»   » ಬೆಳ್ಳಿಪರದೆಯ ಚಾಮಯ್ಯ ಮೇಷ್ಟ್ರು ಕೆ ಎಸ್ ಅಶ್ವತ್ಥ್

ಬೆಳ್ಳಿಪರದೆಯ ಚಾಮಯ್ಯ ಮೇಷ್ಟ್ರು ಕೆ ಎಸ್ ಅಶ್ವತ್ಥ್

Posted By:
Subscribe to Filmibeat Kannada
ಕನ್ನಡದ ಹಿರಿಯ ನಟ ಕೆ ಎಸ್ ಅಶ್ವತ್ಥ್ ಅವರು ಬೆಳ್ಳಿತೆರೆಗೆ ಅಡಿಯಿಟ್ಟಿದ್ದು1955ರಲ್ಲಿ ತೆರೆಕಂಡ 'ಸ್ತ್ರೀರತ್ನ' ಚಿತ್ರದ ಮೂಲಕ. 2007ರಲ್ಲಿ ತೆರೆಕಂಡ 'ಭೂಪತಿ' ಚಿತ್ರದ ವೇಳೆ ಅಶ್ವತ್ಥ್ ಅಭಿನಯಿಸಿದ ಚಿತ್ರಗಳ ಸಂಖ್ಯೆ 370ರ ಗಡಿ ತಲುಪಿತ್ತು. ವರನಟ ಡಾ.ರಾಜ್ ಕುಮಾರ್ ಅವರು 'ಬೇಡರ ಕಣ್ಣಪ್ಪ'(1954) ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಮರುವರ್ಷವೇ ಕೆ ಎಸ್ ಅಶ್ವತ್ಥ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ವರನಟ ಡಾ.ರಾಜ್ ಕುಮಾರ್ ಅವರೊಂದಿಗೆ ಅಶ್ವತ್ಥ್ ಬರೋಬ್ಬರಿ 100 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಿಂದ ಅಶ್ವತ್ಥ್ 1994ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದರು. ಆ ಬಳಿಕ ಡಾ.ರಾಜ್ ಕುಮಾರ್ ಅವರ ಒತ್ತಾಯದ ಮೇರೆಗೆ 2000ನೇ ಇಸವಿಯಲ್ಲಿ ಮತ್ತೆ 'ಶಬ್ದವೇದಿ' ಚಿತ್ರಕ್ಕಾಗಿ ಬಣ್ಣಬಳಿದುಕೊಂಡಿದ್ದರು.

'ನಾಗಹಾವು' ಚಿತ್ರದಲ್ಲಿ ರಾಮಾಚಾರಿಯಾಗಿ ನಟಿಸಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಚಾಮಯ್ಯ ಮೇಷ್ಟ್ರಾಗಿ ಅಶ್ವತ್ಥ್ ಮರೆಯಲಾದಅಭಿನಯ ನೀಡಿದ್ದರು. ವಿಷ್ಣು ಜೊತೆ ಅಶ್ವತ್ಥ್ ಅಭಿನಯಿಸಿದ ಕೊನೆಯ ಚಿತ್ರ 'ಸಿರಿವಂತ'. ಇದಕ್ಕೂ ಮುನ್ನ 'ಮೈಸೂರು ಹುಡುಗ'ದರ್ಶನ್ ಗೆ ಅಜ್ಜನಾಗಿ 'ಭೂಪತಿ' ಚಿತ್ರದಲ್ಲಿ ಅಶ್ವತ್ಥ್ ಕಾಣಿಸಿಕೊಂಡಿದ್ದರು.

ಅರವತ್ತರ ದಶಕದಲ್ಲಿ ಹಿರಿಯ ನಟಿ ಪಂಡರಿಬಾಯಿ ಹಾಗೂ ಡಾ.ಲೀಲಾವತಿ ಅವರ ಜತೆ ಅಶ್ವತ್ಥ್ ಜೋಡಿ ಜನಪ್ರಿಯವಾಗಿತ್ತು. 'ಪಂಚಾಮೃತ', 'ಜೇನುಗೂಡು' ಮತ್ತು 'ನಮ್ಮ ಮಕ್ಕಳು' ಚಿತ್ರಗಳು ಅಶ್ವತ್ಥ್ ಅವರ ಜನಪ್ರಿಯ ಚಿತ್ರಗಳು. ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಹಾಗೂ ಕರ್ನಾಟಕ ಸರಕಾರದ ಪ್ರತಿಷ್ಠಿತ ಡಾ.ರಾಜ್ ಕುಮಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಅಶ್ವತ್ಥ್ ಅವರಿಗೆ ಲಭಿಸಿವೆ. ಎರಡು ಬಾರಿ ರಾಜ್ಯ ಸರಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೂ ಅಶ್ವತ್ಥ್ ಭಾಜನರಾಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada