»   » ರಮ್ಯಾ ಜೊತೆ ಧೂದ್ ಪೇಡ ದಿಗಂತ್ ಚಿತ್ರ

ರಮ್ಯಾ ಜೊತೆ ಧೂದ್ ಪೇಡ ದಿಗಂತ್ ಚಿತ್ರ

Posted By:
Subscribe to Filmibeat Kannada

ಆಷಾಢ ಮಾಸಕ್ಕೂ ಮುನ್ನ ರೀಮೇಕ್ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿವೆ. ತಮಿಳಿನಲ್ಲಿ ಶತಕ ಬಾರಿಸಿದ 'ವಿನ್ನೈಥಂಡಿ ವರುವಾಯ' ಚಿತ್ರ ಇದೀಗ ಕನ್ನಡಕ್ಕೆ ರೀಮೇಕ್ ಆಗಲು ಸಿದ್ಧತೆ ನಡೆಸಿದೆ. ಮೂಲ ಚಿತ್ರದ ನಿರ್ಮಾಪಕರಾದ ಗೌತಮ್ ವಾಸುದೇವ ಮೆನನ್ ಕನ್ನಡ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ದಿಗಂತ್ ಹಾಗೂ ರಮ್ಯಾ ಅಭಿನಯಿಸಲಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ. ಆಕ್ಷನ್, ಕಟ್ ಹೇಳುವವರು ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸಾಗಿದೆ. ಸಮೀರಾ ರೆಡ್ಡಿ ಮುಖ್ಯಭೂಮಿಕೆಯಲ್ಲಿರುವ ಮತ್ತೊಂದು ಚಿತ್ರದಲ್ಲಿ ಗೌತಮ್ ವಾಸುದೇವ ಮೆನನ್ ಬ್ಯುಸಿಯಾಗಿದ್ದಾರೆ. ಹಾಗಾಗಿ ಅವರು ಆಕ್ಷನ್, ಕಟ್ ಹೇಳುವ ಮಾತು ದೂರವೇ ಉಳಿದಿದೆ.

ಮೂಲ ಚಿತ್ರದಲ್ಲಿ ಶಿಂಬು ಹಾಗೂ ತ್ರಿಶಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಚಿತ್ರ ಇದಾಗಿತ್ತು. ಕನ್ನಡ ಚಿತ್ರಕ್ಕೆ ದಿಗಂತ್ ಹಾಗೂ ರಮ್ಯಾ ಅವರನ್ನು ಪರಿಗಣಿಸಿರುವುದಾಗಿ ಗೌತಮ್ ವಾಸುದೇವ ಮೆನನ್ ತಿಳಿಸಿದ್ದಾರೆ. ತಮಿಳಿನ 'ವರುಣಂ ಆಯಿರಂ' ಎಂಬ ಚಿತ್ರದಲ್ಲಿ ರಮ್ಯಾ ಜೊತೆ ಗೌತಮ್ ಕೆಲಸ ಮಾಡಿದ್ದರು. ಹಾಗಾಗಿ ರಮ್ಯಾ ಅಭಿನಯದ ಬಗ್ಗೆ ಗೌತಮ್ ಗೆ ಮೆಚ್ಚುಗೆಯಿದೆ.

ಧೂದ್ ಪೇಡ ದಿಗಂತ್ ರ ಭಾವಚಿತ್ರಗಳು ಹಾಗೂ ಅವರ ಅಭಿನಯದ ಹಾಡುಗಳನ್ನು ನೋಡಿ ಗೌತಮ್ ಇಂಪ್ರೆಸ್ ಆದರಂತೆ. ಚಿತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. "ವಿನ್ನೈಥಂಡಿ ವರುವಾಯ" ಚಿತ್ರವನ್ನು ಹಲವಾರು ಭಾಷೆಗಳಲ್ಲಿ ನಿರ್ಮಿಸಲು ತಮಗೆ ಕರೆ ಬರುತ್ತಿದೆ. ಆದರೆ ಕನ್ನಡದಲ್ಲಿ ನಿರ್ಮಿಸುತ್ತಿರುವುದು ಸಂತಸ ತಂದಿದೆ ಎಂದು ಗೌತಮ್ ಪ್ರತಿಕ್ರಿಯಿಸಿದ್ದಾರೆ.

ಚಿತ್ರದ ತಾರಾಗಣ ಉಳಿದ ತಾಂತ್ರಿಕ ಬಳಗದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಮೂಲ ಕಥೆಯನ್ನು ಒಂಚೂರು ಬದಲಾಯಿಸದೆ ಕನ್ನಡಕ್ಕೆ ತರುವುದಾಗಿ ಗೌತಮ್ ತಿಳಿಸಿದ್ದಾರೆ. ಆಗಸ್ಟ್ ನಲ್ಲಿ ಚಿತ್ರ ಸೆಟ್ಟೇರಲಿದೆ. ಚಿತ್ರಕ್ಕೆ ಸೂಕ್ತ ಶೀರ್ಷಿಕೆಗಾಗಿ ಹುಡುಕಾಟ ನಡೆದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada