»   »  ಕೈದಿಗಳ ಹೃದಯ ಕದ್ದ ದುನಿಯಾ ವಿಜಯ್

ಕೈದಿಗಳ ಹೃದಯ ಕದ್ದ ದುನಿಯಾ ವಿಜಯ್

Subscribe to Filmibeat Kannada
Duniya Vijay gives lease of life to prisoners
ದಂಡ ಕಟ್ಟಲಾಗದೆ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಸಹಾಯ ಮಾಡುವ ಮೂಲಕ ನಟ ದುನಿಯಾ ವಿಜಯ್ ಮಾನವೀಯತೆ ಮೆರೆದ ಘಟನೆ ಮೈಸೂರಿನ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ದಂಡ ಕಟ್ಟಲಾಗದೆ ಪರಿತಪಿಸುತ್ತಿದ್ದ ಕೈದಿಗಳಿಗೆ ಸ್ನೇಹದ ಹಸ್ತ ಚಾಚಿ ವಿಜಯ್ ನಿಜ ಜೀವನದಲ್ಲೂ ಹೀರೋ ಅನ್ನಿಸಿಕೊಂಡಿದ್ದಾರೆ. ಕೈದಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ವಿಜಯ್ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ'ದೇವರು' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಕೈದಿಗಳ ದುಃಖ ದುಮ್ಮಾನಗಳನ್ನು ಸಮೀಪದಿಂದ ನೋಡುವ ಅವಕಾಶ ವಿಜಯ್ ಗೆ ದಕ್ಕಿತು. ಶಿಕ್ಷೆಯ ಜತೆಗೆ ದಂಡದ ಹಣವನ್ನು ಕಟ್ಟಲಾಗದ ದುಃಸ್ಥಿತಿಯಲ್ಲಿದ್ದ ಕೈದಿಗಳನ್ನು ಕಂಡ ವಿಜಯ್ ಮನ ಕರಗಿತು. ರು.500, 600 ಕಟ್ಟಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಂತಹ ಕೈದಿಗಳಿಗೆ ದಂಡದ ಹಣವನ್ನು ತಾವೇ ಸ್ವತಃ ಪಾವತಿಸಿ ಬಿಡುಗಡೆಗೊಳಿಸಿದರು.

ಮೈಸೂರು ಜಿಲ್ಲಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವಯೋವೃದ್ಧೆ ಗೌರಮ್ಮ(ಸುಮಾರು 60)ಸಹ ಅವರಲ್ಲಿ ಒಬ್ಬರು. ಭಾರಿ ಮೊತ್ತದ ದಂಡ ಕಟ್ಟಲಾಗದೆ ಪರಿತಪಿಸುತ್ತಿದ್ದರು. ಪಿರಿಯಾಪಟ್ಟಣದ ಗೌರಮ್ಮ ವರದಕ್ಷಿಣೆ ಕೇಸಿಗೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿದ್ದರು. ಆಕೆ ಬಿಡುಗಡೆಯಾಗಬೇಕಾದರೆ ರು.50 ಸಾವಿರ ದಂಡ ಕಟ್ಟಬೇಕಿತ್ತು. ಈ ವಿಷಯವನ್ನು ಅರಿತ ವಿಜಯ್ ಮನಸ್ಸು ಕರಗಿತು. ಆಕೆ ಕಟ್ಟ ಬೇಕಾಗಿದ್ದ ದಂಡದ ಹಣ ರು.50 ಸಾವಿರವನ್ನು ಕಟ್ಟಿ ಆಕೆಯನ್ನು ಕಾರಾಗೃಹದಿಂದ ಮುಕ್ತಗೊಳಿಸಿದರು.

ಈ ಸಂದರ್ಭದಲ್ಲಿ ವಿಜಯ್ ಮಾತನಾಡುತ್ತಾ, ಗೌರಮ್ಮನವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಬಳಿ ಶಸ್ತ್ರಚಿಕಿತ್ಸೆಗೆ ದುಡ್ಡಿಲ್ಲ. ಇಂತಹವರನ್ನು ಕಾಪಾಡುವುದು ನಮ್ಮ ಧರ್ಮ ಅಲ್ಲವೆ? ಎಂದು ಭಾವುಕರಾಗಿ ಹೇಳಿದರು. ಈ ಸಂದರ್ಭದಲ್ಲಿ ವಿಜಯ್ ಕುಟುಂಬದವರು ಇದ್ದರು. ಜೈಲಿನಿಂದ ಬಿಡುಗಡೆ ಭಾಗ್ಯ ಕಂಡ ಗೌರಮ್ಮನವರ ಮುಖದಲ್ಲಿ ಕೃತಜ್ಞತೆಯ ಭಾವ ತುಂಬಿತ್ತು. ವಿಜಯ್ ರನ್ನು ಅಪ್ಪಿದ ಅವರು ಗಳಗಳನೆ ಕಣ್ಣೀರು ಸುರಿಸಿದರು.

ದೇವರು ಚಿತ್ರದಲ್ಲಿ ನಟಿಸುತ್ತಿರುವ ಮತ್ತೊಬ್ಬ ನಟ ಸಾಧು ಕೋಕಿಲ ಮಾತನಾಡುತ್ತಾ, ಎಲ್ಲರೂ ತಮ್ಮ ಪಾಡಿಗೆ ತಾವು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಯಾರೂ ಈ ರೀತಿಯ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಮೈಸೂರು ಜಿಲ್ಲಾ ಕಾರಾಗೃಹದ ಚಿತ್ರೀಕರಣದಲ್ಲಿ ವಿಜಯ್ ಕೈದಿಗಳೊಂದಿಗೆ ಬೆರೆತು ಅವರ ಕಷ್ಟಸುಖಗಳನ್ನು ತಿಳಿದುಕೊಂಡರು. ಕೈದಿಗಳ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಯೋಗೀಶನಿಗೆ ವಿಜಯ್ ಗೂಸಾ ಫ್ಯಾಶ್ ಬ್ಲಾಕ್
ವಜ್ರ ದೇಹದ ಹಿಂದಿನ ಮುಗ್ಧ ಮನಸು
ದುನಿಯಾ ವಿಜಯ್ ಗೆ ಫಿಲ್ಮ್ ಫೇರ್ ಪ್ರಶಸ್ತಿ ಗೌರವ
ದುನಿಯಾ ವಿಜಯ್ ಗೆ ಪುರುಸೊತ್ತೇ ಇಲ್ಲವಂತೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada