»   »  ತಾಜ್‌ಮಹಲ್‌ನಲ್ಲಿ ಚೆಲುವೆಯ ಹಾಡು

ತಾಜ್‌ಮಹಲ್‌ನಲ್ಲಿ ಚೆಲುವೆಯ ಹಾಡು

Subscribe to Filmibeat Kannada

ಎನ್.ಎಂ. ಸುರೇಶ್ ಯಾವಾಗಲೂ ಸಾಹಸಪ್ರಿಯರು. ಇದುವರೆಗೆ ಹೊಸಬರನ್ನು ಕಟ್ಟಿಕೊಂಡು ಹೆಣಗುತ್ತಿದ್ದರು. ಈಗ ಪ್ರಪಂಚದ 7 ಅದ್ಭುತಗಳನ್ನು ತೋರಿಸಲು 7 ರಾಷ್ಟ್ರಗಳನ್ನು ಸುತ್ತಿ ಬಂದಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ಅಪಾರ ವೆಚ್ಚದ ಚಿತ್ರವಾಗಲಿರುವ ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ಇಂಥ ಪ್ರಯತ್ನವನ್ನು ನಿರ್ದೇಶಕ ರಘುರಾಮ್ ಜೊತೆಗೂಡಿ ಮಾಡಿದ್ದಾರೆ.

ನಟ ಶಿವರಾಜ್‌ಕುಮಾರ್ ಈ ಚಿತ್ರದಲ್ಲಿ ಒಬ್ಬ ಟೂರಿಸ್ಟ್ ಗೈಡ್ ಆಗಿದ್ದು, ಮುಂಬೈ ಬೆಡಗಿ ಸೋನಾಲಿ ಚೌಹಾಣ್ ಹಾಗೂ ಹರಿಪ್ರಿಯ ಪ್ರಮುಖ ಪಾತ್ರದಲ್ಲಿದ್ದಾರೆ. ಕಳೆದ ವಾರ ಆಗ್ರಾದ ತಾಜ್‌ಮಹಲ್ ಹಾಗೂ ದೆಹಲಿ ಸುತ್ತಮುತ್ತ ಹಾಡೊಂದರ ಚಿತ್ರೀಕರಣವನ್ನು 8 ದಿನಗಳ ಕಾಲ ನಡೆಸಿದ್ದಾರೆ. ಇದಕ್ಕಾಗಿ 60 ಜನರ ಚಿತ್ರತಂಡವನ್ನು ನಿರ್ಮಾಪಕ ಸುರೇಶ್‌ರವರು ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿಬಂದಿದ್ದಾರೆ.

ಈಗಾಗಲೇ ಶೇ.60ರಷ್ಟು ಶೂಟಿಂಗ್ ಮುಗಿದಿದ್ದು, ಚೈನಾದಲ್ಲಿ ಒಂದು ದಿನದ ಚಿತ್ರೀಕರಣ ಮಾತ್ರ ಬಾಕಿ ಇದೆ. ಅಲ್ಲಿ ಅನುಮತಿಗಾಗಿ ಕಾಯುತ್ತಿದ್ದಾರೆ. ಸುರೇಶ್ ಕೈಲಿ ಈ ಚಿತ್ರ ಮಾಡಲಿಕ್ಕಾಗುವುದಿಲ್ಲ, ನಿಂತೇ ಹೋಯ್ತಂತೆ ಎಂಬ ಗಾಂಧಿನಗರದ ಹಲವಾರು ಊಹಾಪೋಹಗಳಿಗೆ ಸುರೇಶ್ ಈಗ ಫುಲ್ ಸ್ಟಾಪ್ ಹಾಕಿದ್ದಾರೆ. ತನ್ನ ಜೀವನದಲ್ಲಿಯೇ ಒಂದು ಸವಾಲಾಗಿ ಸ್ವೀಕರಿಸಿ ಈ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ.

ಹಿಂದೆ ಮಾದೇಶ ಚಿತ್ರ ನಿರ್ದೇಶಿಸಿದ ರಘುರಾಮ್ ಕಥೆ-ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಬಿಜಿಯಾಗಿರುವ ಕಬೀರ್ ಲಾಲ್ ಈ ಚಿತ್ರದ ಛಾಯಾಗ್ರಾಹಕರಾಗಿ ಪುನಃ ಕನ್ನಡಕ್ಕೆ ಪ್ರವೇಶಿಸಿದ್ದಾರೆ. ಚಿಂತನ್‌ರ ಸಂಭಾಷಣೆ, ವಿ.ಹರಿಕೃಷ್ಣರ ಸಂಗೀತ-ಸಂಯೋಜನೆ, ಇಮ್ರಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಚಂದ್ರಶೇಖರ್, ಚಿತ್ರಾ ಶೆಣೈ, ಕಾವ್ಯ, ವೆಂಕಟೇಶ್ ಪ್ರಸಾದ್, ದತ್ತಣ್ಣ, ಸಂಗೀತ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಹಾಡೊಂದನ್ನು ಸುಮಾರು 60 ಲಕ್ಷ ರೂ.ಗಳ ವೆಚ್ಚದಲ್ಲಿ ಚಿತ್ರೀಕರಿಸಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada