»   »  ಚಿರು ಕುಮಾರಣ್ಣ ಒಂದಾದ ಗಳಿಗೆ

ಚಿರು ಕುಮಾರಣ್ಣ ಒಂದಾದ ಗಳಿಗೆ

Subscribe to Filmibeat Kannada
ಒಳ್ಳೆಯದೋ ಕೆಟ್ಟದ್ದೋ ಅಂತೂ ಹೆತ್ತವರಿಗೆ ಹೆಗ್ಗಣ ಮುದ್ದು. ಒಳ್ಳೆ ಕಥೆ, ಚುರುಕು ಸಂಭಾಷಣೆಗಳು ಅಪರೂಪವೆನಿಸಿದರೂ ಕನ್ನಡ ಚಿತ್ರಗಳಿಗೆ ನಾವು ಮಣೆ ಹಾಕಬೇಕು. ರೀಮೇಕ್ ಸಂಸ್ಕೃತಿ ರಾಜಾರೋಷವಾಗಿ ಮೆರೆಯುತ್ತಿದ್ದರೂ ಏನೋ ಕನ್ನಡ ಸಿನಿಮಾ ತಾನೆ ಎನ್ನುವುದೊಂದು ಸಮಾಧಾನ. ಇದೇ ವೇಳೆ, ಜಾಹೀರಾತಿಲ್ಲ ಪ್ರಾಯೋಜಕತ್ವ ಇಲ್ಲ ಬಿಡಿಗಾಸು ಲಾಭ ಇಲ್ಲದಿದ್ದರೂನೂನೂನೂವೇ ದಟ್ಸ್ ಕನ್ನಡ ವೆಬ್ ಜಾಲವು ಕನ್ನಡ ಚಿತ್ರಗಳ ಸುದ್ದಿ ಬಿಂಬಗಳನ್ನು ಪ್ರಕಟಿಸುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ.

ಇಷ್ಟಾಗಿಯೂ ಕನ್ನಡವನ್ನು ಬಿಟ್ಟರೆ ನಾವು ದಕ್ಷಿಣ ಭಾರತದ ಇತರ ಭಾಷಾ ಚಲನಚಿತ್ರಗಳ ದೈನಂದಿನ ಸುದ್ದಿ, ವಿಮರ್ಶೆಗಳನ್ನು ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ. ನಮಗದು ಬೇಡ. ಆದರೆ, ಆಗಾಗ, ಸಂದರ್ಭೋಚಿತವಾಗಿ ನೆರೆಯ ಚಿತ್ರರಂಗದಿಂದ ಉಕ್ಕುವ ಕೆಲವು ಸುದ್ದಿಗಳನ್ನು ಕನ್ನಡ ಪತ್ರಿಕೆಯಲ್ಲಿ ದಾಖಲಿಸಬೇಕಾಗುತ್ತದೆ. ಸುದ್ದಿಗಳು ಇಡೀ ದಕ್ಷಿಣ ಭಾರತ ಅಥವಾ ಸಮಗ್ರ ಭಾರತದ ಆಗುಹೋಗುಗಳ ಮೇಲೆ ಪ್ರಭಾವ ಬೀರುವಂತಿದ್ದರೆ ಅಂಥವುಗಳನ್ನು ಕನ್ನಡಿಗರ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ವಿಶೇಷವಾಗಿ ಪರಭಾಷಾ ಚಿತ್ರಗಳಲ್ಲಿ ಕನ್ನಡಿಗರ ಕೈವಾಡ ಇದೆ ಎಂದು ಕಂಡುಬಂದಾಗ ಸುಮ್ಮನಿರುವುದುಂಟೆ!

ಫೆಬ್ರವರಿ 15 ನೆ ತಾರೀಕಿನಂದು ಆಂಧ್ರಪ್ರದೇಶದಿಂದ ಬಂದ ಒಂದು ಸುದ್ದಿ ಹೀರಿಕೊಳ್ಳಿರಿ: ತೆಲುಗು ಚಿತ್ರರಂಗದ ಬಹಳ ಬೇಡಿಕೆಯ ನಟ ಶ್ರೀಕಾಂತ್ ಅವರ ಮಹತ್ವಾಕಾಂಕ್ಷೆಯ ಚಿತ್ರ ಮಹಾತ್ಮಾ ಅಂದು ಹೈದರಾಬಾದಿನಲ್ಲಿ ಆರಂಭವಾಯಿತು. ನಗರದ ಒಂದು ಅಲ್ಯುಮಿನಿಯಮ್ ಕಾರ್ಖಾನೆಯ ಆವರಣದಲ್ಲಿ ಮುಹೂರ್ತ ಸಮಾರಂಭ ಆಯೋಜಿಸಲಾಗಿತ್ತು. ನಾಯಕ ನಟ ಶ್ರೀಕಾಂತ್ ಅವರ ನೂರನೇ ಚಿತ್ರದ ಮುಹೂರ್ತ ಸಂಭ್ರಮಕ್ಕೆ ಪೆದ್ದಪೆದ್ದವಾಳ್ಳು ಬಂದಿದ್ದರು. ಮೆಗಾಸ್ಟಾರ್ ಮತ್ತು ಪ್ರಜಾರಾಜ್ಯಂ ಪಕ್ಷದ ರೋಹಿಣಿ ನಕ್ಷತ್ರ ಚಿರಂಜೀವಿ, ದಾಸರಿ ನಾರಾಯಣ ರಾವ್, ರಾಘವೇಂದ್ರ ರಾವ್, ಕನ್ನಡ ಚಲನಚಿತ್ರರಂಗದ ಚಂದ್ರಚಕೋರ ಎಚ್. ಡಿ. ಕುಮಾರಸ್ವಾಮಿ ಮುಂತಾದವರು ಆಗಮಿಸಿದ್ದರು.

ಚಿರು ಕ್ಲಾಪ್ ಮಾಡಿದರು. ಮೊದಲ ದೃಶ್ಯವನ್ನು ದಾಸರಿ ನಿರ್ದೇಶಿಸಿದರು. ಪೂಜಾ ಕಾರ್ಯಕ್ರಮಗಳಿಗೆ ಕುಮಾರ ಸ್ವಾಮಿ ನಾಂದಿ ಹಾಡಿದರೆ ಡಿ. ರಾಮಾ ನಾಯ್ಡು ಅವರು ಬಾಂಬ್ ಸ್ಫೋಟಿಸುವ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಮಹಾತ್ಮಾ ಚಿತ್ರದ ನಿರ್ದೇಶಕರು ಕೃಷ್ಣವಂಶಿ. ನಿರ್ಮಾಪಕರು, ಕನ್ನಡಿಗ ಹಾಗೂ ಕರ್ನಾಟಕದ ರಾಜಕಾರಣಿ ಸಿ. ಆರ್. ಮನೋಹರ್. ಮಹಾತ್ಮಾ ಮುಹೂರ್ತದ ಚಿತ್ರಗಳಿಗಾಗಿ ಕ್ಲಿಕ್ಕಿಸಿ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada