು ಭಯವಾಗಿತ್ತು. ರಾಜ್ ಬಿಡುಗಡೆಗಾಗಿ ಫಾರಿನ್ ಶೂಟಿಂಗ್ ನಿಲ್ಲಿಸಿ, ಬಂದಿದ್ದೇನೆ. -ಪುನೀತ್ ರಾಜ್‌ಕುಮಾರ್

ಜೋಗಿ ಬಿಡುಗಡೆಯಾದಾಗಲೂ ಈ ಮಟ್ಟದ ಸುದ್ದಿಯಾಗಿರಲಿಲ್ಲ. ಗೆಲ್ಲುತ್ತೆ ಎಂಬ ಭರವಸೆಯಿಂದ ಮಾಡಿದ್ದೇನೆ. ಜನಕ್ಕೆ ಇಷ್ಟವಾಗುವ ಎಲ್ಲಾ ಅಂಶಗಳೂ ಇಲ್ಲಿವೆ. -ಪ್ರೇಮ್, ನಿರ್ದೇಶಕ

(ದಟ್ಸ್ ಕನ್ನಡ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada