»   » ಖ್ಯಾತ ಅಭಿನೇತ್ರಿ ಸರೋಜಾದೇವಿ ಪ್ರಶಸ್ತಿ ಪ್ರಕಟ

ಖ್ಯಾತ ಅಭಿನೇತ್ರಿ ಸರೋಜಾದೇವಿ ಪ್ರಶಸ್ತಿ ಪ್ರಕಟ

Posted By:
Subscribe to Filmibeat Kannada
B Saroja Devi
"ಪದ್ಮಭೂಷಣ ಡಾ.ಬಿ ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ" ಪ್ರಕಟಿಸಲಾಗಿದೆ. ಭಾರತೀಯ ವಿದ್ಯಾಭವನ, ಬೆಂಗಳೂರು ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ನೀಡಲಾಗುತ್ತಿದೆ. ಖ್ಯಾತ ಕಲಾವಿದರಾದ ಹರಿಣಿ ಎಸ್ ರಾವ್, ಅಂಜಲಿ ದೇವಿ ಮತ್ತು ಜಮುನಾ ರಮಣಾ ರಾವ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ಜೂ.27ರಂದು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುತ್ತದೆ.

ಈ ಬಗ್ಗೆ ವಿವರ ನೀಡಿರುವ ಭವನದ ನಿರ್ದೇಶಕ ಎಚ್ ಎನ್ ಸುರೇಶ್, ಭಾರತೀಯ ವಿದ್ಯಾ ಭವನದ ಸ್ಥಾಪನೆಯಲ್ಲಿ ಸರೋಜಾದೇವಿ ಅವರ ಪಾತ್ರ ಅವಿಸ್ಮರಣೀಯ. ಹಾಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದೇವೆ. ಭಾರತೀಯ ಚಿತ್ರರಂಗದ ವಿವಿಧ ವಿಭಾಗಳಲ್ಲಿ ಸೇವೆ ಸಲ್ಲಿಸಿದ ತಂತ್ರಜ್ಞರು, ಸಂಗೀತಗಾರರು, ಚಿತ್ರಕತೆ ರಚನೆಕಾರರು, ಪ್ರತಿಭಾನಿತ್ವ ಮಹಿಳೆಯರಿಗೆ ಈ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.

ಹಿರಿಯ ಕಲಾವಿದರಾದ ದಿವಂಗತ ಬಿ ಜಯಮ್ಮ, ಬಿ ಜೈಶ್ರೀ ಮತ್ತು ಪಂಡರಿಬಾಯಿ ಅವರನ್ನು ಸನ್ಮಾನಿಸಬೇಕು ಎಂದು ಅಭಿನೇತ್ರಿ ಸರೋಜಾ ದೇವಿ ಅವರು ಬಯಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂಬ ನೋವು ಸರೋಜಾದೇವಿ ಅವರನ್ನು ಇಂದಿಗೂ ಕಾಡುತ್ತ್ತಿದೆ. ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಅಂತಹ ಎಷ್ಟೋ ಮಂದಿ ಕಲಾವಿದರನ್ನು ಸನ್ಮಾನಿಸಲು ಸರೋಜಾ ದೇವಿ ಮುಂದಾದರು. ಅದರ ಪ್ರತಿಶ್ರುತಿಯೇ ಈ ಪ್ರಶಸ್ತಿ ಎಂದು ಸುರೇಶ್ ವಿವರ ನೀಡಿದರು.

ಪ್ರಶಸ್ತಿ ವಿಜೇತರ ಕುರಿತು ಒಂದಿಷ್ಟು
ಹರಿಣಿ: ಮಂಗಳೂರು ಮೂಲದ ಹರಿಣಿ ಅವರು ಬಾಲ ಕಲಾವಿದೆಯಾಗಿ ತಮಿಳು ಚಿತ್ರರಂಗಕ್ಕೆ ಅಡಿಯಿಟ್ಟವರು. ಬಳಿಕ 1951ರಲ್ಲಿ 'ಜಗನ್ಮೋಹಿನಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹಿಂತಿರುಗಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ನಂದಾದೀಪ' ಹಾಗೂ 'ನಾಂದಿ' ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಹರಿಣಿ ಅವರು ಅಭಿನಯಿಸಿದ್ದಾರೆ.

ಅಂಜಲಿ ದೇವಿ:1936ರಲ್ಲಿ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟ ಅಂಜಲಿ ದೇವಿ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಲವ ಕುಶ', 'ಸುವರ್ಣ ಸುಂದರಿ', 'ಅನಾರ್ಕಲಿ' ಆಕೆ ಅಭಿನಯದ ತೆಲುಗು ಚಿತ್ರಗಳು. ಎಲ್ ವಿ ಪ್ರಸಾದ್ ಅವರ 'ಕಷ್ಟ ಜೀವಿ' ಚಿತ್ರ ಆಕೆ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ.

ಜಮುನಾ: ಕರ್ನಾಟಕ ಹಂಪೆ ಮೂಲದವರಾದ ಜಮುನಾ ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳಿನಲ್ಲಿ 198ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ಕಲಾವಿದರ ಸಂಘ ಸ್ಥಾಪಿಸಿದ ಖ್ಯಾತಿ ಜಮುನಾ ಅವರದು. ಬಿ ಆರ್ ಪಂತುಲು ಅವರ 'ರತ್ನಗಿರಿ ರಹಸ್ಯ', ಆರ್ ನಾಗೇಂದ್ರ ರಾಯರ 'ಆದರ್ಶ ಸತಿ' ಹಾಗೂ ಪುಟ್ಟಣ್ಣ ಕಣಗಾಲರ 'ಸಾಕ್ಷಾತ್ಕಾರ' ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada