For Quick Alerts
  ALLOW NOTIFICATIONS  
  For Daily Alerts

  ರೆಬಲ್ ಸ್ಟಾರ್ ಬಾಯಿ ಮುಚ್ಚಿಸಿದ ಕಿಚ್ಚ ಸುದೀಪ್!

  By Rajendra
  |

  ಅದು 'ವೀರ ಪರಂಪರೆ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ. ಕಿಚ್ಚ ಸುದೀಪ್, ರೆಬಲ್ ಸ್ಟಾರ್ ಅಂಬರೀಷ್, ವಿಜಯಲಕ್ಷ್ಮಿ ಸಿಂಗ್ ಹಾಗೂ ಐಂದ್ರಿತಾ ರೇ ಮುಖ್ಯಭೂಮಿಕೆಯಲ್ಲಿರುವ ಚಿತ್ರ. ಕಲಾ ಸಾಮ್ರಾಟ್ ಎಸ್ ನಾರಾಯಣ್ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದ್ದಾರೆ. ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ರಸವತ್ತಾಗಿ ನಡೆಯಿತು.

  ರೆಬಲ್ ಸ್ಟಾರ್ ಅಂಬರೀಷ್ ಮೊದಲೆ ನೇರ ನಡೆ ನುಡಿಗೆ ಹೆಸರಾದವರು. ಇದ್ದದ್ದು ಇದ್ದಂಗೆ ಹೇಳುವ ಜಾಯಮಾನ ಅವರದು. ಅಂತಹವರು ಮಾತಿಗೆ ನಿಂತರೆ ಹೇಗಿರುತ್ತದೆ. ನೀವೇ ಊಹಿಸಿ...ಅಂಬರೀಷ್ ಮೈಕ್ ಎತ್ತಿಕೊಂಡು ವಾಗ್ಬಾಣಗಳನ್ನು ಮೊದಲು ಬಿಟ್ಟಿದ್ದು ಐಂದ್ರಿತಾ ರೇ ಮೇಲೆ. ಈ ಅನಿರೀಕ್ಷಿತ ಘಟನೆಯಿಂದ ಐಂದ್ರಿತಾ ಕ್ಷಣಕಾಲ ತಬ್ಬಿಬ್ಬಾದರು.

  ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಐಂದ್ರಿತಾ ಕಪಾಳ ಮೋಕ್ಷ ಪ್ರಕರಣವನ್ನು ಅಂಬರೀಷ್ ನೆನಪಿಸಿಕೊಳ್ಳುತ್ತಾ, ತುಂಬ ಎತ್ತರಕ್ಕೆ ಬೆಳೆದುಬಿಟ್ಟಿದ್ದೀಯಮ್ಮಾ ನೀನು. ನಾಗತಿಹಳ್ಳಿಯನ್ನೆ ಫಿಲಂ ಚೇಂಬರ್ ಗೆ ಬರುವಂತೆ ಮಾಡಿದೆಯಲ್ಲಾ. ಆಗ ನಿನಗೆ ಎಲ್ಲರ ಬೆಂಬಲ ಬೇಕಾಗಿತ್ತು. ಈಗ ನಿನಗೆ ನಾವ್ಯಾರು ಬೇಡವಾ..." ಎನ್ನುತ್ತಿದ್ದರೆ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಬಳಿಕ ಐಂದ್ರಿತಾ ಪ್ಲೀಸ್ ಸಾಕು ಸಾಕು ಎಂದು ಅಂಗಲಾಚಿದ ಬಳಿಕ ಅಂಬಿ ಸುಮ್ಮನಾದರು.

  ಬಳಿಕ ಮಧ್ಯೆ ಪ್ರವೇಶಿಸಿದ ಸುದೀಪ್ ಚಿತ್ರೀಕರಣದಲ್ಲಿ ಅಂಬರೀಷ್ ಅವರನ್ನು ಎಸ್ ನಾರಾಯಣ್ ತುಂಬ ಚೆನ್ನಾಗಿ ನೋಡಿಕೊಂಡಿದ್ದಾಗಿ ಹೇಳಿದರು. ಇದಕ್ಕೆ ಪ್ರತಿಯಾಗಿ ಅಂಬರೀಷ್ ಮಾತನಾಡುತ್ತಾ, ಹೌದು ಹೌದು ತುಂಬಾನೇ ಚೆನ್ನಾಗಿ ನೋಡಿಕೊಂಡರು ಎಂದು ವ್ಯಂಗ್ಯವಾಗಿ ಮಾತನಾಡುತ್ತಾ ಇನ್ನೇನೋ ಹೇಳಲು ಹೋದರು. ಅಷ್ಟರಲ್ಲಿ ಸುದೀಪ್ ಚೆಂಗನೆ ಹಾರಿ ಅಂಬರೀಷ್ ಮಾತನಾಡದಂತೆ ಅವರ ಬಾಯಿಯನ್ನು ಕೈಯಿಂದ ಮುಚ್ಚಿ ಹಿಡಿದರು. ಬಳಿಕ ಅಂಬರೀಷ್ ಹೋಗಲಿ ಬಿಡಿ ಯಾಕೆ ಎಂದು ಸುಮ್ಮನಾದರು.

  ಬಳಿಕ ನಾರಾಯಣ್ ಅವರ ಪತ್ನಿ ಭಾಗ್ಯವತಿ ಅವರ ಕಿವಿಯಲ್ಲಿ ಸುದೀಪ್ ಏನೋ ಪಿಸುಗುಟ್ಟಿ ಸುಮ್ಮನಾದರು. ಸಭೆಯಲ್ಲಿ ಇಲ್ಲೇನು ನಡೆಯುತ್ತಿದೆ ಎಂದು ಬಂದವರು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಇಷ್ಟಕ್ಕೂ ಅಂಬರೀಷ್ ಏನು ಹೇಳಬೇಕೆಂದಿದ್ದರು ಎಂಬುದು ಕಡೆಗೂ ಬಹಿರಂಗವಾಗಲಿಲ್ಲ. ಅಂದಹಾಗೆ ಈ ಚಿತ್ರಕ್ಕೆ ಕತೆ, ಸಂಭಾಷಣೆ, ನಿರ್ದೇಶನ ಮತ್ತು ಸಂಗೀತ ಎಸ್ ನಾರಾಯಣ್ ಅವರದು.

  ಆನಂದ್ ಆಡಿಯೋ ಹೊರತಂದಿರುವ 'ವೀರ ಪರಂಪರೆ' ಧ್ವನಿಸುರುಳಿಯಲ್ಲಿ ಒಟ್ಟು ಆರು ಹಾಡುಗಳಿವೆ. ವಿಜಯಲಕ್ಷ್ಮಿ ಸಿಂಗ್, ಜೈ ಜಗದೀಶ್, ಕೆಎಫ್ ಸಿಸಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್, ಎಸ್ ನಾರಾಯಣ್ ಅವರ ಪತ್ನಿ ಭಾಗ್ಯವತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X