»   »  ಬಾಲಿವುಡ್ ಗೆ ಜಿಗಿದ ಪ್ರಬುದ್ಧ ನಟ ಕಿಶೋರ್

ಬಾಲಿವುಡ್ ಗೆ ಜಿಗಿದ ಪ್ರಬುದ್ಧ ನಟ ಕಿಶೋರ್

Subscribe to Filmibeat Kannada

ಕನ್ನಡದ ಪ್ರಬುದ್ಧ ನಟ ಕಿಶೋರ್ ಹಿಂದಿ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಇನ್ನೂ ಹೆಸರಿಡದಅಭಯ್ ಡಿಯೋಲ್ ಮತ್ತು ಕಮಲ ಹಾಸನ್ ಮಗಳು ಶ್ರುತಿ ಹಾಸನ್ ನಟಿಸುತ್ತಿರುವ ಹಿಂದಿ ಚಿತ್ರದಲ್ಲಿ ಕಿಶೋರ್ ಖಳ ನಟನಾಗಿ ಕಾಣಿಸಲಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ 'ರಾವಣ'ಚಿತ್ರದಲ್ಲೂ ಕಿಶೋರ್ ನಟಿಸುತ್ತಿರುವುದು ವಿಶೇಷ.

ಕನ್ನಡದ ಮತ್ತೊಬ್ಬ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರಿಗಿಂತಲೂ ಚಿತ್ರರಂಗದಲ್ಲಿ ಕಿಶೋರ್ ಬಹಳ ವೇಗವಾಗಿ ಹಿಂದಿ ಚಿತ್ರರಂಗದೆಡೆಗೆ ಹೆಜ್ಜೆ ಹಾಕಿರುವುದು ವಿಶೇಷ. ಕನ್ನಡದಲ್ಲಿ ಸೈ ಅನ್ನಿಸಿಕೊಂಡು ತಮಿಳಿನಲ್ಲಿ ಮಿಂಚಿ ಈಗ ಹಿಂದಿಗೆ ಕಿಶೋರ್ ಜಿಗಿದಿರುವುದೇ ಇದಕ್ಕೆ ಸಾಕ್ಷಿ.

ತಮಿಳು ಚಿತ್ರರಂಗದಲ್ಲಿ ಸುದೀರ್ಘ ಪಯಣದ ನಂತರ ಪ್ರಕಾಶ್ ರೈಗೆ ಅಮಿತಾಬ್ ಬಚ್ಚನ್ ಜತೆ ನಟಿಸುವ ಅವಕಾಶ ದಕ್ಕಿತು. ಆದರೆ ಕಿಶೋರ್ ಕೇವಲ ಐದು ತಮಿಳು ಚಿತ್ರಗಳಲ್ಲಿ ನಟಿಸಿ ಹಿಂದಿಯಲ್ಲಿ ಅವಕಾಶ ಗಿಟ್ಟಿಸಿದ್ದಾರೆ. ನಿರ್ದೇಶಕ ನರೇಂದ್ರಬಾಬು, ಕಿಶೋರ್, ಹರ್ಷ ಹಾಗೂ ರಾಜು ಸೇರಿ ತಯಾರಿಸಿರುವ 'ಕಬಡ್ಡಿ' ಚಿತ್ರವನ್ನು ಜುಲೈ 3ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಿಶೋರ್, ತಮಿಳಿನಲ್ಲಿ ನನ್ನನ್ನು ಅತ್ಯುತ್ತಮ ಖಳ ನಟ ಎಂದು ಗುರುತಿಸುತ್ತಿದ್ದಾರೆ. ಈ ವಿಚಾರ ನನಗೆ 'ಪೊಲ್ಲದವನ್' ಚಿತ್ರದಲ್ಲಿ ಮನವರಿಕೆಯಾಯಿತು. ತಮಿಳಿನಲ್ಲಿ ವಿಭಿನ್ನ ಆಲೋಚನೆಯ ಚಿತ್ರಗಳು ಬರುತ್ತಿವೆ. ಹಳೆ ತಲೆಮಾರಿನ ನಿರ್ಮಾಪಕರು ಸಹ ಈ ಕಾಲಕ್ಕೆ ಪ್ರಸ್ತುತವೆನಿಸುವ ಚಿತ್ರಗಳನ್ನು ನಿರ್ಮಿಸುವತ್ತ ಗಮನ ಹರಿಸಿದ್ದಾರೆ ಎಂದರು.

ಪ್ರಸ್ತುತ ಪೊಲ್ಲದವನ್ ಹಾಗೂ ಮತ್ತೆರಡು ತಮಿಳು ಚಿತ್ರಗಳಲ್ಲಿ ಕಿಶೋರ್ ನಟಿಸಿದ್ದಾರೆ. ಅಂದಹಾಗೆ ಪೊಲ್ಲದವನ್ ಚಿತ್ರದಲ್ಲಿ ನಟಿ ರಮ್ಯಾ ಮತ್ತು ಧನುಷ್ ನಟಿಸಿದ್ದು ಗೊತ್ತೇ ಇದೆ. ಸುರೇಶ್ ಅರಸ್ ನಿರ್ಮಿಸುತ್ತಿರುವ ಕನ್ನಡದ 'ಪೆರೋಲ್' ಚಿತ್ರದಲ್ಲೂ ನಟಿಸಲು ಕಿಶೋರ್ ಒಪ್ಪಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada