»   »  ಮೊಗಳ್ಳಿಯ 'ಕನ್ನಡ ಸಿನಿಮಾ ವಿಶ್ವಕೋಶ'

ಮೊಗಳ್ಳಿಯ 'ಕನ್ನಡ ಸಿನಿಮಾ ವಿಶ್ವಕೋಶ'

By: *ಜಯಂತಿ
Subscribe to Filmibeat Kannada

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವರನಟ ರಾಜಕುಮಾರ್ ಹೆಸರಿನಲ್ಲಿ ಅಧ್ಯಯನ ಪೀಠವೊಂದಿದೆ. ಬೆಂಗಳೂರಿನಲ್ಲಿ ರಾಜ್ ಹೆಸರಿನಲ್ಲಿ ವಿಚಾರ ಸಂಕಿರಣವೊಂದನ್ನು ಹಮ್ಮಿಕೊಂಡಿದ್ದನ್ನು ಬಿಟ್ಟರೆ, ಉಳಿದಂತೆ ಈ ಪೀಠ ಏನು ಮಾಡುತ್ತಿದೆ ಎನ್ನುವುದು ಜನಸಾಮಾನ್ಯರಿಗಿರಲಿ ವಿಶ್ವವಿದ್ಯಾಲಯದ ಕುಲಪತಿ ಮುರಿಗೆಪ್ಪ ಗೌಡರಿಗೂ ಗೊತ್ತಿರಲಿಕ್ಕಿಲ್ಲ. ಇಂಥ ಪೀಠಕ್ಕೆ ನಿರ್ದೇಶಕರಾಗಿ ಕಥೆಗಾರ ಮೊಗಳ್ಳಿ ಗಣೇಶ್ ಬಂದಿದ್ದಾರೆ.

"ಏನಾದರೂ ಮಾಡುತಿರು ತಮ್ಮಾ; ಏನೂ ತೋಚದಿರೆ ಹಿರಿಯರ ಕುರಿತು ತಕರಾರನ್ನಾದರೂ ತೆಗೆಯುತಿರು" ಎನ್ನುವ ಸಾಲಿಗೆ ಸೇರಿದವರು ಮೊಗಳ್ಳಿ. ತಮಗೆ ದೊರೆತ ಹೊಸ ಅವಕಾಶ ಬಳಸಿಕೊಂಡು ಸಿನಿಮಾಕ್ಕೆ ಸಂಬಂಧಿಸಿದ ಒಂದಷ್ಟು ಕೆಲಸ ಮಾಡಲು ಅವರು ಉದ್ದೇಶಿಸಿದ್ದಾರೆ.

ಮೊಗಳ್ಳಿ ಮನಸ್ಸಿನಲ್ಲಿ ಸದ್ಯಕ್ಕಿರುವ ಮಹತ್ವಾಕಾಂಕ್ಷೆಯ ಯೋಜನೆ ಕನ್ನಡ ಸಿನಿಮಾ ವಿಶ್ವಕೋಶದ್ದು. ಕನ್ನಡ ಚಿತ್ರೋದ್ಯಮಕ್ಕೆ ಎಪ್ಪತ್ತೈದು ವರ್ಷ ತುಂಬಿದೆ; ಬೃಹತ್ ಉದ್ಯಮವಾಗಿ ಚಿತ್ರರಂಗ ಬೆಳೆದಿದೆ; ಆದರೂ ಉದ್ಯಮದ ಬೆಳವಣಿಗೆಗೆ ಸಂಬಂಧಿಸಿದ ಮಾಹಿತಿ ಈಗಲೂ ಮರೀಚಿಕೆಯೇ.

ಇತ್ತೀಚೆಗೆ, ಅಮೃತ ಮಹೋತ್ಸವ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರರಂಗದ ವಿವಿಧ ಕ್ಷೇತ್ರಗಳ ಸಾಧಕರ ಬದುಕಿನ ಕುರಿತು ಹೊರತಂದಿರುವ ಎಪ್ಪತ್ತೈದು ಕಿರುಪುಸ್ತಕಗಳನ್ನು ಹೊರತುಪಡಿಸಿದರೆ ಉಳಿದಂತೆ ಸಿನಿಮಾ ಇತಿಹಾಸ ಬಾಯಿಮಾತಿಗೇ ಸೀಮಿತವಾಗಿದೆ. ಹಂಪಿ ವಿವಿಯ ಸಿನಿಮಾ ಇತಿಹಾಸ ಪುಸ್ತಕ ವಿವಾದದ ಧೂಳಿನ ಹೊದಿಕೆಯಲ್ಲಿ ಮಲಗಿದೆ. ಇವೆಲ್ಲವನ್ನೂ ಅರಿತಿರುವ ಮೊಗಳ್ಳಿ, "ಕನ್ನಡ ಸಿನಿಮಾ ವಿಶ್ವಕೋಶ" ಕಟ್ಟಿಕೊಡಲು ಹೊರಟಿದ್ದಾರೆ.

ಮೊಗಳ್ಳಿಯ ಮತ್ತೊಂದು ಕನಸು 'ಆತ್ಮಕಥನ ಮಂಟಪ'. ತಾರೆಗಳ ಪ್ರಭೆಯಲ್ಲಿ ಅನೇಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ತೆರೆಮರೆಯಲ್ಲಿಯೇ ಉಳಿಯುತ್ತಾರಲ್ಲ ಅಂಥವರ ಬದುಕು ಹಾಗೂ ಸಾಧನೆ ಬಗೆಗಿನ ಪುಸ್ತಕ ಮಾಲಿಕೆಯ ಮಂಟಪವಿದು.

ವಿಶ್ವಕೋಶ, ಆತ್ಮಕಥನ ಮಂಟಪ ಹೀಗೆ, ಮೊಗಳ್ಳಿ ಸಿನಿಮಾ ಕನಸು ಕಾಣುತ್ತಿದ್ದಾರೆ. ಅವರ ಪ್ರಕಾರ, ರಾಜ್ ಎನ್ನುವುದು ವ್ಯಕ್ತಿ ವಿಶೇಷಣವಷ್ಟೇ ಅಲ್ಲ, ಅದು ಕನ್ನಡ ಸಿನಿಮಾ ಸಂಸ್ಕೃತಿಯ ಮೂರ್ತರೂಪ. ಆ ಕಾರಣದಿಂದಲೇ ರಾಜ್ ಹೆಸರಿನ ಪೀಠದಿಂದ ಒಟ್ಟಾರೆ ಚಿತ್ರರಂಗಕ್ಕೆ ಉಪಯುಕ್ತವಾಗುವ ಕೆಲಸಗಳು ನಡೆಯಬೇಕು ಎನ್ನುವುದು ಅವರ ಹಂಬಲ. ಮೊಗಳ್ಳಿ ಅವರೇನೊ ಮನಸ್ಸು ಮಾಡಿದ್ದಾರೆ. ಯಾವ ತಕರಾರೂ ಎದುರಾಗದಿದ್ದಲ್ಲಿ ಅವರಿಂದ ಒಂದಷ್ಟು ಅರ್ಥಪೂರ್ಣ ಕೆಲಸ ನಿರೀಕ್ಷಿಸಬಹುದು. ಆಲ್ ದ ಬೆಸ್ಟ್ ಮೊಗಳ್ಳಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada