»   » ಗೃಹ ಸಚಿವರಾಗಿ ಸರ್ವಾನುಮತದಿಂದ ಕಟ್ಟಾ ಆಯ್ಕೆ!

ಗೃಹ ಸಚಿವರಾಗಿ ಸರ್ವಾನುಮತದಿಂದ ಕಟ್ಟಾ ಆಯ್ಕೆ!

Subscribe to Filmibeat Kannada

ಗೃಹ ಸಚಿವರಾಗಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ! ಹಾಗಾದರೆ ವಿ.ಎಸ್.ಆಚಾರ್ಯ ಅವರನ್ನು ಗೃಹ ಖಾತೆಯಿಂದ ಯಡಿಯೂರಪ್ಪ ಕೈಬಿಟ್ಟರೆ ಎಂದು ಗಾಬರಿಯಾಗಬೇಡಿ. ರಾಜ್ಯದ ಅಬಕಾರಿ, ವಾರ್ತಾ ಮತ್ತು ಐಟಿಬಿಟಿ ಸಚಿವ ಕಟ್ಟಾ ಗೃಹ ಸಚಿವರಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಅಷ್ಟೆ. ಕಟ್ಟಾ ಅವರಿಗೆ ನವರಸ ನಾಯಕ ಜಗ್ಗೇಶ್ ತೆರೆಯ ಮೇಲೆ ಈ ಹೊಸ ಖಾತೆಯನ್ನು ಒಪ್ಪಿಸಿದ್ದಾರೆ.

ಜಗ್ಗೇಶ್ ನಟಿಸುತ್ತಿರುವ 'ಲಿಫ್ಟ್ ಕೊಡ್ಲಾ' ಚಿತ್ರದಲ್ಲಿ ಕಟ್ಟಾ ಅವರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದು ಗೃಹ ಸಚಿವರಾಗಿ ಕಾಣಿಸಲಿದ್ದಾರೆ. ಕಟ್ಟಾ ಅವರಿಗೆ ಚಿತ್ರರಂಗ ಹೊಸದಲ್ಲ. ಚಿತ್ರರಂಗದ ಸಂಬಂಧ ಇರುವ ಇಲಾಖೆಯ ಹೊಣೆ ಹೊತ್ತವರು. ಹಾಗಾಗಿ ಬಣ್ಣದ ಬದುಕಿನೊಂದಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಂಟು ಇದ್ದೇ ಇದೆ.

ರಾಜಕೀಯ ಮುಖಂಡರು ಬಣ್ಣಬಳಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯರು ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ನಟಿಸದಿದ್ದರೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.

ಇನ್ನು ಕಲಾವಿದರು ರಾಜಕೀಯ ಬಣ್ಣ ಬಳಿದುಕೊಂಡದ್ದೂ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸದಲ್ಲ. ಉಮಾಶ್ರೀ, ಎಸ್ ಮಹೇಂದರ್, ಶ್ರುತಿ, ಮುಖ್ಯಮಂತ್ರಿ ಚಂದ್ರು, ಸಿ ಪಿ ಯೋಗೇಶ್ವರ್, ಅಂಬರೀಷ್, ಬಿ ಸಿ ಪಾಟೀಲ್, ಸಾಯಿಕುಮಾರ್, ಕುಮಾರ ಬಂಗಾರಪ್ಪ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಅಶೋಕ್ ಕಶ್ಯಪ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ 'ಸ್ವರ್ಗಕ್ಕೆ ಮೂರೇ ಗೇಣು' ಎಂಬ ಅಡಿಬರಹವನ್ನು ನೀಡಲಾಗಿದೆ. ಈ ಚಿತ್ರವನ್ನು ಸಿಎಂಆರ್ ಪ್ರೊಡಕ್ಷನ್ಸ್ ನ ಶಂಕರರೆಡ್ಡಿ ನಿರ್ಮಿಸುತ್ತ್ತಿದ್ದಾರೆ.ವಿ.ಮನೋಹರ್ ಅವರ ಸಂಗೀತ, ರಾಂ ನಾರಾಯಣ್ ಸಂಭಾಷಣೆ, ಉದಯರವಿ ಹೆಗಡೆ ಸಂಕಲನ, ಭಾವಾ ಕಲೆ, ಜಾಲಿ ಬಾಸ್ಟಿನ್ ಸಾಹಸ, ದೇವಾನಂದ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.

ಒಟ್ಟಾರೆಯಾಗಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಸಿನಿಮಾ ಬದುಕಿಗೆ ಜಗ್ಗೇಶ್ ಲಿಫ್ಟ್ ಕೊಟ್ಟಿದ್ದಾರೆ. ಗೃಹ ಖಾತೆಯನ್ನು ಕಟ್ಟಾ ಹೇಗೆ ನಿಭಾಯಿಸಿದ್ದಾರೆ ಎಂಬುದನ್ನು ಕಾದು ನೋಡೋಣ. ಚಿತ್ರದಲ್ಲಿನ ಉಳಿದ ಮುಖಗಳೆಂದರೆ ಸುದರ್ಶನ್, ರಾಜು ತಾಳಿಕೋಟೆ, ಕಿಶೋರ್, ವಿ ಮನೋಹರ್, ಶೋಭರಾಜ್, ಬ್ಯಾಂಕ್ ಜನಾರ್ದನ್, ಬುಲೆಟ್ ಪ್ರಕಾಶ್, ಕಿಲ್ಲರ್ ವೆಂಕಟೇಶ್, ಸಂಗಮೇಶ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada