»   » ನಮ್ಮ ತಾತ ಭಾರದ್ವಾಜರ ಸಿನಿಮಾ ವ್ಯಾಖ್ಯಾನ

ನಮ್ಮ ತಾತ ಭಾರದ್ವಾಜರ ಸಿನಿಮಾ ವ್ಯಾಖ್ಯಾನ

Posted By: * ಶಾಮಿ
Subscribe to Filmibeat Kannada

ಸರಕಾರಿ ಕೆಲಸಗಳ ತುಂಬ ಒತ್ತಡದ ನಡುವೆಯೂ ಕನ್ನಡ ಸಿನಿಮಾ ಉದ್ಯಮದ ಒಂದು ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಒಪ್ಪಿಕೊಂಡೆ. ಮನುಷ್ಯನಿಗೆ ಆಗಾಗ ಇಂಥ ಬ್ರೇಕುಗಳು ಸಿಗಬೇಕು ಎಂದರು ಕರ್ನಾಟಕದ ರಾಜ್ಯಪಾಲ ತಾತಪ್ಪ ಹಂಸರಾಜ್ ಭಾರದ್ವಾಜ್. ಅವರು ಮಂಗಳವಾರ ಬೆಂಗಳೂರಿನ ಅಶೋಕ ಹೋಟೆಲಿನಲ್ಲಿ ಜರುಗಿದ ಬಸವರೆಡ್ಡಿ ನಿರ್ಮಾಣದ ಮಂದಹಾಸ ಚಿತ್ರದ ಮುಹೂರ್ತಕ್ಕೆ ಬಂದಿದ್ದರು. ಕ್ಲಾಪ್ ಮಾಡುವ ಕೆಲಸವನ್ನು ಅವರಿಗೆ ವಹಿಸಲಾಗಿತ್ತು.

ಸುಮಾರು 20 ನಿಮಿಷ ಆರಾಮವಾಗಿ ಆಶುಭಾಷಣ ಮಾಡಿದ ರಾಜ್ಯಪಾಲರಿಗೆ ಸಿನಿಮಾ ಜನರ ಒಡನಾಟ ಚೂರು ಇಷ್ಟವಾದಂತಿತ್ತು.ರಾಜಭವನದಲ್ಲಿ ಕೆಲಸದ ಒತ್ತಡ ಜಾಸ್ತಿಯಂತೆ. ಬಿಡುವಾದಾಗ, ಖಾಸಗಿ ಸಯಮದಲ್ಲಿ ಅವರಿಗೆ ಓದುವುದೆಂದರೆ, ಇಂಪಾದ ಭಜನೆ ಮತ್ತು ಚಿತ್ರಗೀತೆಗಳನ್ನು ಆಲಿಸುವುದೆಂದರೆ ತುಂಬಾ ಇಷ್ಟವಂತೆ. ನೌಷದ್ ಅಲಿ ಅವರ ಫ್ಯಾನ್ ಆಗಿರುವ ಭಾರದ್ವಾಜ್ ಬೆಳಗಾಮುಂಚೆ ನೌಷದ್ ಸಂಯೋಜಿಸಿದ ಅಮರ ಗೀತೆಗಳನ್ನು ರಾಜಭವನದ ನಿವಾಸದಲ್ಲಿ ಆಲಿಸುತ್ತಾರಂತೆ. ಇಷ್ಟರಮಟ್ಟಿಗೆ ಅವರ ಭಾರತೀಯ ಚಲನಚಿತ್ರಗಳ ಜತೆಗಿನ ಸಂಪರ್ಕ ಜೀವಂತವಾಗಿದೆ.

ನನಗೆ ವಯಸ್ಸಾಗಿದೆ. ಇದು ವಾನಪ್ರಸ್ಥದ ಸಮಯ. ವೇದ, ಉಪನಿಷತ್, ಪುರಾಣ ಮುಂತಾದ ಪ್ರಾಚೀನ ಗ್ರಂಥಳನ್ನು ಓದಿಕೊಂಡು ಕಾಲಹಾಕುವ ಕಾಲ. ಈ ಸಿನಿಮಾ ಗಿನಿಮಾ ನನಗೆ ಒಗ್ಗಲ್ಲ. ಈಗಿನ ಕಾಲದ ಚಿತ್ರಗಳ ಬಗೆಗೆ ನನಗೆ ಇಷ್ಟವಿಲ್ಲ, ಗೊತ್ತೂ ಇಲ್ಲ. ಆದರೆ, ಒಂದು ಮಾತು ಖಂಡಿತ. ಭಾರತೀಯ ಚಲನಚಿತ್ರಗಳಲ್ಲಿ ಮಹಿಳೆಯನ್ನು ಕೀಳಾಗಿ, ಲೈಂಗಿಕ ವಸ್ತುವಾಗಿ ಬಳಸುತ್ತಾರೆನ್ನುವುದು ಖೇದದ ವಿಚಾರ. ಈ ಪ್ರವೃತ್ತಿಗೆ ನನ್ನ ಒಪ್ಪಿಗೆ ಇಲ್ಲ ಎಂದರು ಅಜ್ಜ. ಇದೇ ಉದ್ದೇಶದಿಂದಲೇ ತಾವು ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದಾಗ ಅಶ್ಲೀಲತೆ ತಡೆ ಕಾಯಿದೆಯನ್ನು ಸಂಸತ್ ನಲ್ಲಿ ಮಂಡಿಸಿದ್ದನ್ನು ನೆನೆದರು.

ಆಗಿನ ಕಾಲದಲ್ಲಿ ಚಿತ್ರಗಳು ಕೇವಲ ಮನರಂಜನೆಯ ಸಾಧನಗಳಾಗದೆ, ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತಿದ್ದವು. ಕುಂಟುಂಬ ಮೌಲ್ಯಗಳು, ಮಾನವೀಯತೆ, ಕಷ್ಟ ಸಹಿಷ್ಣುತೆ, ಮನುಷ್ಯ ಮನುಷ್ಯ ಸಂಬಂಧಗಳು ಪ್ರೇಕ್ಷಕನಿಗೆ ಬೋಧಪ್ರದವಾಗಿಯೂ ಇರುತ್ತಿದ್ದವು ಎಂದರು. ತಮ್ಮ ಅಚ್ಚುಮೆಚ್ಚಿನ ಚಿತ್ರಗಳ ಪಟ್ಟಿ ಮಾಡಿದರು; ಸೌಂಡ್ ಆಫ್ ಮ್ಯೂಸಿಕ್, ಕಂ ಸೆಪ್ಟೆಂಬರ್, ನಯಾ ದೌರ್, ಮೊಘಲ್ ಇ ಆಜಾಮ್, ಗಾಂಧಿ ಮುಂತಾದ ಚಿತ್ರಗಳನ್ನು ಹೆಸರಿಸಿದರು. ಅಲ್ಲದೆ, ಭಾರತೀಯ ಚಲನಚಿತ್ರದ ಕೆಲವು ಮೇರು ಕಲಾವಿದರೊಂದಿಗಿನ ತಮ್ಮ ಒಡನಾಟವನ್ನು ಮೆಲಕು ಹಾಕಿದರು.

ಎಂಜಿಆರ್, ಎನ್ಟಿ ರಾಮರಾವ್ ನನ್ನ ಸ್ನೇಹಿತರಾಗಿದ್ದರು, ತಮ್ಮ ಮನೋಜ್ಞ ಚಿತ್ರಗಳ ಮೂಲಕ ಅವರು ಒಂದು ಸಮಾಜವನ್ನೇ ನಿರ್ಮಿಸಿದ ಧೀಮಂತ ಕಲಾವಿದರು ಎಂದ ಭಾರದ್ವಾಜ್, ಡಾ. ಜಯಲಲಿತಾ ಅಭಿನಯ ಹಾಗೂ ಕರುಣಾನಿಧಿಯವರು ಚಿತ್ರ ಸಾಹಿತ್ಯ ಬರೆಯುವ ಮೂಲಕ ಚಿತ್ರರಂಗದಲ್ಲಿ ಕೃಷಿ ಮಾಡಿದುದನ್ನು ಸ್ಮರಿಸಿದರು.

ಭಾರತದ ಅನೇಕಾನೇಕ ಸಿನಿ ಕಲಾವಿದರು ಹಾಗೂ ತಂತ್ರಜ್ಞರ ಹೆಸರುಗಳನ್ನು ಹಂಸರಾಜ್ ಪ್ರಸಾಪಿಸುತ್ತಾ ಹೋದರು. ಅವರಲ್ಲಿ ಅನೇಕರು ತಮ್ಮ ಸ್ನೇಹತರೆಂದು ಹೇಳಿಕೊಂಡರು. ಮುಖ್ಯವಾಗಿ ನೌಷದ್ ಅಲಿ, ದಿಲೀಪ್ ಕುಮಾರ್, ಸಿ. ರಾಮಚಂದ್ರ, ಡೇವಿಡ್ ಅಟೆನ್ ಬರೊ ಹಾಗೂ ರಾಜ್ಯಸಭೆಯಲ್ಲಿ ತಮ್ಮ ಸಹೋದ್ಯೋಗಿ ಆಗಿದ್ದ ನರ್ಗಿಸ್ ಇವರೆಲ್ಲರ ಒಡನಾಟ ತಮಗೆ ಪ್ರಾಪ್ತವಾಗಿತ್ತು ಎಂದರು. ಅಂಥ ಕಲಾವಿದರು ಇನ್ನು ಸಿಗುವುದೇ ಇಲ್ಲವೇನೋ ಎಂಬ ಒಂದು ಸಣ್ಣ ಆತಂಕ ಅವರ ಮಾತಿನಲ್ಲಿ ಇಣುಕು ಹಾಕುತ್ತಿತ್ತು.

ಇವರೆಲ್ಲರ ಮಧ್ಯೆ ಡಾ ರಾಜ್ ಕುಮಾರ್ ಅವರನ್ನು ನೆನೆಯದೆ ರಾಜ್ಯಪಾಲರ ಆವತ್ತಿನ ಭಾಷಣ ಮುಕ್ತಾಯವಾಗುವುದುಂಟೆ? 'ರಾಜ್ ಕುಮಾರ್ ರಾಜಕೀಯ ಪ್ರವೇಶಿಸಲಿಲ್ಲ. ಆದರೆ, ಅವರ ಕಲಾವಂತಿಕೆ ಅತ್ಯುನ್ನತ ಮಟ್ಟದ್ದಾಗಿತ್ತು. ಅವರ ಸ್ಮರಣೆ ಕನ್ನಡ ಸಮಾಜದಲ್ಲಿ ಯಾವತ್ತೂ ಶಾಶ್ವತವಾಗಿರುತ್ತದೆ'ಎಂದರು. ವೇದಿಕೆ ಮೇಲೆ ಪಾರ್ವತಮ್ಮ ರಾಜ್ ಕುಮಾರ್ ಉಪಸ್ಥಿತರಿದ್ದರು.

ಸಿನಿಮಾ ಅತ್ಯಂತ ಪ್ರಭಾವಶಾಲಿ ಮಾಧ್ಯಮ ಆಗಿರುವುದರಿಂದ ಭಾರತದ ಮನರಂಜನೆ ಉದ್ಯಮ ತುಂಬಾ ಎಚ್ಚರಿಕೆಯಿಂದ ವರ್ತಿಸಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಂತೆ ನಮ್ಮದು ಸ್ವೇಚ್ಛಾಚಾರಿ ಸಮಾಜವಲ್ಲ. ಸಿನಿಮಾಗೆ ಬಂಡವಾಳ ಹೂಡಬೇಕು, ನಿಜ, ಲಾಭ ಮಾಡಬೇಕು ನಿಜ, ಆದರೆ ಸಮಾಜ ಸೂಕ್ಷ್ಮಗಳನ್ನು ಅರಿಯದೆ ಚಿತ್ರ ನಿರ್ಮಿಸಿದರೆ ಅಪಾಯ ಎಂದು ಕಿವಿಮಾತು ಹೇಳಿದರು.

ನಮ್ಮ ದೇಶ ಪುರೋಗಾಮಿ ಆಗಿರಬೇಕು. ಪ್ರಗತಿಯ ದಿಕ್ಕಿನಲ್ಲಿ ಹೆಜ್ಜೆ ಇಡಬೇಕು. ಹಾಗೆಂದ ಮಾತ್ರಕ್ಕೆ ನಮ್ಮ ನೆಲ ಲೇಡಿ ಚಟರ್ಲೀಸ್ ಲವ್ವರ್ ದೇಶ ಅಲ್ಲ ಎನ್ನುವುದನ್ನು ನೆನಪಿಡಬೇಕು ಎಂದು ಹೇಳಿ ಮಾತು ಮುಗಿಸಿದರು. ರಾಷ್ಟ್ರಗೀತೆ ಆಲಿಸುವುದರೊಂದಿಗೆ ಮಂದಹಾಸ ಮುಹೂರ್ತ ಕಾರ್ಯಕ್ರಮ ಸಂಪನ್ನವಾಯಿತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada