»   »  ಬಾಲಿವುಡ್ ನಲ್ಲೂ ಸುರಿಯಲಿದೆ 'ಮುಂಗಾರು ಮಳೆ'

ಬಾಲಿವುಡ್ ನಲ್ಲೂ ಸುರಿಯಲಿದೆ 'ಮುಂಗಾರು ಮಳೆ'

Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದ 'ಮುಂಗಾರು ಮಳೆ' ಚಿತ್ರ ಹಿಂದಿಗೆ ರೀಮೇಕ್ ಆಗಲಿದೆ. ಬಾಲಿವುಡ್ ನ ಜನಪ್ರಿಯ ನಟಿ ಶೀದೇವಿ ಅವರ ಗಂಡ, ನಿರ್ಮಾಪಕ ಬೋನಿ ಕಪೂರ್ 'ಮಳೆ'ಯ ಹಿಂದಿಅವತರಣಿಕೆಯನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ.

ಗಣೇಶ್, ಪೂಜಾಗಾಂಧಿ ಅಭಿನಯದ 2006ರ ಸೂಪರ್ ಹಿಟ್ ಚಿತ್ರ ಮುಂಗಾರು ಮಳೆ ಅವರಿಬ್ಬರಿಗೂ ಕನ್ನಡ ಚಿತ್ರರಂಗದಲ್ಲಿ ಭದ್ರಸ್ಥಾನ ಕಲ್ಪಿಸಿದ್ದಷ್ಟೇ ಅಲ್ಲ ಗಳಿಕೆಯಲ್ಲೂ ದಾಖಲೆ ಸೃಷ್ಟಿಸಿತ್ತು. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರೀತಂ ಗುಬ್ಬಿ ಅವರಿಗೂ ಹೊಸ ಆಯಾಮ ಕಲ್ಪಿಸಿದ ಚಿತ್ರ.

ತೆಲುಗಿನಲ್ಲಿ 'ವಾನ', ಬಂಗಾಳಿಯಲ್ಲಿ 'ಪ್ರೇಮ್ ಕಹಿನಿ'ಯಾಗಿ ಮುಂಗಾರು ಮಳೆ ಈಗಾಗಲೇ ರೀಮೇಕ್ ಆಗಿದೆ. ಇದೀಗ ಹಿಂದಿಗೆ ರೀಮೇಕ್ ಆಗಲು ಹೊರಟಿದೆ. ಮುಂಗಾರು ಮಳೆ ಬಿಡುಗಡೆಯಾದ ಕೆಲ ದಿನಗಳಲ್ಲೇ ನಿರ್ದೇಶಕ ದಯಾಳ್ ಚಿತ್ರದ ಹಕ್ಕುಗಳನ್ನು ಖರೀದಿಸಿದ್ದರು. ನಂತರ ಈ ಚಿತ್ರವನ್ನು ಬೋನಿ ಕಪೂರ್ ಗೆ ಮಾರಿದ್ದರು. ಚಿತ್ರದ ಹಕ್ಕುಗಳು ರು.1 ಕೋಟಿಗೆ ಮಾರಾಟವಾಗಿವೆ ಎಂಬ ಸುದ್ದಿಯೂ ಇದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮತ್ತು ಛಾಯಾಗ್ರಾಹಕ ಸಂತೋಷ್ ಶಿವನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 'ಜಾನೆ ತೂ ಯಾ ಜಾನೆ ನಾ' ಖ್ಯಾತಿಯ ಇಮ್ರಾನ್ ಖಾನ್ ಅಥವಾ 'ಸಾವರಿಯಾ' ಚಿತ್ರದರಣಬೀರ್ ಕಪೂರ್ ಚಿತ್ರದ ನಾಯಕ ನಟನಾಗಿ ನಟಿಸುವ ಸಾಧ್ಯತೆ ಇದೆ. ಚಿತ್ರದ ನಾಯಕಿ ಮತ್ತು ಇತರೆ ತಾರಾಗಣದ ಆಯ್ಕೆ ಇನ್ನೂ ಅಂತಿಮವಾಗಿಲ್ಲ.

ಮುಂಗಾರು ಮಳೆ ತೆಲುಗು ಅವತರಣಿಕೆ 'ವಾನ'ಚಿತ್ರ ಸೋತಿತ್ತು. ಆದರೆ ಬಂಗಾಳಿಯಲ್ಲಿ ಗೆದ್ದಿತ್ತು. ಇದೀಗ ಹಿಂದಿಗೆ ರೀಮೇಕ್ ಆಗುತ್ತಿದ್ದು ಅಲ್ಲೂ ಹಣದ ಮಳೆ ಸುರಿಸುತ್ತದೋ ಕಾದು ನೋಡಬೇಕು. ಪರಭಾಷಾ ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗುತ್ತಿದ್ದರೆ ಕನ್ನಡ ಚಿತ್ರವೊಂದು ಹಿಂದಿಗೆ ರೀಮೇಕ್ ಆಗುತ್ತಿರುವುದು ಹೆಮ್ಮೆಯ ವಿಷಯ.

ಬೋನಿ ಕಪೂರ್ ಪ್ರೊಡಕ್ಷನ್ಸ್ ನ ಕಾರ್ಯಕಾರಿ ನಿರ್ಮಾಪಕ ಶಾಮ್ ಸುಂದರ್ ಮಾತನಾಡುತ್ತಾ, ಹಿಂದಿ ಅವತರಣಿಕೆಯಲ್ಲಿ ಪಂಜಾಬಿ ಮಾಧುರ್ಯವಿರುತ್ತದೆ. ಬಾಲಿವುಡ್ ಪ್ರೇಕ್ಷಕರು ಖಂಡಿತ ಈ ಚಿತ್ರವನ್ನು ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada