»   » 'ಮಂದಹಾಸ'ಕ್ಕೆ ರಾಜ್ಯಪಾಲರ ಕ್ಲಾಪ್

'ಮಂದಹಾಸ'ಕ್ಕೆ ರಾಜ್ಯಪಾಲರ ಕ್ಲಾಪ್

By: * ಶಾಮಿ
Subscribe to Filmibeat Kannada

ಆಡ್ವಿಕ್ ಮೋಷನ್ ಪಿಚ್ಚರ್ಸ್ ಪ್ರೈ ಲಿ. ಸಂಸ್ಥೆಯ ಲಾಂಛನದಲ್ಲಿ ಬಸವ ರೆಡ್ಡಿ ಅವರು ನಿರ್ಮಿಸುತ್ತಿರುವ 'ಮಂದಹಾಸ' ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಆರಂಭವಾಯಿತು. ಮಂಗಳವಾರ ಬೆಳಗ್ಗೆ ಹೋಟೆಲ್ ಲಲಿತ್ ಅಶೋಕ್ ಸಭಾಂಗಣದಲ್ಲಿ ಜರುಗಿದ ಮುಹೂರ್ತ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಪಾರ್ವತಮ್ಮ ರಾಜ್ ಕುಮಾರ್ ಕ್ಯಾಮರಾ ಗುಂಡಿ ಒತ್ತಿ ಚಿತ್ರಕ್ಕೆ ಚಾಲನೆ ಕೊಟ್ಟರು. ಉದ್ಯಮಿ ಅಶೋಕ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಳೆದ ವರ್ಷ ತೆರೆಕಂಡ ನೀನೇ ನೀನೇ ಚಿತ್ರವನ್ನು ನಿರ್ಮಿಸಿದ್ದ ಉದ್ಯಮಿ ಬಸವ ರೆಡ್ಡಿಯವರಿಗೆ 'ಮಂದಹಾಸ' ದ್ವಿತೀಯ ಚುಂಬನ. ಪ್ರೇಮ ಪ್ರೀತಿ ಮತ್ತು ಸಂಗೀತ ಸ್ಯಾಂಡ್ ವಿಚ್ ಆಗಿರುವ ಚಿತ್ರಕ್ಕೆ ತ್ರಿಕೋನ ಪ್ರೇಮದ ಕಥಾಹಂದರವಿದೆ. ಜೋಶ್ ಚಿತ್ರದ ನಾಯಕ ಯುವಕ ರಾಕೇಶ್ ಮಂದಹಾಸದ ನಾಯಕ. ಅವರ ಜತೆಗಾತಿ ನಾಯಕಿಯ ಹೆಸರು ದಕ್ಷಿಣ ಕನ್ನಡ ಜಿಲ್ಲೆ ಮೂಲದವರಾಗಿ ಈಗ ಮುಂಬೈನಲ್ಲಿ ಮಾಡೆಲಿಂಗ್ ವೃತ್ತಿಯಲ್ಲಿರುವ ನಿಕ್ಕಿ ಅಂತ. ನಿಕ್ಕಿ ಅವರಿಗೆ ಇದು ಮೊದಲ ಚಿತ್ರ.

ನಿರ್ದೇಶಕರು ರಾಜೇಶ್ ನಾಯರ್ ಅಂತ. ಸವಿಸವಿ ನೆನಪು ಚಿತ್ರದ ನಿರ್ದೇಶಕ ಕಂ ಕ್ಯಾಮರಾ ಸಂತೋಷ್ ರೈ ಪಥಾಜೆ ಮಂದಹಾಸಕ್ಕೆ ಕ್ಯಾಮರಾ ಕಣ್ಣಾಗುತ್ತಾರೆ ಮಾತ್ರ. ಚಿತ್ರದ ಉಳಿದ ಪಾತ್ರವರ್ಗದಲ್ಲಿ ಮೊದಲಬಾರಿಗೆ ನಟಿಸುತ್ತಿರುವ ಯುವಕ ಚೇತನ್ ಮೂಲತಃ ಗಾಯಕ ಹಾಗೂ ನೃತ್ಯಪಟು. ಪ್ರಣಯರಾಜ ಧಡೂತಿ ಶ್ರೀನಾಥ್, ಪತ್ರಕರ್ತ ವಿಜಯಸಾರಥಿ, ಆಲೋಕ್ ಮುಂತಾದವರಿರುತ್ತಾರೆ. ಸಂಗೀತ ವೀರ ಸಮರ್ಥ್.

ಕನ್ನಡ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ರಾಜ್ಯಪಾಲರು ಭಾಗವಹಿಸಿದ ನಿದರ್ಶನಗಳು ಅತಿ ಕಡಿಮೆ. 2002ರಲ್ಲಿ ರಾಜ್ಯಪಾಲರಾಗಿದ್ದ ರಮಾದೇವಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಉದಾಹರಣೆಗಳು ನಮ್ಮ ಮುಂದೆ ಇವೆಯಾದರೂ, ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಹಂಸರಾಜ್ ಭಾರದ್ವಾಜ್ ದಾಖಲೆ ಬರೆದರೆಂದೇ ಹೇಳಬಹುದು.

ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಅವರು 20 ನಿಮಷಗಳ ಕಾಲ ಉಪನ್ಯಾಸ ಮಾಡಿದರು. ಸಾಮಾನ್ಯವಾಗಿ ರಾಜ್ಯಪಾಲರು ಮುದ್ರಿತ ಭಾಷಣದ ಪ್ರತಿಯನ್ನು ಪಠಣ ಮಾಡುವುದು ಭಾರತದಲ್ಲಿ ರೂಢಿಯಾದರೂ, ಭಾರದ್ವಾಜ್ ಆ ಸಂಪ್ರದಾಯವನ್ನು ಮುರಿದು ಲೀಲಾಜಾಲವಾಗಿ ಮಾತನಾಡಿದರು. ಅವರ ಭಾಷಣದ ಸಾರಾಂಶವನ್ನು ನೀವು ಆನಂತರ ನಮ್ಮ ವಾಹಿನಿಯಲ್ಲಿ ಓದುತ್ತೀರಿ.

ಮುಹೂರ್ತ ಸಮಾರಂಭಕ್ಕೆ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಬರುವುದಿತ್ತು. ಆದರೆ ಕೆಲವು ದಿನಗಳಿಂದ ಅವರಿಗೆ ಹುಷಾರು ತಪ್ಪಿರುವುದರಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ಅವರ ಕಾರ್ಯಕಾರಿ ನಿರ್ಮಾಪಕ ಕೆ. ಎಂ. ವೀರೇಶ್ ಅವರಿಗೆ ಎಸ್ ಎಂ ಎಸ್ ಸಂದೇಶ ರವಾನಿಸಿದ್ದರಂತೆ. ಪಾರ್ವತಮ್ಮ ರಾಜ್ ಕುಮಾರ್ ಅವರಿಗೂ ಮೈ ಗೆ ಚೆನ್ನಾಗಿಲ್ಲ. ಇಂದು ಬೆಳಗ್ಗೆ ಅವರಿಗೆ ರಕ್ತದೊತ್ತಡ ಕಡಿಮೆ ಆಗಿ ಬಾಧೆಪಟ್ಟಿದ್ದರು. ಆದರೂ ಸಾವರಿಸಿಕೊಂಡು ಕಾರ್ಯಕ್ರಮಕ್ಕೆ ಬಂದು ಶುಭಕೋರಿದರು. ಕಾರ್ಯಕ್ರಮ ನಿರೂಪಣೆ ಅಪರ್ಣ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada