»   » ಜೋಗಯ್ಯ ಮುಹೂರ್ತದಲ್ಲಿ ಶಿವಣ್ಣ ಕಣ್ಣೀರ ಕೋಡಿ

ಜೋಗಯ್ಯ ಮುಹೂರ್ತದಲ್ಲಿ ಶಿವಣ್ಣ ಕಣ್ಣೀರ ಕೋಡಿ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾವುಕರಾಗಿ ಕಂಬನಿ ಮಿಡಿದ ಪ್ರಸಂಗ ನಡೆದಿದೆ. ಜೋಗಯ್ಯ ಮುಹೂರ್ತಕ್ಕೆ ಅಪ್ಪಾಜಿ ಇಲ್ಲ ಎಂಬ ಕೊರಗು ಅವರನ್ನು ಕಾಡಿ ಕಣ್ಣಂಚು ಒದ್ದೆಯಾದ ಹೃದಯ ಕಲಕುವ ಪ್ರಸಂಗವಿದು. ಶಿವಣ್ಣ ತಮ್ಮ ವೃತ್ತಿ ಜೀವನದ ಏಳು ಬೀಳುಗಳನ್ನು ಬಿಚ್ಚಿಡುತ್ತಾ ಜೋಗಯ್ಯ ಔತಣ ಕೂಟದಲ್ಲಿ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತರು.

ತಮ್ಮ ಗೆಳೆಯ, ಗುರು, ಮಾರ್ಗದರ್ಶಿ ಎಲ್ಲವೂ ಆಗಿದ್ದ ಅಪ್ಪಾಜಿ ಅವರು ಈ ಸಂದರ್ಭದಲ್ಲಿ ಇಲ್ಲದಿರುವುದು ಅವರ ನೋವಿಗೆ ಕಾರಣವಾಯಿತು. ಇದನ್ನು ನೆನೆಯುತ್ತಿದ್ದಂತೆ ಶಿವಣ್ಣನ ಕಣ್ಣಾಲಿಗಳು ತುಂಬಿ ಬಂದವು. ಆಗ ಪಕ್ಕದಲ್ಲೆ ಕುಳಿತಿದ್ದ ಪಾರ್ವತಮ್ಮನವರು ತಮ್ಮ ಪುತ್ರನನ್ನು ಸಂತೈಸಿದರು. ಆದರೂ ಶಿವಣ್ಣನ ಮಡುಗಟ್ಟಿದ ನೋವು ಕಣ್ಣೀರಾಗಿ ಹರಿಯುತ್ತಲೇ ಇತ್ತು.

"ಸುಮ್ಮನಿರು ಅಳಬೇಡ, ಅಭಿಮಾನಿಗಳಲ್ಲಿ ನಿಮ್ಮ ತಂದೆಯನ್ನು ಕಾಣಬೇಕು ನೀನು" ಎಂದು ಪಾರ್ವತಮ್ಮ ಸಂತೈಸಿದರು. ನನ್ನ ಸಾಧನೆ ನೋಡಲು ಅಪ್ಪಾಜಿ ಇರಬೇಕಾಗಿತ್ತು ಎನ್ನುತ್ತಾ ಶಿವಣ್ಣ ತುಂಬಿ ಬಂದ ದುಃಖವನ್ನು ತಡೆಯದೆ ಮತ್ತೆ ಅತ್ತು ಬಿಟ್ಟರು. ಬಹುಶಃ ಅಣ್ಣಾವ್ರ ಸಾವಿನ ಬಳಿಕ ಶಿವಣ್ಣ ಇಷ್ಟೊಂದು ದುಃಖ ವ್ಯಕ್ತಪಡಿಸಿದ್ದು ಇದೇ ಮೊದಲು ಅನ್ನಿಸುತ್ತದೆ.

ಬಳಿಕ ಸಾವರಿಸಿಕೊಂಡ ಶಿವಣ್ಣ, ಅಪ್ಪಾಜಿ ಅವರಿದ್ದಾಗಿನ ವಾತಾವರಣವನ್ನು ಮತ್ತೆ ಕಾಣುತ್ತಿದ್ದೇನೆ. ಅವರ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ. ಅಪ್ಪಾಜಿ ಅವರು ಜೀವ ತುಂಬಿದ್ದ 'ಭಕ್ತ ಕುಂಬಾರ' ಚಿತ್ರವನ್ನು ಮತ್ತೆ ಮಾಡಬೇಕೆಂದಿದ್ದೇನೆ. ಅವಕಾಶ ಸಿಕ್ಕಿದರೆ ಭಕ್ತ ಕುಂಬಾರನಾಗಿ ಮತ್ತೆ ನಿಮ್ಮ ಮುಂದೆ ಬರುತ್ತೇನೆ ಎಂದರು.

ತಮ್ಮ ಚೊಚ್ಚಲ 'ಆನಂದ್' ಚಿತ್ರದಿಂದ ಹಿಡಿದು 'ಜೋಗಯ್ಯ' ತನಕ ಶಿವಣ್ಣ ಮಾತನಾಡಿದರು. ತಮ್ಮ ವೃತ್ತಿ ಬದುಕಿನ ಏಳು ಬೀಳುಗಳು, ಸಾಧಕ ಬಾಧಕಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಅವರ ಪತ್ನಿ ಗೀತಾ, ಪುನೀತ್ ರಾಜ್ ಕುಮಾರ್ ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada