»   »  ಎಕೆ 56ಕ್ಕೆ ಒಂದೇ ಫೈಟು, ರೇಟು ಒಂದು ಕೋಟಿ

ಎಕೆ 56ಕ್ಕೆ ಒಂದೇ ಫೈಟು, ರೇಟು ಒಂದು ಕೋಟಿ

Posted By: *ಜಯಂತಿ
Subscribe to Filmibeat Kannada

ಓಂಪ್ರಕಾಶ್ ರಾವ್ ದಶಕದ ನಂತರ ಕಥೆಯೊಂದನ್ನು ಉಜ್ಜಿ ಉಜ್ಜಿ ಹೊಸ ಸಿನಿಮಾಗೆ ಆಕ್ಷನ್, ಕಟ್ ಹೇಳಲು ಈಗ ಸನ್ನದ್ಧರಾಗಿದ್ದಾರೆ. ಅವರು ಕಥೆಗಷ್ಟೇ ಚೌಕಟ್ಟು ಹಾಕಿಕೊಂಡಿದ್ದಾರೆಯೇ ವಿನಾ ಬಜೆಟ್‌ಗಲ್ಲ. ಒಂದು ಫೈಟಿಗೆ ಒಂದು ಕೋಟಿ ರೂಪಾಯಿ ಇಟ್ಟುಕೊಂಡು ಈಗಾಗಲೇ ಸಿದ್ಧತೆ ನಡೆಸಿರುವ ಚಿತ್ರದ ಹೆಸರು 'ಎ.ಕೆ.56".

ಸೋಮವಾರ (ಸೆ. 14) ಬುಲ್ ಟೆಂಪಲ್‌ನಲ್ಲಿ ದೊಡ್ಡ ಗಣೇಶನಿಗೆ ನಮಿಸಿ, ಕುಂಕುಮ ಇಟ್ಟುಕೊಂಡು ಆಚೆಗೆ ಬಂದಮೇಲೆ ಓಂಪ್ರಕಾಶ್ ರಾವ್ ಯಥಾಪ್ರಕಾರ ತಮ್ಮದೇ ಸಂಸ್ಕೃತ ಪದಗಳಲ್ಲಿ ಅನೌಪಚಾರಿಕವಾಗಿ ಮಾತಾಡತೊಡಗಿದರು. ಸುದ್ದಿಗೋಷ್ಠಿಯಲ್ಲಷ್ಟೆ ಅವರು ಗಂಭೀರವಾಗಿ ಇದ್ದದ್ದು. ನಿರ್ಮಾಪಕರಾದ ಗೋವಿಂದ ರಾಜು ಹಾಗೂ ವೆಂಕಟೇಶ ಬಾಬು ಮುಖದಲ್ಲಿ ಯಾವ ಭಾವದ ನಿರಿಗೆಯೂ ಕಾಣಲಿಲ್ಲ. ಬಜೆಟ್ ಎಷ್ಟು ಎಂದರೆ ಅವರು ಮೌನಕ್ಕೆ ಸರಿದರು. ಒಳ್ಳೆಯ ಸಿನಿಮಾ ಕೊಡುವುದಷ್ಟೆ ಉದ್ದೇಶ ಎಂದು ಮಾತಿಗೆ ಪೂರ್ಣವಿರಾಮ ಹಾಕಿದರು.

ಎಲ್ಲರ ಪರವಾಗಿ ಮಾತಾಡಿದ್ದು ಓಂಪ್ರಕಾಶ್, ಓಂಪ್ರಕಾಶ್ ಹಾಗೂ ಓಂಪ್ರಕಾಶ್! 1996ರಲ್ಲಿ ಪಂಜಾಬ್‌ನಲ್ಲಿ ಕುರಿಕಾಯುವ ಹುಡುಗರು ಕೈಲಿ ಎ.ಕೆ.56 ಹಿಡಿದು ಅಡ್ಡಾಡುತ್ತಿದ್ದ ಸಂಗತಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದನ್ನು ಹಾಗೂ ಆ ಪ್ರಕರಣದ ತನಿಖೆಯ ಅರೆಬರೆ ಪೇಪರ್ ಕಟಿಂಗ್‌ಗಳನ್ನೂ ಹಿಡಿದುಕೊಂಡ ಮೇಲೆ ಹೊಳೆದ ಕಥೆಯೇ 'ಎ.ಕೆ.56".

ಹತ್ತು ವರ್ಷದಿಂದ ಸ್ಟ್ರೇಟ್ ಸಬ್ಜೆಕ್ಟ್ ಮಾಡದೇ ಇದ್ದ ಓಂಪ್ರಕಾಶ್‌ಗೆ ಈಗ ಸ್ವಮೇಕ್ ಪ್ರೀತಿ ಜಾಗೃತವಾಗಿದೆ. ಶಿವರಾಜ್ ಕುಮಾರ್ ನಾಯಕತ್ವದಲ್ಲೇ ಈ ಹೆಸರಿನ ಚಿತ್ರ ಬರಬೇಕಿತ್ತು. ಆದರೆ, ಗಳಿಗೆ ಕೂಡಿ ಬರಲಿಲ್ಲ. ಈಗ ಸಿದ್ಧಾಂತ್ ಈ ಚಿತ್ರಕ್ಕೆ ನಾಯಕರಾಗಿದ್ದಾರೆ. 'ಮಿಂಚು" ಚಿತ್ರದಲ್ಲಿ ಈಗಾಗಲೇ ನಟಿಸಿ ಅನುಭವ ಇರುವ ಅವರಿಗೆ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ನಟಿಸುವುದೇ ಭಾಗ್ಯ ಎಂಬ ಭಾವನೆ.

ಚೆನ್ನೈಗೆ ಹೋಗಿ ಹೊಡೆದಾಟ, ನಟನೆಯ ತರಬೇತಿ ಪಡೆದುಕೊಂಡು ಬಂದಿರುವ ಅವರು ಮೈತೂಕವನ್ನೂ ಈಗ ಇಳಿಸಿಕೊಂಡಿದ್ದಾರೆ. ಓಂಪ್ರಕಾಶ್ ಹೇಳುವಂತೆ ಕೆಲವೇ ತಿಂಗಳ ಹಿಂದೆ ಅವರು ವಿ.ಬಿ.ಬೇಕರಿ ಬನ್ನಿನಂತೆ ಇದ್ದರು. ನಾಯಕಿ ನಿಖಿತಾ. ನಾಯಕನಿಗೆ ಸರಿಸಮಾನವಾದ ಪಾತ್ರ ತಮ್ಮದು ಎನ್ನುತ್ತಾ ಅವರು ತುಟಿಯನ್ನು ನಾಲಗೆಯಿಂದ ನವಿರಾಗಿ ನೀವಿಕೊಂಡು, ಕಣ್ಣರಳಿಸಿದರು. ಓಂಪ್ರಕಾಶ್ ರಾವ್ ಕೆಲಸದ ಕುರಿತೂ ಆಕೆಯ ಮಾತಲ್ಲಿ ಮೆಚ್ಚುಗೆಯಿತ್ತು.

ಒಂದು ಕೋಟಿ ವೆಚ್ಚದ ಹೊಡೆದಾಟದ ಸಂಯೋಜನೆಯನ್ನು ಪಳನಿ ರಾಜ್ ಈಗಾಗಲೇ ಮಾಡುತ್ತಿದ್ದಾರೆ. ಭಾರೀ ಭಾರೀ ಕಾರುಗಳು, ಬುಲೆಟ್ ಬೈಕುಗಳೂ ಸೇರಿ 100 ವಾಹನಗಳನ್ನು ಇದಕ್ಕಾಗಿ ಓಂಪ್ರಕಾಶ್ ಬಳಸಲಿದ್ದಾರೆ. ಇದೇ ತಿಂಗಳ 23ರಿಂದ ತುಮಕೂರು ರಸ್ತೆಯ ತ್ಯಾಮಗೊಂಡ್ಲು ಬಳಿ ಹೊಡೆದಾಟದ ಚಿತ್ರೀಕರಣ ನಡೆಯಲಿದೆ.

ಅಭಿಮನ್ ರಾಯ್ ಈ ಚಿತ್ರಕ್ಕೆ ಎರಡು ಹಾಡುಗಳನ್ನು ಸಂಯೋಜಿಸಿದ್ದು, ಇನ್ನೂ ಮೂರು ಹಾಡುಗಳು ಸಿದ್ಧಗೊಳ್ಳಬೇಕಿವೆ. ಬೆಳಗಾವಿ, ಮೈಸೂರು, ಚಿಕ್ಕಮಗಳೂರು, ತುಮಕೂರು ಹೆದ್ದಾರಿ ಮೊದಲಾದ ಲೊಕೇಷನ್‌ಗಳಲ್ಲಿ ಚಿತ್ರೀಕರಣ ನಡೆಯಲಿದೆ. 70 ದಿನದಲ್ಲಿ ಚಿತ್ರೀಕರಣ ಮುಗಿಸುವುದು ಓಂಪ್ರಕಾಶ್ ಉದ್ದೇಶ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada