For Quick Alerts
  ALLOW NOTIFICATIONS  
  For Daily Alerts

  ಪೂಜಾ ಗಾಂಧಿಯೊಂದಿಗೆ ಉಭಯ ಕುಶಲೋಪರಿ!

  By Rajendra
  |

  "ಮುಂಗಾರು ಮಳೆ" ಚಿತ್ರದ ಮೂಲಕ 'ನಾ ರಾಣಿ ನೀ ಮಹಾರಾಣಿ'ಯಂತೆ ಮೆರೆದ ಪೂಜಾ ಗಾಂಧಿ ಅನಿವಾಸಿ ಕನ್ನಡಿಗರನ್ನು ರಂಜಿಸಲು ಇತ್ತೀಚೆಗೆ ಸಿಂಗಪುರಕ್ಕೆ ಭೇಟಿ ನೀಡಿದ್ದರು. ಸಿಂಗಪುರದಲ್ಲಿ ನಡೆದ 7ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ತಾರಾ ಸಂಜೆ ರಂಗೇರುವುದಕ್ಕೂ ಮುನ್ನ ಅವರೊಂದಿಗೆ ನಡೆಸಿದ ಉಭಯ ಕುಶಲೋಪರಿ ಇಲ್ಲಿದೆ. ಪೂಜಾ ಗಾಂಧಿಯವರ ಕನ್ನಡ ನಿಜವಾಗಲೂ ತುಂಬಾ ಸುಧಾರಣೆ ಕಂಡಿರುವುದು ಇಲ್ಲಿದೆ ಓದಿ ಆನಂದಿಸಿ!

  ಪ್ರಶ್ನೆ: ಸಿಂಗಪುರದಲ್ಲಿ ನಡೆಯುತ್ತಿರುವ ಏಳನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ನಿಮಗೆ ಸ್ವಾಗತ. ನಿಮ್ಮ ಮೂಲ ಹೆಸರು ಸಂಜನಾ ಗಾಂಧಿ ಅಂತ ಕೇಳಿದ್ದೇವೆ, ಪೂಜಾ ಗಾಂಧಿ ಹೇಗಾದಿರಿ?

  ಪೂಜಾ: ಧನ್ಯವಾದಗಳು. ಹೌದು ನನ್ನ ಹೆಸರು ಸಂಜನಾ, ಆಗಲೆ ಒಬ್ಬರು ಸಂಜನಾ ಹೆಸರಿನವರೊಬ್ಬರು ಇರುವುದರಿಂದ ನನಗೆ ಪೂಜಾ ಎಂದು ಪರಿಚಯಿಸಿದರು. ಆದರೆ ನನಗೆ ಸಂಜನಾ ಹೆಸರು ತುಂಬ ಇಷ್ಟ.

  ಪ್ರಶ್ನೆ: ಕರ್ನಾಟಕದಲ್ಲಿ ಅವಕಾಶ ಕಡಿಮೆ ಅಂತ ಅನೇಕ ನಟ-ನಟಿಯರು ಪರ-ರಾಜ್ಯಗಳಿಗೆ, ಪರ-ಭಾಷೆಯಲ್ಲಿ ನಟಿಸಲು ಮುಂದಾಗುತ್ತಿರುವಾಗ ಕನ್ನಡ ಚಿತ್ರರಂಗವನ್ನು ಪ್ರಧಾನವಾಗಿ ಆರಿಸಿಕೊಂಡು ಬೆಳೆಯುತ್ತಿದ್ದೀರ. ಈ ಬಗ್ಗೆ ನಿಮ್ಮ ಅನುಭವ, ಅನಿಸಿಕೆಗಳೇನು?

  ಪೂಜಾ: ಕರ್ನಾಟಕ ಬಹಳ ಸುಂದರವಾದ ಜಾಗ. ಇಲ್ಲಿಯ ಜನ ಬಹಳ ಒಳ್ಳೆಯವರು, ಮೃದು ಹೃದಯದವರು, ಸಹಾಯ ಮಾಡುವ ಮನಸ್ಸುಳ್ಳವರು. ಹೊಸತಾಗಿ ನಟನೆ ಪ್ರಾರಂಭ ಮಾಡುವವರಿಗೆ ಕರ್ನಾಟಕ, ಕನ್ನಡ ಭಾಷೆ ಒಂದು ಉತ್ತಮ ಪ್ರಯೋಗಶಾಲೆ. ನನಗೆ ಈ ತರಹದ ವಾತಾವರಣ ಮತ್ತು ಜನಗಳು ತುಂಬ ಇಷ್ಟ. ಎಲ್ಲರೂ ಒಂದೇ ಕುಟುಂಬದಂತೆ ಕೆಲಸಮಾಡುತ್ತಾರೆ. ಹಾಗಾಗಿ ನಾನು ಬೇರೆ ರಾಜ್ಯದವಳೆನ್ನುವ ಭಾವನೆ ಬರದಂತೆ ಹೊಂದಿಕೊಂಡು ಬಿಟ್ಟಿದ್ದೇನೆ.

  ಪ್ರಶ್ನೆ: ಆರತಿ, ಭಾರತಿ, ಕಲ್ಪನಾ, ಮಂಜುಳಾ ಮುಂತಾದ ದಿಗ್ಗಜೆಯರನ್ನು ಕನ್ನಡ ಚಿತ್ರರಂಗ ಕಂಡಿದೆ. ಕನ್ನಡ ನಟಿಯರಲ್ಲಿ ನಿಮ್ಮ "ರೋಲ್ ಮಾಡೆಲ್" ಯಾರು? ಏಕೆ?

  ಪೂಜಾ: ನನಗೆ ಕಲ್ಪನಾ ಅವರ ನಟನೆ ತುಂಬಾ ಇಷ್ಟ. ಅವರ ಕೆಲವು ಚಿತ್ರಗಳನ್ನು ನೋಡಿದ್ದೇನೆ, ಶರಪಂಜರ ಚಿತ್ರದಲ್ಲಿ ಅವರ ನಟನೆ ಅದ್ಭುತವಾಗಿದೆ.

  ಪ್ರಶ್ನೆ: ನೀವು 29 ಚಿತ್ರಗಳಲ್ಲಿ ನಟಿಸಿದ್ದೀರ. ಅದರಲ್ಲಿ ಯಾವುದೋ ಒಂದು ಚಿತ್ರ ಹಿಟ್ ಆಗದಿರಬಹುದು, ಆದರೆ ಆ ಪಾತ್ರ ನಿಮಗೆ ತುಂಬಾ ಇಷ್ಟ ಆಗಿರಬಹುದು ಇಂತಹ ಯಾವುದಾದರೂ ಅನುಭವವಾಗಿದೆಯಾ?

  ಪೂಜಾ: ಹೌದು, 'ನಿನಗಾಗಿ ಕಾದಿರುವೆ' ಚಿತ್ರದ ಸ್ಕ್ರಿಪ್ಟ್ ತುಂಬಾ ಚೆನ್ನಾಗಿತ್ತು. ಆ ಡೈರೆಕ್ಟರ್‌ನ ತಾಯಿಯ ನಿಜಜೀವನದ ನೋವಿನ ಆಧಾರದ ಮೇಲೆ ಚಿತ್ರೀಕರಣ ಆಗಿದ್ದು. ಆ ಪಾತ್ರವನ್ನು ನಾನು ತುಂಬಾ ಮನಸ್ಸಿಟ್ಟು ಮಾಡಿದೆ, ನನಗೆ ಆ ಕ್ಯಾರಕ್ಟರ್ ತುಂಬಾ ಇಷ್ಟ ಆಗಿತ್ತು. ಚಿತ್ರ ಹಿಟ್ ಆಗಲಿಲ್ಲ, ಆದರೆ ಅದೇ ಚಿತ್ರ ಟಿವಿಯಲ್ಲಿ ಬಂದಾಗ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.

  ಪ್ರಶ್ನೆ: ನಿಮ್ಮ ನೆಚ್ಚಿನ ಚಿತ್ರ ನಟ ಅಕ್ಷಯ್ ಕುಮಾರ್ ಅಂತ ಕೇಳಿದೆ. ಅಕಸ್ಮಾತ್ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದರೆ?

  ಪೂಜಾ: ಅದು, ನಿಜ. ನಾನು ಅಕ್ಷಯ್ ಕುಮಾರ್ ಅವರ ನಟನೆಯನ್ನು ತುಂಬಾ ಚಿಕ್ಕ ವಯಸ್ಸಿನಿಂದಲೇ ಇಷ್ಟ ಪಡ್ತಿದ್ದೆ. ಖಿಲಾಡಿ, ಚಾರ್ ಸೌ ಬೀಸ್, ಧಡ್‌ಕನ್ - ಅವರ ಎಲ್ಲಾ ಚಿತ್ರಗಳೂ ನನಗೆ ಇಷ್ಟ ಆಗಿದೆ. ನನಗೆ ಅವರ ಸ್ಟೈಲ್ ತುಂಬಾ ಇಷ್ಟ. ನನಗೆ ಅವರ ಜೊತೆ ಆಕ್ಟಿಂಗ್ ಮಾಡೋಕೆ ಚಾನ್ಸ್ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಅವರು ಬೆಂಗಳೂರಿಗೆ ಬಂದಾಗ ಅವರ ಜೊತೆ ಫೋನಲ್ಲಿ ಮಾತಾಡಿದೀನಿ. ನಾನು ಈಗ ಒಂದು ಮೆಗಾ ಪ್ರೊಡಕ್ಷನ್ಸ್ ಪ್ಲಾನ್ ಮಾಡ್ತಾ ಇದೀನಿ. ನನ್ನ ಚಿತ್ರದಲ್ಲಿ ಅವರಿಗೆ ಒಂದು ಗೆಸ್ಟ್ ರೋಲ್ ಕೊಡಬೇಕೆಂದು ಆಸೆ. ಏನಾಗುತ್ತೋ ನೋಡೋಣ.

  ಪ್ರಶ್ನೆ: ನಿಮ್ಮ ಆಸೆ ನೆರವೇರಲಿ. ಸದ್ಯಕ್ಕೆ ನೀವು ಎಷ್ಟು ಚಿತ್ರಗಳಲ್ಲಿ ನಟಿಸುತ್ತೀದ್ದೀರಾ? ತುಂಬಾ ಬ್ಯುಸಿ ಆಗಿದ್ದೀರ..?

  ಪೂಜಾ: ಈಗ ನನಗೆ ಕೈಯಲ್ಲಿ ಐದು ಚಿತ್ರಗಳು ಇವೆ. ಹೌದು, ಸದ್ಯಕ್ಕೆ ತುಂಬಾ ಬ್ಯುಸಿ!

  ಪ್ರಶ್ನೆ: ಸಾರ್ವಜನಿಕ ಕ್ಷೇತ್ರಕ್ಕೆ ಬಂದ ಮೇಲೆ, ಜನಪ್ರಿಯ ತಾರೆಯಾದ ಮೇಲೆ ಬದುಕಿನಲ್ಲಿ ಪ್ರೈವಸಿ ಕಡಿಮೆಯಾಗುತ್ತಾ ಹೋಗುತ್ತದೆ. ಜನರ ಅಭಿಮಾನ ಹಾಗೂ ನಿಮ್ಮ ಪ್ರೈವಸಿ - ಇವೆರಡನ್ನೂ ನೀವು ಹೇಗೆ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತೀರಿ?

  ಪೂಜಾ: ನಾನೂ ಕೂಡ ಒಬ್ಬ ನಾರ್ಮಲ್ ಹುಡುಗೀನೆ. ನಾನೂ ಆಚೆ ಹೋಗ್ತೇನೆ, ನನ್ನ ಅಭಿಮಾನಿಗಳು ನನ್ನ ಭೇಟಿ ಮಾಡ್ತಾರೆ, ನಾನು ಯಾವತ್ತೂ ಫೋಟೋಗೆ, ಆಟೋಗ್ರಾಫ್‌ಗೆ ಇಲ್ಲಾ ಅಂತ ಹೇಳಲ್ಲ. ನಾವು ಇವೊತ್ತು ಏನಾಗಿದ್ದೇವೋ ಅದು ನಮ್ಮ ಅಭಿಮಾನಿಗಳಿಂದಾನೆ..ನಮ್ಮ ಜೀವನದಲ್ಲಿ, ವೃತ್ತಿ-ಜೀವನದಲ್ಲಿ ಏನಾಗುತ್ತಿದೆ ಅಂತ ತಿಳಿಯುವ ಅವರ ಕುತೂಹಲದಲ್ಲಿ ತಪ್ಪೇನಿಲ್ಲ..ಹೀಗಾಗಿ ನಾನು ಫೇಸ್‌ಬುಕ್ ಬಳಸ್ತೀನಿ, ಏರ್‌ಟೆಲ್‌ನಲ್ಲಿ ಬ್ಲಾಗ್ ಮಾಡ್ತೀನಿ, ಫ್ಯಾನ್ಸ್ ಜೊತೆ ವಾಯ್ಸ್ ಚಾಟ್ ಮಾಡ್ತೀನಿ, ತುಂಬಾ ಜನರನ್ನ ಭೇಟಿ ಮಾಡ್ತಾನೇ ಇರ್ತೀನಿ. ಅದು ತುಂಬಾ ಮುಖ್ಯ.

  ಪ್ರಶ್ನೆ: ಸಿಂಗಪುರದಲ್ಲಿ ನಿಮ್ಮದೇ ಒಂದು ಪ್ರೀಮಿಯರ್ ಶೋ ಆಗಬೇಕು...ನಿಮ್ಮದೇ ನಿರ್ಮಾಣದ ಯಾವುದಾದರೂ ಚಿತ್ರ...

  ಪೂಜಾ: ಖಂಡಿತ...ಖಂಡಿತ...

  ಪ್ರಶ್ನೆ: ಎಲ್ಲರೂ ಎಲ್ಲಾ ಸಿನಿಮಾ ನಟ-ನಟಿಯರನ್ನು ಕೇಳುವುದು ಒಂದೇ ಪ್ರಶ್ನೆ, 'ಮದುವೆ ಯಾವಾಗ?' ಎಂದು.

  ಪೂಜಾ: ಈ ಪ್ರಶ್ನೆ ನನ್ನ ಅಮ್ಮನಿಗೆ ಕೇಳ್ಬೇಕು! ಅಮ್ಮ, ಮನೆಯವರೆಲ್ಲಾ ಮಾಡಿಕೋ ಅಂತಾ ಹೇಳ್ತಾ ಇದಾರೆ, ಏನೂ ನಿರ್ಧಾರ ಮಾಡಿಲ್ಲ. ಕೊನೇ ಪಕ್ಷ ಇನ್ನೂ ಮೂರು ವರ್ಷ ಅಂತೂ ಆಗೊಲ್ಲ..

  ಪ್ರಶ್ನೆ: ಈಗ ಚಿತ್ರ ನಟ ,ನಟಿಯರ ಟ್ರೆಂಡ್ ಏನೆಂದರೆ ರಿಯಾಲಿಟಿ ಶೋಗಳು. ನಿಮಗೆ ಯಾವುದಾದರೂ ಆಹ್ವಾನ ಬಂದಿದೆಯಾ, ಬಂದರೆ ನೀವು ಮಾಡಬೇಕು ಅಂತಿದ್ದೀರಾ?

  ಪೂಜಾ: ಇಲ್ಲ ಸದ್ಯಕ್ಕೆ ಯಾವುದೂ ಇಲ್ಲ. ಒಳ್ಳೇ ರಿಯಾಲಿಟಿ ಶೋ ಇದ್ದರೆ ಖಂಡಿತ ಮಾಡ್ತೀನಿ, ಯಾಕೇಂದ್ರೆ ನೋಡಿ - ಚಲನ ಚಿತ್ರಗಳು ಎಲ್ಲಾ ಕಡೆ ಬಿಡುಗಡೆಯಾಗೋಲ್ಲ - ಆದರೂ ಹಣ ಕೊಟ್ಟು ಟಿಕೇಟ್ ಕೊಂಡು ನೋಡುವುದು ಎಲ್ಲರಿಗೂ ಸಾಧ್ಯವಾಗೊಲ್ಲ..ಅವರು ತಾನೇ ಏನ್ಮಾಡ್ತಾರೆ, ಟಿವಿ ನೋಡ್ತಾರೆ. ಆ ವರ್ಗದ ಜನರೊಂದಿಗೆ ಸ್ಪಂದಿಸುವುದಕ್ಕೆ ಟಿವಿಯಲ್ಲಿ ರಿಯಾಲಿಟಿ ಶೋ ಮಾಡುವುದರಲ್ಲಿ ತಪ್ಪಿಲ್ಲ.

  ಪ್ರಶ್ನೆ: ನೀವು ನಿಮ್ಮನ್ನು ಸಮಾಜಸೇವೆಯಲ್ಲೇನಾದರೂ ತೊಡಗಿಸಿಕೊಂಡಿದ್ದೀರಾ?

  ಪೂಜಾ: ಹೌದು, ನಾನು HIVಗೆ ಮತ್ತು ಕರ್ನಾಟಕದಲ್ಲಿ ಲೈಂಗಿಕ ಕಾರ್ಯಕರ್ತ ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರದ ಸಂಸ್ಥೆಗಳ ಜೊತೆ ಕೆಲಸಮಾಡುತ್ತಿದ್ದೇನೆ. ಬೇಸರದ ಸಂಗತಿ ಎಂದರೆ ಕರ್ನಾಟಕ HIVನಲ್ಲಿ 2ನೇ ಸ್ಥಾನದಲ್ಲಿದ್ದು ತುಂಬ ದುಸ್ಥಿತಿಯಲ್ಲಿದೆ. ಎಲ್ಲಾಕಡೆ ಇದರ ಬಗ್ಗೆ ಅರಿವುಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅದು ಅಲ್ಲದೆ ಲೈಂಗಿಕ ಕಾರ್ಯಕರ್ತರ ಮೂಲ ಹಕ್ಕುಗಳನ್ನು ಒದಗಿಸಲು ಮತ್ತು ಅವರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಕೆಲಸಮಾಡುತ್ತೇವೆ.

  ಪ್ರಶ್ನೆ: ನಿಮಗೆ, ಅವಕಾಶ ಸಿಕ್ಕಿದರೆ ಇಂತಹ ಪಾತ್ರ ಮಾಡಬೇಕೆನ್ನುವ ಯಾವುದಾದರು ನಿಶ್ಚಿತವಾದಂತಹ ಪಾತ್ರ ಇದೆಯಾ?

  ಪೂಜಾ: ನನಗೆ ಇತಿಹಾಸ ಪೂರ್ವದ ಸಿನಿಮಾದಲ್ಲಿ ನಟನೆ ಮಾಡಬೇಕೆಂಬ ಆಸೆ ಇತ್ತು, ಅದು ಇತ್ತೀಚೆಗಷ್ಟೆ ಈಡೇರಿತು. ನಾನು ಇತ್ತೀಚಿಗೆ ಒಂದು ತುಳು ಸಿನಿಮಾ ಮಾಡಿದೆ. ಅದರಲ್ಲಿ ನನ್ನದು ಒಂದು ರಾಜನರ್ತಕಿಯ ಪಾತ್ರ, ಈ ಸಿನಿಮಾ ಸುಮಾರು 400 ವರ್ಷಗಳ ಹಳೆಯ ಕತೆಯ ಆಧಾರಿತವಾದದ್ದು. ನನ್ನ ಒಂದು ಕನಸು ನನಸಾದಂತೆ ಆಯಿತು.

  ಪ್ರಶ್ನೆ: ನಮ್ಮೊಂದಿಗೆ ಬಹಳ ಸ್ನೇಹಪೂರ್ವಕವಾಗಿ, ಸರಳತೆಯಿಂದ ಮಾತನಾಡಿದಿರಿ. ನಿಮಗೆ ತುಂಬಾ ಧನ್ಯವಾದಗಳು.

  ಪೂಜಾ: ನಾನು ಯಾವಾಗಲೂ ಎಲ್ಲರ ಹತ್ತಿರವೂ ಮಾತಾಡುವುದೇ ಹೀಗೆ. ನಿಮಗೂ ಧನ್ಯವಾದಗಳು ಎಂದು ನಗುತ್ತಾ ತಮ್ಮ ಕಾರ್ಯಕ್ರಮದ ಸಿದ್ಧತೆಗೆ ಸ್ಟೇಜ್ ಹಿಂದೆ ನಡೆದರು ಚಿನಕುರಳಿಯಂತೆ ಪಟಪಟ ಮಾತಾಡುವ ನಮ್ಮ ಪೂಜಾ ಗಾಂಧಿ.

  ಸಂದರ್ಶಿಸಿದವರು: ಸುದ್ದಿವಾಹಿನಿ ತಂಡ (ಸುರೇಶ ಎಚ್. ಸಿ.ವೆಂಕಟ್, ಗಿರೀಶ್ ಜಮದಗ್ನಿ, ಸಿಂಗಪುರ)

  English summary
  Here is the Kannada actress Pooja Gandhi interview. Recently she participated in 7th World Kannada Cultural Convention, Singapore. Before start of star night she talked about her film career, marriage, personal life etc.,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X