For Quick Alerts
  ALLOW NOTIFICATIONS  
  For Daily Alerts

  ಕನ್ನಡಿಗ ವಿಕೆ ಮೂರ್ತಿಗೆ ದಾದಾ ಸಾಹೇಬ್ ಫಾಲ್ಕೆ

  |

  ಕನ್ನಡಿಗ, ಹಿರಿಯ ಸಿನಿಮಾ ಛಾಯಾಗ್ರಾಹಕ ವಿಕೆ ಮೂರ್ತಿ ಅವರಿಗೆ 2008ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಭಾರತೀಯ ಚಿತ್ರರಂಗಕ್ಕೆ ಮೂರ್ತಿ ಅವರ ಅಮೋಘ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಆಯ್ಕೆ ಸಮಿತಿ ಅವರ ಹೆಸರನ್ನು ದಾದಾ ಸಾಹೇಬ್ ಪ್ರಶಸ್ತಿಗೆ ಸೂಚಿಸಿತ್ತು.

  ದಾದಾ ಸಾಹೇಬ್ ಫಾಲ್ಕೆ ಅವರು ಸ್ವತಃ ಛಾಯಾಗ್ರಾಹಕರಾಗಿದ್ದರೂ ಸಿನಿಮಾ ಛಾಯಾಗ್ರಾಹಕರೊಬ್ಬರು ಫಾಲ್ಕೆ ಪ್ರಶಸ್ತಿಗೆ ಭಾಜನರಾಗುತ್ತಿರುವುದು ಇದೇ ಮೊದಲು. 'ರಾಜಾ ಹರಿಶ್ಚಂದ್ರ' ಚಿತ್ರಕ್ಕೆ ಫಾಲ್ಕೆ ಅವರು ಅದ್ಭುತ ಛಾಯಾಗ್ರಹಣ ನೀಡಿ ಜೀವ ತುಂಬಿದ್ದರು. ಬಾಜಿ, ಜಾಲ್, ಚೌದಾವಿ ಕಾ ಚಾಂದ್, ಪ್ಯಾಸಾ, 12 ಓ ಕ್ಲಾಕ್, ಜಿದ್ದಿ ಚಿತ್ರಗಳು ಮೂರ್ತಿ ಅವರ ಕಲಾಪ್ರೌಢಿಮೆಗೆ ಸಾಕ್ಷಿ. ಕನ್ನಡದ 'ಹೂವು ಹಣ್ಣು' (ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ) ಚಿತ್ರಕ್ಕೂ ಮೂರ್ತಿ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

  ತಮ್ಮ ಛಾಯಾಗ್ರಹಣ ಮೂಲಕ ಬೆಳ್ಳಿಪರದೆಯ ಮೇಲೆ ದೃಶ್ಯ ವೈಭವನ್ನು ತಂದಂತಹ ಮಹಾನ್ ಕಲಾವಿದ ಮೂರ್ತಿ. ಅತ್ಯಾಧುನಿಕ, ನವೀನ ತಂತ್ರಗಳಿಂದ ಭಾರತೀಯ ಚಿತ್ರರಂಗಕ್ಕೆ ಹೊಸ ದೃಶ್ಯ ವೈಭವ ತಂದ ಅದ್ಭುತ ಛಾಯಾಗ್ರಾಹಕ ಮೂರ್ತಿ. ಭಾರತದ ಮೊದಲ ಸಿನಿಮಾ ಸ್ಕೋಪ್ ಚಿತ್ರ 'ಕಾಗಜ್ ಕೆ ಫೂಲ್' ಚಿತ್ರೀಕರಿಸಿದ ಘನತೆ ಮೂರ್ತಿ ಅವರದು. ಗುರುದತ್ ಅವರ ಚಿತ್ರಗಳಿಗೆ ಹೆಚ್ಚಾಗಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಅನುಭವಿ ಛಾಯಾಗ್ರಾಹಕ ವಿಕೆ ಮೂರ್ತಿ.

  ಬಣ್ಣದ ಛಾಯಾಗ್ರಾಹಕರಾಗಿಯೂ ಮೂರ್ತಿ ಅವರದು ವರ್ಣಮಯ ಬದುಕು. 'ಚೌದಾವಿ ಕಾ ಚಾಂದ್' ಚಿತ್ರದಲ್ಲಿನ ಮೂರ್ತಿ ಅವರ ಛಾಯಾಗ್ರಹಣ ಪ್ರೇಕ್ಷಕರನ್ನು ಸಮ್ಮೋಹನ ಗೊಳಿಸಿತ್ತು. ವಯೋಲಿನ್ ವಾದಕರಾಗಿ ಮೂರ್ತಿ ಅವರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಕಾಗಜ್ ಕೆ ಪೂಲ್ ಮತ್ತು ಸಾಹಿಬ್, ಬೀಬಿ ಔರ್ ಗುಲಾಮ್ ಚಿತ್ರ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿತ್ತು.

  1923ರಲ್ಲಿ ಮೈಸೂರಿನಲ್ಲಿ ವಿಕೆ ಮೂರ್ತಿ ಅವರ ಜನನ. 1943-46ರ ಸಾಲಿನ ಮೊದಲ ಬ್ಯಾಚ್ ನ ವಿದ್ಯಾರ್ಥಿಯಾಗಿ ಬೆಂಗಳೂರಿನ ಎಸ್ ಜೆ ಪಾಲಿಟೆಕ್ನಿಕ್ ನಲ್ಲಿ ಸಿನಿಮಾಟೋಗ್ರಫಿಯಲ್ಲಿ ಡಿಪ್ಲೊಮಾ ಪದವಿ. ಸ್ವಾತಂತ್ರ ಹೋರಾಟಗಾರರೂ ಆಗಿದ್ದ ವಿಕೆ ಮೂರ್ತಿ ಅವರು 1943ರಲ್ಲಿ ಜೈಲು ವಾಸ ಅನುಭವಿಸಿದವರು. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿದಾರರಲ್ಲಿ ಒಬ್ಬರು. ಐದು ದಶಕಗಳ ಕಾಲ ಮುಂಬೈನಲ್ಲಿ ವಾಸ ಮಾಡಿದ ಮೂರ್ತಿ ಅವರು ಇದೀಗ ವಿಶ್ರಾಂತ ಜೀವನವನ್ನು ಬೆಂಗಳೂರಿನಲ್ಲಿ ಕಳೆಯುತ್ತಿದ್ದಾರೆ.

  ಇದುವರೆಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಲ್ಲಿ ಮೂರ್ತಿ ಅವರು 56ನೆಯವರಾಗಿ ನಿಲ್ಲುತ್ತಾರೆ. ಪ್ರಶಸ್ತಿ ಪ್ರದಾನ ದಿನವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ. ಪ್ರಶಸ್ತಿಯು ರು.10 ಲಕ್ಷ ನಗದು ಬಹುಮಾನ, ಸ್ವರ್ಣಕಮಲ ಹಾಗೂ ಶಾಲುವನ್ನು ಒಳಗೊಂಡಿದೆ. ಪ್ರತಿವರ್ಷ ನೀಡುವ ರಾಷ್ಟ್ರೀಯ ಪ್ರಶಸ್ತಿಗಳ ಜೊತೆಯಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ವರನಟ ಡಾ.ರಾಜ್ ಕುಮಾರ್ ಬಳಿಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವ ಎರಡನೆ ಕನ್ನಡಿಗರು ವಿಕೆ ಮೂರ್ತಿ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X