»   »  ನೆರೆ : ನಿಧಿ ಸಂಗ್ರಹಕ್ಕೆ ಮುಂದಾದ ಚಿತ್ರರಂಗ

ನೆರೆ : ನಿಧಿ ಸಂಗ್ರಹಕ್ಕೆ ಮುಂದಾದ ಚಿತ್ರರಂಗ

Subscribe to Filmibeat Kannada

ಬೆಂಗಳೂರು, ಅ, 16 : ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆ ಟಿಪ್ಪಣಿಗಳ ಬಂದ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ಕಲಾವಿದರು ಕೊನೆಗೂ ಧರೆಗಿಳಿದಿದ್ದಾರೆ. ಪ್ರವಾಹ ಪೀಡಿತ ಜನರ ನೆರವಿಗೆ ಚಿತ್ರರಂಗದ ನಟನಟಿಯರು ಬೀದಿಗಿಳಿದು ದೇಣಿಗೆ ಸಂಗ್ರಹಿಸಿದರು. ಹಿರಿಯ ಕಲಾವಿದರು ಜೋಳಿಗೆ ಹಿಡಿದು ಬೀದಿಗಿಳಿದಾಗ ಸಾರ್ವಜನಿಕರು, ಸಂಘ ಸಂಸ್ಥೆಗಳು ತಮ್ಮ ಕೈಲಾದಷ್ಟು ಸಹಾಯ ಮಾಡಿದರು.

ಹಿರಿಯ ನಟರಾದ ಅಂಬರೀಷ್, ಜಯಮಾಲಾ, ಅಶೋಕ್, ಶಿವರಾಜ್ ಕುಮಾರ್, ದೇವರಾಜ್, ಸುದರ್ಶನ್, ಬಿ ಸರೋಜಾದೇವಿ, ಜಯಂತಿ, ಸುಧಾರಾಣಿ, ತಾರಾ, ಸುದೀಪ್, ದರ್ಶನ್, ದಿಗಂತ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ರಾಜೇಂದ್ರ ಸಿಂಗ್ ಬಾಬು, ಅನು ಪ್ರಭಾಕರ್, ರಮ್ಯಾ, ಹೇಮಾ ಚೌಧರಿ, ಸಾರಾ ಗೋವಿಂದು, ಬುಲೆಟ್ ಪ್ರಕಾಶ್ ಸೇರಿದಂತೆ ಅನೇಕ ಕಲಾವಿದರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂಭಾಗದಲ್ಲಿಂದು ನಿರ್ಮಾಪಕರು, ವಿತರಕರು, ಪ್ರದರ್ಶಕರು, ನಿರ್ದೇಶಕರು, ತಂತ್ರಜ್ಞರು ಸಭೆ ನಡೆಸಿ ಕೋರಮಂಗಲದ ಕಡೆಗೆ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕೋರಮಂಗಲದ ಫೋರಂ ಮಾಲ್ ಬಳಿ ಇರುವ ವರನಟ ಡಾ ರಾಜ್ ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಧಿಕೃತವಾಗಿ ದೇಣಿಗೆ ಸಂಗ್ರಹ ಕಾರ್ಯ ಆರಂಭಿಸಿದರು. ತಮ್ಮ ನೆಚ್ಚಿನ ನಟನಟಿಯರು ಬೀದಿಗಿಳಿದು ನಿಧಿ ಸಂಗ್ರಹಕ್ಕೆ ಮುಂದಾಗಿದ್ದು, ಅಭಿಮಾನಿಗಳಲ್ಲಿ ಪುಳಕ ಮೂಡಿಸಿತ್ತು. ಕೆಲವರು ನೆಚ್ಚಿನ ಕಲಾವಿದರನ್ನು ನೋಡಲು ಆಗಮಿಸಿದರೆ, ಹಲವರು ಉದಾರ ಮನಸ್ಸಿನಿಂದ ಸಹಾಯ ಮಾಡಿ ನೆರೆ ಸಂತ್ರಸ್ಥರ ನೊಂದ ಜೀವಗಳಿಗೆ ಸ್ಪಂದಿಸಿದರು.

ನಿಧಿ ಸಂಗ್ರಹಕ್ಕೆ ಮುನ್ನ ಮಾತನಾಡಿದ ಮಂಡಳಿ ಅಧ್ಯಕ್ಷೆ ಜಯಮಾಲಾ, ನೆರೆ ಸಂತ್ರಸ್ಥರಿಗೆ ಅಳಿಲು ಸೇವೆ ಸಲ್ಲಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕೋರಮಂಗಲದಿಂದ ನಿಧಿ ಸಂಗ್ರಹ ಆರಂಭಿಸಲಾಗಿದ್ದು, ಸಂಜೆವರೆಗೂ ಸಂಗ್ರಹ ಮಾಡುತ್ತೇವೆ. ಹಂತ ಹಂತವಾಗಿ ಉಳಿದ ದಿನಗಳಲ್ಲಿ ದೇಣಿಗೆ ಸಂಗ್ರಹ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada