»   » ಕನ್ನಡ ಚಿತ್ರರಂಗಕ್ಕೆ ಗ್ರಹಣ ಹಿಡಿದಿದೆ: ದ್ವಾರಕೀಶ್

ಕನ್ನಡ ಚಿತ್ರರಂಗಕ್ಕೆ ಗ್ರಹಣ ಹಿಡಿದಿದೆ: ದ್ವಾರಕೀಶ್

Subscribe to Filmibeat Kannada
ಅಸ್ತಂಗತರಾದ ಕನ್ನಡದ ಹಿರಿಯ ನಟ ಕೆ ಎಸ್ ಅಶ್ವತ್ಥ್ ಅವರ ಅಂತಿಮ ದರ್ಶನ ಪಡೆಯಲು ಮತ್ತೋರ್ವ ಹಿರಿಯ ನಟ ದ್ವಾರಕೀಶ್ ಅವರು ಮೈಸೂರಿಗೆ ಆಗಮಿಸಿದ್ದರು. ಅಶ್ವತ್ಥ್ ಅವರ ನಿಧನದ ಬಗ್ಗೆ ದ್ವಾರಕೀಶ್ ತೀವ್ರ ಸಂತಾಪ ವ್ಯಕ್ತಪಡಿಸಿದರು. ಮನನೊಂದು ಅವರು ಅಶ್ವತ್ಥ್ ನಿಧನಕ್ಕೆ ಕಣ್ಣೀರಾದರು.

ದ್ವಾರಕೀಶ್ ಅವರು ಮಾತನಾಡುತ್ತಾ, ನಾವು ಒಬ್ಬೊಬ್ಬರೆ ಕಲಾವಿದರನ್ನು ಕಳೆದುಕೊಳ್ಳುತ್ತಿದ್ದೇವೆ. ಇನ್ನೂ ವಿಷ್ಣುವರ್ಧನ್ ಅವರ ಸಾವಿನ ನೋವಿನಿಂದ ಹೊರಬಂದಿಲ್ಲ. ಆಗಲೇ ಅಶ್ವತ್ಥ್ ಅವರ ಸಾವಿನ ಸುದ್ದಿ ಕನ್ನಡ ಚಿತ್ರರಂಗವನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ. ಕನ್ನಡ ಚಿತ್ರರಂಗಕ್ಕೆ ಎಂತಹದೋ ಗ್ರಹಣ ಹಿಡಿದಿದೆ ಎಂದು ನೋವು ವ್ಯಕ್ತಪಡಿಸಿದರು.

ಮೇರುನಟ ಅಶ್ವಥ್ ಚಿತ್ರಸಂಪುಟ

ತಮ್ಮದೇ ಆದ ಶಿಸ್ತನ್ನು ಅಶ್ವತ್ಥ್ ಅವರು ಮೈಗೂಡಿಸಿಕೊಂಡಿದ್ದರು. ಯಾವುದೇ ದೊಡ್ಡಸ್ಥಿಕೆಗೆ ತಲೆಬಾಗದೆ ತನ್ನದೇ ಆದ ಜೀವನ ವಿಧಾನವನ್ನು ಅನುಸರಿಸುತ್ತಿದ್ದಂತಹ ಹಿರಿಯ ಕಲಾವಿದ. ಅಶ್ವತ್ಥ್ ಅವರ ಪಾತ್ರವನ್ನು ತುಂಬುವ ಮತ್ತೊಬ್ಬ ಕಲಾವಿದನಿಲ್ಲ. ಕನ್ನಡ ಚಿತ್ರರಂಗಕ್ಕೆ ಇಂತಹ ನಟರು ಬೇಕು ಎಂದು ದ್ವಾರಕೀಶ್ ಕಣ್ಣೀರಾದರು.

ನಾಗಹಾವಿನ ಸ್ಟುಡೆಂಟ್ ಹೋದ ಮೇಲೆ ಅವರ ಹಿಂದೆಯೇ ಅವರ ಮೇಷ್ಟ್ರು ಹೊರಟು ಹೋದರು. ನಮ್ಮನ್ನು ದೂರ ಮಾಡಿ ಈಗ ಇಬ್ಬರೂ ಒಂದಾಗಿರುತ್ತಾರೆ ಎಂದು ದುಃಖಿತರಾದರು. ಎಷ್ಟೇ ದೊಡ್ಡವರಾದರೂ ಚಿಕ್ಕದಾಗಿ ಬಾಳುವುದನ್ನು ಕಲಿಸಿದ ಮಹಾನ್ ನಟ. ಅಶ್ವತ್ಥ್ ದೊಡ್ಡ ನಟರಾಗಿದ್ದಾಗಲೂ ಮೈಸೂರಿನಲ್ಲಿ ಜಟಕಾದಲ್ಲಿ ಓಡಾಡುತ್ತಿದ್ದರು. ಸರಳ, ಸಜ್ಜನ ವ್ಯಕ್ತಿ. ಅವರ ಆಶೀರ್ವಾದ ಸದಾ ಕನ್ನಡ ಚಿತ್ರರಂಗಕ್ಕೆ ಇರಲಿ ಎಂದು ಆಶಿಸುತ್ತೇನೆ ಎಂದು ದ್ವಾರಕೀಶ್ ಹೇಳಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada