For Quick Alerts
  ALLOW NOTIFICATIONS  
  For Daily Alerts

  ಕಾಸರವಳ್ಳಿ ಚಿತ್ರದ ನಾಯಕನಾಗಿ ಬಿರಾದಾರ್!

  By Staff
  |

  ಅಮರೇಶ ನುಗಡೋಣಿ ಅವರ ಸಣ್ಣಕಥೆ 'ಸವಾರಿ"ಯನ್ನು ಸಿನಿಮಾ ಮಾಡಲಿಕ್ಕೆ ಹೊರಟಿದ್ದ ಕಾಸರವಳ್ಳಿ ಅವರೊಂದಿಗೆ ಮೊದಲು ಕೈಜೋಡಿಸಿದ್ದುದು ರಿಲಯನ್ಸ್ ಸಂಸ್ಥೆ. ಎಲ್ಲವೂ ಸರಿಯಾಗಿದ್ದಿದ್ದರೆ ಈ ವೇಳೆಗೆ ಸಿನಿಮಾ ತೆರೆಕಾಣಬೇಕಾಗಿತ್ತು. ಆದರೆ, ಆರ್ಥಿಕ ಹಿಂಜರಿತದ ನೆಪವೊಡ್ಡಿ ರಿಲಯನ್ಸ್ ಕೈಚೆಲ್ಲಿತು. ನಿರ್ಮಾಪಕರ ಶೋಧದಲ್ಲಿದ್ದ ಕಾಸರವಳ್ಳಿ ಅವರಿಗೆ ಕೈಜೋಡಿಸಿದ್ದು ಹಳೆಯ ಗೆಳೆಯ ಬಸಂತಕುಮಾರ್ ಪಾಟೀಲ್. ಚಿತ್ರದ ಹೆಸರು 'ಕನಸೆಂಬ ಕುದುರೆಯ ಬೆನ್ನೇರಿ".

  ಕಾಸರವಳ್ಳಿ-ಬಸಂತ್ ಕಾಂಬಿನೇಷನ್‌ನಲ್ಲಿ ರೂಪುಗೊಳ್ಳುತ್ತಿರುವ ಮೂರನೇ ಚಿತ್ರ 'ಕನಸೆಂಬ ಕುದುರೆಯ ಬೆನ್ನೇರಿ". 'ನಾಯಿ ನೆರಳು" ಹಾಗೂ 'ಗುಲಾಬಿ ಟಾಕೀಸ್" ಉಳಿದೆರಡು ಚಿತ್ರಗಳು. ಸೋಮವಾರ (ಸೆ.14) ರಾತ್ರಿ ಬಸಂತ್ ರೆಸಿಡೆನ್ಸಿಯಲ್ಲಿ ನಡೆದ ಸ್ದುದಿಗೋಷ್ಠಿಯಲ್ಲಿ ಬಸಂತ್‌ರ ಮುಖದಲ್ಲಿ ಧನ್ಯತಾಭಾವ. 'ಕಾಸರವಳ್ಳಿ" ನಮ್ಮ ಸಂಸ್ಥೆಗೆ ಹೊಸ ವರ್ಚಸ್ಸು ತಂದುಕೊಟ್ಟ ನಿರ್ದೇಶಕ ಎನ್ನುವುದು ಅವರ ಅನಿಸಿಕೆ.

  ನುಗಡೋಣಿ ಅವರ 'ಸವಾರಿ" ಕಥೆಯನ್ನು ಸಿನಿಮಾಕ್ಕೆ ತಕ್ಕಂತೆ ಕಾಸರವಳ್ಳಿ ಬದಲಿಸಿಕೊಂಡಿದ್ದಾರೆ. ಕಥೆಗಾರ ಗೋಪಾಲಕೃಷ್ಣ ಪೈ ಚಿತ್ರಕಥೆ ರಚಿಸುವಲ್ಲಿ ನೆರವಾಗಿದ್ದಾರೆ. ಮೊದಲಬಾರಿಗೆ ವಿ.ಮನೋಹರ್ ಗಿರೀಶ್‌ರ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

  ಶೇಷಾದ್ರಿ ನಿರ್ದೇಶನದ 'ಮುನ್ನುಡಿ" ಚಿತ್ರಕ್ಕೆ ಮನೋಹರ್ ನೀಡಿದ್ದ ಸಂಗೀತ ಕಾಸರವಳ್ಳಿ ಅವರಿಗೆ ಇಷ್ಟವಾಗಿತ್ತಂತೆ. 'ಬ್ಯಾರಿಗಳ ಬದುಕನ್ನು ಸಂಗೀತದ ಮೂಲಕವೇ ಮನೋಹರ್ ಅದ್ಭುತವಾಗಿ ಬಿಂಬಿಸಿದ್ದರು. ಅಂಥ ಸವಾಲು-ಅವಕಾಶ ಈ ಚಿತ್ರದಲ್ಲೂ ಇದೆ" ಎಂದರು ಕಾಸರವಳ್ಳಿ.

  'ನನ್ನ ವೃತ್ತಿಜೀವನದಲ್ಲಿ ಕಾಸರವಳ್ಳಿ ಅವರ ಚಿತ್ರಕ್ಕೆ ಸಂಗೀತ ನೀಡಲು ಅವಕಾಶ ದೊರಕಿರುವುದು ಹೆಮ್ಮೆಯ ಸಂಗತಿ. ಸದ್ಯಕ್ಕೆ ನನ್ನ ಮನಸ್ಸು ಖಾಲಿಯಾಗಿದೆ. ತುಸು ಆತಂಕವೂ ಇದೆ. ಆದರೆ ಕಾಸರವಳ್ಳಿ ಅವರ ಮಾರ್ಗದರ್ಶನದಲ್ಲಿ ಉತ್ತಮ ಸಂಗೀತ ನೀಡುವ ಭರವಸೆಯಿದೆ" ಎಂದು ಮನೋಹರ್ ಭಾವುಕರಾಗಿ ಹೇಳಿದರು.

  ಈವರೆಗೆ ಸಣ್ಣಪುಟ್ಟ ನಗೆಪಾತ್ರಗಳ್ಲಲಿ ಕಾಣಿಸಿಕೊಳ್ಳುತ್ತಿದ್ದ ಬಿರಾದಾರ್ 'ಕನಸೆಂಬ ಕುದುರೆಯ ಬೆನ್ನೇರಿ" ಚಿತ್ರದ ನಾಯಕ. ಉಮಾಶ್ರೀ ನಾಯಕಿ. ಬಿರಾದಾರ್‌ಗೆ ಕಾಸರವಳ್ಳಿ ಅವರಂಥ ಶ್ರೇಷ್ಠ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸುತ್ತಿರುವ ಬಗ್ಗೆ ಹೆಮ್ಮೆ. ಗುಲಾಬಿ ನಂತರ ಮತ್ತೆ ಗಿರೀಶ್ ಗರಡಿಗೆ ಪ್ರವೇಶ ದೊರೆತ ಖುಷಿ ಉಮಾಶ್ರೀ ಅವರದ್ದು. ಪ್ರಸಿದ್ಧ ರಂಗಕಲಾವಿದ ಗುಡಿಗೇರಿ ಬಸವರಾಜ್ ತಾರಾಗಣದ ಮತ್ತೊಂದು ಆಕರ್ಷಣೆ.

  'ದ್ವೀಪ" ಚಿತ್ರದ ಛಾಯಾಗ್ರಹಣಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಎಚ್.ಎಂ.ರಾಮಚಂದ್ರ 'ಕನಸೆಂಬ ಕುದುರೆಯ ಬೆನ್ನೇರಿ" ಚಿತ್ರಕ್ಕೂ ಛಾಯಾಗ್ರಹಣ ಮಾಡಲಿದ್ದಾರೆ. ಅಲ್ಲಿ ಹೀರೋ ಅನ್ನಿಸಿಕೊಂಡಿದ್ದೆ. ಇಲ್ಲಿ ಜೀರೋ ಆಗದಿದ್ದರೆ ಸಾಕು ಎಂದರು ರಾಮಚಂದ್ರ.

  ಕಾಸರವಳ್ಳಿ ಚಿತ್ರ ಎಂದಮೇಲೆ ಪ್ರಶಸ್ತಿ ನಿರೀಕ್ಷೆ ಸಹಜ ತಾನೇ? 'ಕಾಸರವಳ್ಳಿ ಸರ್ ನಮ್ಮನ್ನೆಲ್ಲ ಮೆರೆಸಿದ್ದಾರೆ. ಆದರೆ ಅವರಿಗೆ ಈವರೆಗೆ ನಿರ್ದೇಶನ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರಕಿಲ್ಲ. ಆ ಕೊರಗು ಈ ಚಿತ್ರದ ಮೂಲಕ ಇಲ್ಲವಾಗಲಿ" ಎಂದು ಉಮಾಶ್ರೀ ಹಾರೈಸಿದರು. ಆ ಮಾತಿಗೆ ಇಡೀ ಚಿತ್ರತಂಡ ತಲೆದೂಗಿತು.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X