»   »  ಕನ್ನಡಕ್ಕೆ ಏಕ್ ದೋ ತೀನ್... ನೃತ್ಯ ನಿರ್ದೇಶಕಿ!

ಕನ್ನಡಕ್ಕೆ ಏಕ್ ದೋ ತೀನ್... ನೃತ್ಯ ನಿರ್ದೇಶಕಿ!

Subscribe to Filmibeat Kannada
Saroj Khan in Kannada
ರಿಸೆಷನ್ನು ಅಂತ ಕಣ್ಣೀರು ಹಾಕುತ್ತಿರುವವರ ನಡುವೆ ಇಲ್ಲೊಂದು ತಂಡ ಬಿಂದಾಸ್ ಆಗಿ ಕನ್ನಡ ಸಿನಿಮಾ ಮೇಲೆ ದುಡ್ಡು ಸುರಿದಿದೆ. ಮನಿಶ್ ಬನ್ಸಲ್, ಸಿ.ಎನ್.ವೆಂಕಟೇಶ್ ಹಾಗೂ ಶೆಟ್ಟಿ ಮಂಜು ಹಣ ಸುರಿದವರು. ಸಿನಿಮಾ ಹೆಸರು ಯುವ.

ಸೋಮವಾರ (ಜ. 19) ಬೆಂಗಳೂರಿನ ಸಿಟಿ ಸೆಂಟ್ರಲ್ ಹೋಟೆಲ್‌ನ ಸಭಾಂಗಣವೆಲ್ಲಾ ತಣ್ಣಗಾಗುವಂತೆ ಕೂಲರ್‌ಗಳನ್ನು ತರಿಸಿ, ಅಡಿಗಡಿಗೆ ಪೋಸ್ಟರುಗಳನ್ನು ನಿಲ್ಲಿಸಿ, ಗಾಯಕಿ ಚೈತ್ರಾ ಅವರಿಂದ ನಿರೂಪಣೆ ಮಾಡಿಸಿ ಕ್ಯಾಸೆಟ್ ಬಿಡುಗಡೆ ಸಮಾರಂಭವನ್ನು ರಂಗುರಂಗಾಗಿ ಮಾಡಿಸಿದ ಶ್ರೇಯಸ್ಸು ಈ ನಿರ್ಮಾಪಕರಿಗೆ ಸಲ್ಲಬೇಕು.

ಬಾಲಿವುಡ್‌ನ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಈ ಚಿತ್ರದ ಹಾಡೊಂದಕ್ಕೆ ನೃತ್ಯ ನಿರ್ದೇಶನ ಮಾಡಿರುವುದು ಅಗ್ಗಳಿಕೆ. ಸರೋಜ್ ಖಾನ್ ನೃತ್ಯ ನಿರ್ದೇಶನ ಮಾಡಿರುವ ಕನ್ನಡದ ಮೊದಲ ಚಿತ್ರವಿದು. ಅವರು ಕೃಷ್ಣಾ..." ಎಂಬ ಹಾಡಿಗೆ ನಾಯಕಿ ಮಧು ಶರ್ಮ ಹಾಗೂ ಸಹನರ್ತಕಿಯರಿಂದ ಹೆಜ್ಜೆ ಹಾಕಿಸಿದ್ದಾರೆ. ಕೆಂಪು ಹಾಸಿನ ಮೇಲೆ ಒಂದುವರೆ ಡಜನ್ನು ನರ್ತಕಿಯರು ಲಾಲಿತ್ಯದಿಂದ ಕುಣಿಯುವ ಈ ನೃತ್ಯ ಮನೋಹರವಾಗಿ ಮೂಡಿಬಂದಿದೆ. ಈ ಹಾಡಿನಲ್ಲಿ ಖುದ್ದು ಸರೋಜ್ ಖಾನ್ ಕೆಲವು ಸೆಕೆಂಡುಗಳಷ್ಟು ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ.ಹಿಂದಿಯ 'ತೇಜಬ್' ಚಿತ್ರದ 'ಏಕ್ ದೋ ತೀನ್...' ಹಾಡಿಗೆ ನೃತ್ಯ ಸಂಯೋಜಿಸುವ ಮೂಲಕ ಸರೋಜ್ ಖಾನ್ ಜನಪ್ರಿಯರಾಗಿದ್ದರು.

ಕೆ.ನರೇಂದ್ರ ಬಾಬು ನಿರ್ದೇಶಿಸಿರುವ ಯುವ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದು ಗುರುಕಿರಣ್. ಮಾರ್ಷಲ್ ಆರ್ಟ್ಸ್ ಪರಿಣತ ಯಜ್ಞೇಶ್ ಶೆಟ್ಟಿ ಸಾಹಸ ಸಂಯೋಜನೆ ಮಾಡಿದ್ದಾರೆ. ಅವರಿಗೆ ಕೈಜೋಡಿಸಿರುವುದು ಥ್ರಿಲ್ಲರ್ ಮಂಜು.

ನಾಯಕ ಕಾರ್ತಿಕ್ ನಾಲ್ಕು ವರ್ಷ ಯಜ್ಞೇಶ್ ಗರಡಿಯಲ್ಲಿ ಮಾರ್ಷಲ್ ಆರ್ಟ್ಸ್ ಕಲಿತಿದ್ದಾರೆ. ನೃತ್ಯ ಹಾಗೂ ಸಾಹಸದ ದೃಶ್ಯಗಳಲ್ಲಿ ಅವರು ಉತ್ಸಾಹದಿಂದ ಅಭಿನಯಿಸಿರುವುದು ಚಿತ್ರತಂಡದಲ್ಲಿ ಸಂಚಲನೆ ಮೂಡಿಸಿದೆ. ನಲವತ್ತು ಅಡಿ ಎತ್ತರ ಹಾಗೂ ಇಪ್ಪತ್ತು ಅಡಿ ಅಗಲದ ಸ್ಟ್ಯಾಂಡ್ ನಿರ್ಮಿಸಿ ಅದರ ಮೇಲೆ ಹೊಡೆದಾಟದ ದೃಶ್ಯ ಚಿತ್ರೀಕರಿಸಿದ್ದಾರೆ. ಈ ದೃಶ್ಯ ನೋಡಿ ಖುದ್ದು ನಿರ್ದೇಶಕರಿಗೇ ರೋಮಾಂಚನವಾಗಿದೆಯಂತೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada