»   » ಶೇಕಡವಾರು ಪದ್ಧತಿಗೆ ಫಿಲಂ ಚೇಂಬರ್ ಅಸ್ತು!

ಶೇಕಡವಾರು ಪದ್ಧತಿಗೆ ಫಿಲಂ ಚೇಂಬರ್ ಅಸ್ತು!

Subscribe to Filmibeat Kannada

ಹಂಚಿಕೆ ವಿಚಾರವಾಗಿ ಕನ್ನಡ ಚಲನಚಿತ್ರ ನಿರ್ಮಾಪಕರು ಮತ್ತು ಚಿತ್ರಮಂದಿರ ಮಾಲೀಕರ ನಡುವಿನ ಗುದ್ದಾಟಕ್ಕೆ ಇಂದು ತೆರೆ ಬಿದ್ದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆಯಲ್ಲಿ ಸೋಮವಾರ (ನ.16) ನಡೆದ ಸಭೆಯಲ್ಲಿ ಶೇಕಡವಾರು ಪದ್ಧತಿಯನ್ನು ಅಂಗೀಕರಿಸಲಾಯಿತು.

ಶೇಕಡವಾರು ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿ ಎಂಬುದು ನಿರ್ಮಾಪಕರ ಒತ್ತಾಯವಾಗಿತ್ತು. ಇದಕ್ಕೆ ಚಿತ್ರಮಂದಿರದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಾಡಿಗೆ ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಕೆಎಫ್ ಸಿಸಿ ಮಧ್ಯಸ್ಥಿಕೆಯಲ್ಲಿ ಕಗ್ಗ್ಗಂಟಾಗಿದ್ದ ಸಮಸ್ಯೆ ಇದೀಗ ಬಗೆಹರಿದಿದೆ. ಶೇಕಡವಾರು ಪದ್ಧತಿಗೆ ಅತ್ತ ಚಿತ್ರಮಂದಿರದ ಮಾಲೀಕರು ಇತ್ತ್ತ ನಿರ್ಮಾಪಕರ ಸಂಘ ಒಪ್ಪಿಗೆ ಸೂಚಿಸಿದೆ.

ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಮತ್ತು ಬೇರೆ ಭಾಷೆಯ ಚಿತ್ರಗಳಿಗೂ ಶೇಕಡವಾರು ಪದ್ಧತಿ ಅನ್ವಯವಾಗಲಿದೆ. ಬಾಡಿಗೆ ಪದ್ಧತಿಗೆ ನಿರ್ಮಾಪಕರು ಮತ್ತು ಚಿತ್ರ ಪ್ರದರ್ಶಾಕರರು ಗುಡ್ ಬೈ ಹೇಳಿರುವುದಾಗಿ ನಿರ್ಮಾಪಕರ ಸಂಘದ ಕಾರ್ಯದರ್ಶಿ ಜೋಸೈಮನ್ ತಿಳಿಸಿದ್ದಾರೆ.

ಮುಂದಿನ ವಾರ ಕಲಾವಿದರು, ನಿರ್ದೇಶಕರು, ನಿರ್ಮಾಪಕರ ಸಂಘದ ಸಭೆ ಕರೆಯಲಾಗಿದೆ. ಶೇಕಡವಾರು ಕ್ರಮವನ್ನು ಮುಖ್ಯವಾಗಿ ಬಿ ಮತ್ತು ಸಿ ಕೇಂದ್ರಗಳಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ತಿಳಿಸಿದ್ದಾರೆ.

ಒಂದು ವೇಳೆ ಈ ಸಮಸ್ಯೆ ಬಗೆಹರಿಯದಿದ್ದ ಪಕ್ಷದಲ್ಲಿ ಜನವರಿ 1ರಿಂದ ಕನ್ನಡ ಸೇರಿದಂತೆ ಯಾವ ಭಾಷೆಯ ಚಿತ್ರಗಳನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ನಿರ್ಮಾಪಕ ಸಂಘ ಎಚ್ಚರಿಸಿತ್ತು. ಬಾಡಿಗೆ ಪದ್ಧತಿಯಲ್ಲಿ ಚಿತ್ರಗಳು ಬಿಡುಗಡೆಯಾದರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಹಾಗಾಗಿ ಶೇಕಡವಾರು ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿ ಎಂಬುದು ನಿರ್ಮಾಪಕರ ಪ್ರಮುಖ ಅಹವಾಲಾಗಿತ್ತು. ಒಟ್ಟಿನಲ್ಲಿ ನಿರ್ಮಾಪಕರ ಬೇಡಿಕೆಗೆ ಜಯ ಸಿಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada