»   » ಶೆಣೈ 'ಪ್ರಾರ್ಥನೆ'ಗೆ ನಟಿ ಸುಧಾರಾಣಿ ಇಲ್ಲ

ಶೆಣೈ 'ಪ್ರಾರ್ಥನೆ'ಗೆ ನಟಿ ಸುಧಾರಾಣಿ ಇಲ್ಲ

Subscribe to Filmibeat Kannada

ಪತ್ರಕರ್ತ ಸದಾಶಿವ ಶೆಣೈ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ 'ಪ್ರಾರ್ಥನೆ' ಚಿತ್ರದಲ್ಲಿ ತಾವು ನಟಿಸುತ್ತಿರುವ ಸುದ್ದಿಯನ್ನು ನಟಿ ಸುಧಾರಾಣಿ ತಳ್ಳಿಹಾಕಿದ್ದಾರೆ. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅನಂತನಾಗ್ ಜತೆ ಸುಧಾರಾಣಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಪ್ರಕಟವಾಗಿತ್ತು. ಆದರೆ ಈ ಚಿತ್ರದಲ್ಲಿ ತಾವು ನಟಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಾರ್ಥನೆ ಚಿತ್ರದ ಹಾಡಿನ ಚಿತ್ರೀಕರಣ ಈಗಾಗಲೇ ಭರದಿಂದ ನಡೆಯುತ್ತಿದ್ದು ಇದಕ್ಕಾಗಿ ಶಾಲೆಯ ಸೆಟ್ಟೊಂದನ್ನು ಕಳೆದ ನಾಲ್ಕು ದಿನಗಳಿಂದ ಬಂಗಡಿ ಬಳಿ ನಿರ್ಮಿಸಲಾಗುತ್ತಿದೆ. ಸುಧಾರಾಣಿ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ವಿಷಯ ತಿಳಿದ ಶೆಣೈ ಅವರು ಚಿತಾಕ್ರಾಂತರಾಗಿದ್ದು ಮತ್ತೊಬ್ಬ ನಾಯಕಿಯ ಹುಡುಕಾಟದ ಕಷ್ಟಕ್ಕೆ ಸಿಲುಕಿದ್ದಾರೆ.

ಉದಯ ಟಿವಿಯ ಧಾರಾವಾಹಿ ನಿರ್ದೇಶಕರೊಬ್ಬರು 'ಪ್ರಾರ್ಥನೆ' ಚಿತ್ರದಲ್ಲಿ ನಟಿಸುವಂತೆ 'ಸುಧಾರಾಣಿ' ಅವರಿಗೆ ಅವಕಾಶ ಕಲ್ಪಿಸಿದ್ದರು. ಆದರೆ ಡಿಸೆಂಬರ್ ನಲ್ಲಿ ಸುಧಾರಾಣಿ ವಿದೇಶ ಪ್ರವಾಸಕ್ಕೆ ಹೊರಡುತ್ತಿದ್ದಾರೆ. ಅವರು ಕರ್ನಾಟಕಕ್ಕೆ ಮರಳುವುದು ಜನವರಿ 6ಕ್ಕೆ. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗುವುದಿಲ್ಲ. ಇದ್ಯಾವುದರ ಅರಿವಿಲ್ಲದ ಟಿವಿ ಧಾರಾವಾಹಿ ನಿರ್ದೇಶಕರು 'ಪ್ರಾರ್ಥನೆ' ಚಿತ್ರದಲ್ಲಿ 'ಸುಧಾರಾಣಿ' ನಟಿಸಲಿದ್ದಾರೆ ಎಂದು ಭರವಸೆ ನೀಡಿದ್ದರು.

ಇದೀಗ ಸದಾಶಿವ ಶೆಣೈ ಅವರು ಇಕ್ಕಟ್ಟಿಗೆ ಸಿಲುಕಿದ್ದು ಅನಂತನಾಗ್ ಗೆ ಒಪ್ಪುವ ಜೋಡಿಯ ಹುಡುಕಾಟದಲ್ಲಿದ್ದಾರೆ. ಸುಧಾರಾಣಿ ಸ್ಥಾನಕ್ಕೆ ನಂದಿನಿ ಆಳ್ವಾ, ವಿನಯಾ ಪ್ರಸಾದ್ ಅಥವಾ ಭಾವನಾ ಹೆಸರುಗಳು ಕೇಳಿಬಂದಿವೆ. ಒಟ್ಟಿನಲ್ಲಿ ಶೆಣೈ ಅವರ ಪ್ರಾರ್ಥನೆಗೆ ಆರಂಭದಲ್ಲೇ ದೊಡ್ಡ ವಿಘ್ನವೊಂದು ಎದುರಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada