»   »  ಎರಡನೇ ಇನ್ನಿಂಗ್ಸ್ ಆರಂಭಿಸಿದ ಎಸ್ ಮಹೇಂದರ್

ಎರಡನೇ ಇನ್ನಿಂಗ್ಸ್ ಆರಂಭಿಸಿದ ಎಸ್ ಮಹೇಂದರ್

Subscribe to Filmibeat Kannada

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರುತಿ ಸೋಡಾ ಚೀಟಿ ನೀಡಿದ ನಂತರ ಯಾರ ಕಣ್ಣಿಗೂ ಬೀಳದೆ ಮಹೇಂದರ್ ಮೈಸೂರಿನಲ್ಲಿದ್ದರು. ಈಗ ಹೊಸ ಹುರುಪು, ಹುಮ್ಮಸ್ಸಿನೊಂದಿಗೆ ಮತ್ತೆ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಶ್ರುತಿ ಪ್ರಕರಣದ ನಂತರ ಮಹೇಂದರ್ ಗೆ ಅವಕಾಶಗಳ ಮೇಲೆ ಅವಕಾಶಗಳು ಸುರಿಮಳೆಯಾಗಿವೆ.

ಮಹೇಂದರ್ ಅವರೇ ಹೇಳುವ ಪ್ರಕಾರ, ಅವರ ಕೈಯಲ್ಲೀಗ ಮೂರು ಚಿತ್ರಗಳಿವೆ. ಮೊದಲನೆಯದು ನೆನಪಿರಲಿ ಪ್ರೇಮ್ ನಾಯಕ ನಟನಾಗಿರುವ ಚಿತ್ರ. ಈ ಚಿತ್ರವನ್ನು ನಿರ್ದೇಶಕ ಎಂ ಎಸ್ ರಮೇಶ್, ರಂಗಾಯಣ ರಘು, ಮತ್ತವರ ಗೆಳೆಯರ '24 ಫ್ರೇಂ' ಸಂಸ್ಥೆ ನಿರ್ಮಿಸುತ್ತಿದೆ. ಸ್ವತಃ ನಿರ್ದೇಶಕರಾಗಿರುವ ರಮೇಶ್ ಈ ಚಿತ್ರವನ್ನು ಮಹೇಂದರ್ ಗೆ ಒಪ್ಪಿಸಿರುವುದು ವಿಶೇಷ.

ಎರಡನೆಯ ಚಿತ್ರ ಶಿವರಾಜ್ ಕುಮಾರ್ ಅವರೊಂದಿಗೆ. ಈ ಚಿತ್ರಕ್ಕೆ 'ಹಾಡುಗಾರ' ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ರಮೇಶ್ ಯಾದವ್ ನಿರ್ಮಾಪಕರು. ಮೈಸೂರಿನಲ್ಲಿದ್ದ ಮಹೇಂದರ್ ಅವರನ್ನು ಸ್ವತಃ ಶಿವಣ್ಣನೇ ಕರೆದು ಈ ಚಿತ್ರ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದರಂತೆ.

ಇತ್ತೀಚೆಗೆ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ವಿಜಯ್ ಚಿತ್ರವನ್ನು ಮಹೇಂದರ್ ನಿರ್ದೇಶಿಸಲಿದ್ದಾರೆ. ತನಗೂ ಒಂದು ಸಿನಿಮಾ ಮಾಡಿಕೊಡಿ ಎಂದು ವಿಜಯ್ ಕೇಳಿಕೊಂಡಿದ್ದರಂತೆ. ಅದಕ್ಕೆ ಮಹೇಂದರ್ ಸಹ ಓಕೆ ಎಂದಿದ್ದಾರೆ. ಆದರೆ ಚಿತ್ರ ನಿರ್ಮಾಪಕ ಯಾರು ಎಂಬ ಗುಟ್ಟು ಇನ್ನೂ ರಟ್ಟಾಗಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada