»   »  ಯೋಗರಾಜ ಭಟ್ ನಿರ್ಮಾಣದಲ್ಲಿ ಹೊಸ ಚಿತ್ರ

ಯೋಗರಾಜ ಭಟ್ ನಿರ್ಮಾಣದಲ್ಲಿ ಹೊಸ ಚಿತ್ರ

Subscribe to Filmibeat Kannada

ಚಿತ್ರ ನಿರ್ದೇಶಕ ಯೋಗರಾಜ ಭಟ್ ಅವರಿಗೆ ಯೋಗ ಕೂಡಿಬಂದಿದೆ. ಇಷ್ಟು ದಿನ ಆಕ್ಷನ್, ಕಟ್ ಹೇಳುತ್ತಿದ್ದ ಯೋಗರಾಜ ಭಟ್ ರು ಇದೀಗ ನಿರ್ಮಾಪಕರಾಗಿ ಬದಲಾಗುತ್ತಿದ್ದಾರೆ. ಮುಂಗಾರು ಮಳೆ ಮೂಲಕ ಕಾಸಿನ ಮಳೆ ಸುರಿಸಿದ್ದ ಯೋಗರಾಜ ಭಟ್ ಇದೀಗ ಕಾಸಿನ ಹೊಳೆಯನ್ನು ಹರಿಸಲು ಮುಂದಾಗಿದ್ದಾರೆ.

ಯೋಗರಾಜ ಭಟ್ಟರ ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಕತೆ ಸಿದ್ಧವಾಗಿದೆಯಂತೆ. ಯುವ ಜನತೆಗೆ ಸಂದೇಶ ಕೊಡುವ ಸಂದೇಶಾತ್ಮಕ ಚಿತ್ರ ಇದಾಗಿರುತ್ತದೆ. ಶೀಘ್ರದಲ್ಲೇ ಚಿತ್ರಕತೆ ಹೆಣೆಯಲು ಕುಳಿತುಕೊಳ್ಳಲಿದ್ದಾರೆ ಅನ್ನುತ್ತವೆ ಮೂಲಗಳು. ಅಂದಹಾಗೆ ಈ ಚಿತ್ರಕ್ಕ್ಕೆ ಮನೋಮೂರ್ತಿ ಅವರು ಸಂಗೀತ ಸಂಯೋಜಿಸಲಿದ್ದಾರೆ.

ದಿಗಂತ್ ಹಾಗೂ ಐಂದ್ರಿತಾ ರೇ ಮುಖ್ಯ ಭೂಮಿಕೆಯಲ್ಲಿರುವ 'ಮನಸಾರೆ' ಬಿಡುಗಡೆಯಾಗುತ್ತಲೇ ತಮ್ಮ ಸ್ವಂತ ನಿರ್ಮಾಣ ಚಿತ್ರದಲ್ಲಿ ಭಟ್ಟರು ತೊಡಗಿಕೊಳ್ಳಲಿದ್ದಾರೆ. ಮತ್ತೊಮ್ಮೆ 'ಮುಂಗಾರು ಮಳೆ' ಮಾದರಿಯ ಚಿತ್ರ ತರಬೇಕು ಎಂದು ಯೋಗರಾಜ ಭಟ್ ತೀರ್ಮಾನಿಸಿದ್ದಾರೆ. ಶೀಘ್ರದಲ್ಲೇ ಯೋಗರಾಜ್ ಭಟ್ ಹೊಸ ಚಿತ್ರದ ವಿವರಗಳು ಬಹಿರಂಗವಾಗಲಿವೆ.

ತಮ್ಮ ಹೊಸ ಚಿತ್ರಕ್ಕೆ ಹೊಸ ಮುಖವನ್ನು ಪರಿಚಯಿಸಲಿದ್ದು, ಸತ್ಯ ಹೆಗಡೆಯವರ ಬೆನ್ನ್ನಿಗೆ ಛಾಯಾಗ್ರಹಣದ ಜಬಾಬ್ದಾರಿ ಹೊರಿಸಿದ್ದಾರೆ. ಕತೆ, ಚಿತ್ರಕತೆ ಮತ್ತು ಸಾಹಿತ್ಯ ದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಯೋಗರಾಜ್ ಭಟ್ ಹೊತ್ತಿರುವುದು ವಿಶೇಷ.

ಈ ಚಿತ್ರದಲ್ಲಿ ಜನಪ್ರಿಯ ತಾರೆಗಳು ಇರುವುದಿಲ್ಲ. ಎಲ್ಲರೂ ಹೊಸಬರು ಎಂಬುದು ಮತ್ತೊಂದು ವಿಶೇಷ. ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಯೋಗರಾಜ ಭಟ್, ಶೀಘ್ರದಲ್ಲೇ ಎಲ್ಲವನ್ನೂ ತಿಳಿಸುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆ ಸುರಿಯಲಿ ಎಂದು ಆಶಿಸೋಣ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada