»   »  ಮಗಧೀರ ಅಬ್ಬರಕ್ಕೆ ತಡೆಯೊಡ್ಡಿದ ರಾಜ್

ಮಗಧೀರ ಅಬ್ಬರಕ್ಕೆ ತಡೆಯೊಡ್ಡಿದ ರಾಜ್

Subscribe to Filmibeat Kannada

ಮಾಧ್ಯಮಗಳ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ರಾಜ್ ದಿ ಶೋಮ್ಯಾನ್ ಚಿತ್ರ ತೆಲುಗಿನ ಬ್ಲಾಕ್ ಬಸ್ಟರ್ ಮಗಧೀರ ಚಿತ್ರದ ಅಬ್ಬರವನ್ನು ತಡೆಯಲು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಬೇರೆ ಭಾಷೆಯ ಚಿತ್ರಗಳಿಂದ ಪೈಪೋಟಿ ಎದುರಿಸುತ್ತಿರುವುದು ವಿಪರ್ಯಾಸವಾದರೂ ಮಗಧೀರ ಚಿತ್ರದ ನಾಗಾಲೋಟಕ್ಕೆ ಉತ್ತಮ ಪ್ರಶಂಸೆಗೆ ಒಳಗಾಗಿದ್ದ 'ಮಳೆ ಇರಲಿ ಮಂಜು ಬರಲಿ' ಎನ್ನುವ ಸದಭಿರುಚಿಯ ಚಿತ್ರ ಸೋಲುಡಿದ್ದಂತೂ ಕಹಿಸತ್ಯ. ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಸಿಂಗ್ ಬಾಬು, ಪಾಪ.

ಮಗಧೀರ ಚಿತ್ರಕ್ಕೂ ತನಗೂ ಸಂಬಂಧವೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಜಗ್ಗೇಶ್, ಗುರುಪ್ರಸಾದ್ ಜೋಡಿಯ 'ಎದ್ದೇಳು ಮಂಜುನಾಥ' ಚಿತ್ರ ತುಂಬಿದ ಪ್ರದರ್ಶನ ಕಾಣುತ್ತಿರುವುದು ಕನ್ನಡ ಚಿತ್ರರಂಗದ ಈ ವರ್ಷದ ಮಟ್ಟಿಗೆ ಉತ್ತಮ ಬೆಳವಣಿಗೆ ಎನ್ನಬಹುದು. ಬಲ್ಲ ಮೂಲಗಳ ಪ್ರಕಾರ ಕಡಿಮೆ ಬಜೆಟ್ಟಿನ ಚಿತ್ರ ಮಂಜುನಾಥ ಈಗಾಗಲೇ ಎರಡು ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಬೆಂಗಳೂರಿನಲ್ಲಿ ಆರು ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿದೆ. ರಾಜ್ ಚಿತ್ರ ಮೊದಲವಾರ ಚೆನ್ನಾಗಿತ್ತಾದರೂ ಎರಡನೆ ವಾರಕ್ಕೆ ಏಳೆಂಟು ಚಿತ್ರಮಂದಿರಗಳಿಂದ ಎತ್ತಂಗಡಿಯಾಗುವ ಸೂಚನೆಗಳ ಲಭ್ಯವಾಗಿವೆ.

ಇಲ್ಲಿಯವರೆಗಿನ ಬಾಕ್ಸ್ ಆಫೀಸ್ ವರದಿ ಪ್ರಕಾರ ರಾಜ್ ಚಿತ್ರ ಸುಮಾರು ರು.5.5 ಕೋಟಿ ಗಳಿಕೆ ಕಂಡಿದೆ ಎಂದು ವಿತರಕ ಜಯಣ್ಣ ತಿಳಿಸಿದ್ದಾರೆ. ಕಳೆದ ವಾರಾಂತ್ಯದಲ್ಲಿ ನಗರದ ಮಲ್ಟಿಪ್ಲೆಕ್ಸ್ ಗಳಲ್ಲಿ ಈ ಚಿತ್ರ 19 ಶೋ ಪ್ರದರ್ಶನ ಕಂಡಿದೆ. ಕನ್ನಡದ ಮಟ್ಟಿಗೆ ಇದೊಂದು ದಾಖಲೆ. ನಿರ್ದೇಶಕ ಪ್ರೇಮ್ ಪ್ರಕಾರ ರಾಜ್ ಚಿತ್ರ ರಾಜ್ಯದ ಎಲ್ಲಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

''ಮಗಧೀರ ಬರೋಬ್ಬರಿ 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರ . ನನಗೆ ನಿರ್ಮಾಪಕರು ಅಷ್ಟು ದುಡ್ಡು ಕೊಟ್ಟಿದ್ದರೆ ಬರೀ ವಿಮಾನದಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದೆ. ನಮ್ಮ ಚಿತ್ರದ ಛಾಯಾಗ್ರಹಣ, ಚಿತ್ರೀಕರಣ ಮತ್ತು ಲೊಕೇಶನ್ ಯಾವುದೇ ಬಾಲಿವುಡ್ ಚಿತ್ರಗಳಿಗಿಂತ ಕಮ್ಮಿಯಿಲ್ಲ'' ಎಂದು ಪ್ರೇಮ್ ಬೆನ್ನು ತಟ್ಟಿಕೊಂಡಿದ್ದಾರೆ.

ನಮ್ಮ ಕೋಟಿ ನಿರ್ಮಾಪಕ ರಾಮು, ತಮಿಳಿನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ 'ಕಂದಸ್ವಾಮಿ'(ತೆಲುಗಿನಲ್ಲಿ ಮಲ್ಲನ್ನ) ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಈ ಚಿತ್ರ ಇದೇ ಶುಕ್ರವಾರ (ಆ. 21) ಬಿಡುಗಡೆ ಕಾಣಲಿದೆ. ಈಗ ರಾಮು ಚಲನಚಿತ್ರ ಮಂಡಳಿಯ ನಿಯಮವನ್ನು ಪಾಲಿಸುತ್ತಾರೋ, ಗಾಳಿಗೆ ತೂರುತ್ತಾರೊ ಕಾದು ನೋಡಬೇಕು. ಮಗಧೀರ ಚಿತ್ರದ ನಂತರ ಕಂದಸ್ವಾಮಿ ಚಿತ್ರ ಕನ್ನಡ ಚಿತ್ರಗಳಿಗೆ ಪೈಪೋಟಿ ನೀಡಿದರೆ ಚಲನಚಿತ್ರ ಮಂಡಳಿ ಏನು ಕ್ರಮ ತೆಗೆದುಕೊಳ್ಳುತ್ತದೆ ? ಬಹುಶಃ ಜಯಮಾಲ ಬಳಿಯೂ ಇದಕ್ಕೆ ಉತ್ತರ ಇದೆಯೋ ಇಲ್ಲವೊ?

ಅಂತೂ, ಕುದುರೆ ರೇಸಿಂಗ್ ನುಡಿಗಟ್ಟುಗಳಲ್ಲಿ ಬಣ್ಣಿಸುವುದಾದರೆ ರಾಜ್ ಸಿನಿಮಾಗೆ sprinters cup ಲಭ್ಯವಾದರೆ, ಎದ್ದೇಳು ಮಂಜುನಾಥನಿಗೆ stayers cup ಸಿಕ್ಕಿದೆ. ಇವುಗಳ ಮಧ್ಯೆ ಪ್ರೇಮ್ ಕಹಾನಿ ಚಿತ್ರ, ಸಾಫ್ಟ್ ವೇರ್ ಕಂಪನಿಗಳ ಎಚ್ ಆರ್ ಡಿ ಭಾಷೆಯ bench ನಲ್ಲಿ ಕೂತಿದೆ. ಅಬ್ಬರ, ಗೊಬ್ಬರಗಳ ನಡುವೆ ಮುನಿಯಾ ಚಿತ್ರ ಮಾತ್ರ ಅಪ್ಪಚ್ಚಿಯಾಗಿದೆ.

ಇದೇ ವೇಳೆ, ಪ್ರೇಮ್ ಮತ್ತು ಪುನಿತ್ ಜೋಡಿಯ ಮತ್ತೊಂದು ಭಾರಿ ಬಜೆಟ್ ನ ಚಿತ್ರಕ್ಕೆ ಮಸ್ತ್ ಮಜಾ ಮಾಡಿ ಚಿತ್ರದ ನಿರ್ಮಾಪಕ ಸೌಂದರ್ಯ ಜಗದೀಶ್ ಕೈ ಹಾಕಿದ್ದಾರೆನ್ನುವ ಸುದ್ದಿ ಗಾಂಧಿನಗರದಿಂದ ಹೊರಬಿದ್ದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada