ಹ್ಯಾಟ್ರಿಕ್ ಹೀರೋ ಮೈಲಾರಿ ಬಿಡುಗಡೆ ಮುಂದಕ್ಕೆ
ಸೆಂಚುರಿ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು 'ಮೈಲಾರಿ'ಯನ್ನು ನೋಡಲು ಇನ್ನೂ ಒಂದು ವಾರ ಕಾಲ ಕಾಯಬೇಕು. ಏಕೆಂದರೆ ಡಿಸೆಂಬರ್ 17ಕ್ಕೆ ತೆರೆಕಾಣಬೇಕಾಗಿದ್ದ 'ಮೈಲಾರಿ' ಚಿತ್ರ ಡಿಸೆಂಬರ್ 24ಕ್ಕೆ ಮುಂದೂಡಲ್ಪಟ್ಟಿದೆ.
'ಮೈಲಾರಿ' ಬಿಡುಗಡೆ ಮುಂದೂಡಲ್ಪಟ್ಟಿರುವ ಕಾರಣ ಶಿವಣ್ಣನ ಅಭಿಮಾನಿಗಳು ಚಡಪಡಿಸುವಂತಾಗಿದೆ. ಡಿಸೆಂಬರ್ 13 ಅಥವಾ 14ಕ್ಕೆ ಚಿತ್ರಕ್ಕೆ ಸೆನ್ಸಾರ್ ಆಗಬೇಕಾಗಿತ್ತು. ಆದರೆ ಅದು ಕೊಂಚ ವಿಳಂಬವಾಗಿದ್ದೇ ಚಿತ್ರ ಮುಂದೂಡಲು ಕಾರಣ ಎನ್ನಲಾಗಿದೆ.
"ನಮ್ಮ ಚಿತ್ರದ ಬಗ್ಗೆ ಈಗಾಗಲೆ ಪ್ರೇಕ್ಷಕರಲ್ಲಿ ಎಲ್ಲಿಲ್ಲದ ಕುತೂಹಲ ಉಂಟಾಗಿದೆ. ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟ ಕಾರಣ ಇನ್ನೂ ಒಂದು ವಾರ ಕಾಲ ಪ್ರಚಾರ ಮಾಡಬಹುದು. 'ಮೈಲಾರಿ' ಬಗ್ಗೆ ಚಿತ್ರೋದ್ಯಮದಲ್ಲೂ ಸದಭಿಪ್ರಾಯ ವ್ಯಕ್ತವಾಗಿದೆ. ಮುಖ್ಯವಾಗಿ ತಾಂತ್ರಿಕ ಬಳಗ ಬಗ್ಗೆ ಒಳ್ಳೆ ಮಾತುಗಳು ಕೇಳಿಬಂದಿವೆ" ಎಂದಿದ್ದಾರೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕೆ ಪಿ ಶ್ರೀಕಾಂತ್.
'ಮೈಲಾರಿ' ಒಂದು ವಾರ ತಡವಾಗಿ ಬಿಡುಗಡೆಯಾಗುತ್ತಿರುವ ಕಾರಣ ಕ್ರಿಸ್ ಮಸ್ ರಜೆಗಳು ವರವಾಗಿ ಪರಿಣಮಿಸಲಿವೆ. ಸದಾ, ಸಂಜನಾ, ರವಿ ಕಾಳೆ, ರಾಜು ತಾಳಿಕೋಟೆ ಪಾತ್ರವರ್ಗದಲ್ಲಿರುವ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ.


Click it and Unblock the Notifications











