»   »  ಎಚ್ಡಿಕೆ, ಯಡ್ಡಿ ಹುತ್ತಕ್ಕೆ ಕೈಹಾಕಿರುವ ದಯಾಳ್!

ಎಚ್ಡಿಕೆ, ಯಡ್ಡಿ ಹುತ್ತಕ್ಕೆ ಕೈಹಾಕಿರುವ ದಯಾಳ್!

Subscribe to Filmibeat Kannada
Radhika Pandith
ಒಂದು ಕ್ಷಣ ನೀವು ಕಲ್ಪನಾ ಲೋಕದಲ್ಲಿ ವಿಹರಿಸಿ ಬೆಳ್ಳಿತೆರೆಯ ಮೇಲೆ ಈ ದೃಶ್ಯಗಳನ್ನು ಕಲ್ಪಿಸಿಕೊಂಡಿದ್ದೇ ಆದರೆ...ರಾಜಕೀಯದಲ್ಲಿ 'ಬದ್ಧ ದ್ವೇಷಿ'ಗಳಾದ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಸಂಬಂಧಿಗಳಾಗುತ್ತಾರೆ! ಕಾರಣ ಅವರಿಬ್ಬರ ಮಕ್ಕಳು ಒಬ್ಬರನ್ನ್ನೊಬ್ಬರು ಗಾಢವಾಗಿ ಪ್ರೇಮಿಸಿಕೊಂಡು ಅಂತರ್ಜಾತಿ ವಿವಾಹ ಮಾಡಿಕೊಳ್ಳುತ್ತಾರೆ. ಈ ರೀತಿಯ ಕತೆಯೊಂದನ್ನು ಸಿದ್ಧಪಡಿಸಿದ್ದಾರೆ ದಯಾಳ್ ಪದ್ಮನಾಭನ್.

''ಇದೊಂದು ಸಂಪೂರ್ಣ ರಾಜಕೀಯ ವಿಡಂಬನಾತ್ಮಕ ಚಿತ್ರ. ಪ್ರಣಯಭರಿತ ಕಾಮಿಡಿ ಸಿನಿಮಾಗೊಂದು ರಾಜಕೀಯ ತಿರುವು ಕೊಟ್ಟಿದ್ದೇನೆ ಅಷ್ಟೇ '' ಎನ್ನ್ನುತ್ತಾರೆ ದಯಾಳ್. ಚಿತ್ರಕ್ಕೆ ಈಗಾಗಲೇ 'ಕದ್ದು ಮುಚ್ಚಿ' ಎಂದು ಹೆಸರಿಟ್ಟಿರುವುದು ಗೊತ್ತೇ ಇದೆ. ಗೌಡ ಹಾಗೂ ಲಿಂಗಾಯತ ಕುಟುಂಬದ ಇಬ್ಬರು ಪ್ರೇಮಿಗಳು ಒಂದಾಗುವ ಕಥಾ ಹಂದರವನ್ನು ಚಿತ್ರಕತೆ ಹೊಂದಿದೆ ಎಂಬ ವಿವರವನ್ನು ದಯಾಳ್ ನೀಡಿದ್ದಾರೆ.

''ಇಬ್ಬರು ವ್ಯಕ್ತಿಗಳ ಜೀವನ, ಗೆಳೆತನ, ಅಹಮಿಕೆ ಮತ್ತು ಆ ಕುಂಟುಂಬಗಳ ಸುತ್ತ ಕತೆ ಸುತ್ತುತ್ತದೆ. ಇದೊಂದು ಚೇತೋಹಾರಿ ಪ್ರೇಮ ಕತೆ. ದಿಗಂತ್ ಮತ್ತು ರಾಧಿಕಾ ಪಂಡಿತ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರೂ ಭಿನ್ನ ಜಾತಿಗೆ ಸೇರಿರುತ್ತಾರೆ. ಒಬ್ಬರು ಲಿಂಗಾಯತರಾದರೆ ಮತ್ತೊಬ್ಬರು ಗೌಡರಾಗಿರುತ್ತಾರೆ. ಈ ಎರಡುಕುಟುಂಬಗಳ ಯಜಮಾನರ ಹೆಸರು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ'' ಎಂದು ಚಿತ್ರದ ಕಥಾ ಎಳೆಯನ್ನು ಬಿಚ್ಚಿಟ್ಟಿದ್ದಾರೆ ದಯಾಳ್.

ಚಿತ್ರದಲ್ಲಿ ಯಾವುದೇ ವಿವಾದಾತ್ಮಕ ಅಂಶಗಳಿಲ್ಲ. ಈ ರೀತಿಯ ದೊಡ್ಡ ಹೆಸರುಗಳನ್ನು ಚಿತ್ರಕ್ಕೆ ಬಳಸಿಕೊಳ್ಳುವ ಕಷ್ಟ ಏನು ಎಂದು ನನಗೆ ಗೊತ್ತು.ಆದರೆ ಯಾರನ್ನೂ ಅಪಹಾಸ್ಯ ಮಾಡುವ ಉದ್ದೇಶ ನನಗಿಲ್ಲ. ಚಿತ್ರದಲ್ಲಿ ಯಾವುದೇ ಫೈಟ್ ಗಳಿಲ್ಲ, ಕುಲವೈರತ್ವವಿಲ್ಲ.ಎರಡು ಕುಟುಂಬಗಳ ಬಾಂಧವ್ಯವನ್ನು ತೆರೆಗೆ ತರುತ್ತಿದ್ದೇನೆ ಎಂದು ದಯಾಳ್ ಸ್ಪಷ್ಟಪಡಿಸಿದರು. ಏತನ್ಮಧ್ಯೆ ದಯಾಳ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ 'ಹರಿಕತೆ'ಎಂದು ಹೆಸರಿಟ್ಟಿದ್ದು, ಸುಮನ್ ರಂಗನಾಥ್ ಅವರನ್ನು ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ.

ಅಂದಹಾಗೆ ಪತ್ರಕರ್ತ ರವಿಬೆಳಗೆರೆ ಅವರ 'ಮುಖ್ಯಮಂತ್ರಿ ಐ ಲವ್ ಯು' ರಾಧಿಕೆ ನಿನ್ನ ಸರಸವಿದೇನೆ ಎಂಬ ಅಡಿಬರಹದ ಚಿತ್ರ ವಿವಾದಾತ್ಮಕ ವಿಷಯದಿಂದಾಗಿ ಕೋರ್ಟ್ ನ ಮೆಟ್ಟಿಲೇರಿದೆ. ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬ ಸದಸ್ಯರಿಗೆ ಹತ್ತಿರವಾದ ಪಾತ್ರಗಳಿರುವುದರಿಂದ ಗೌಡ ಮತ್ತು ರವಿ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada